Saturday, 20th January 2018

ಆಟೋ ಮೇಲೆ ಹರಿದ ಲಾರಿ – ಮೂವರು ಸ್ಥಳದಲ್ಲೇ ಸಾವು

ಚಿಕ್ಕಬಳ್ಳಾಪುರ: ದೇವರ ದರ್ಶನಕ್ಕೆ ಅಂತ ತೆರಳುತ್ತಿದ್ದವರ ಮೇಲೆ ಬೆಳ್ಳಂಬೆಳಿಗ್ಗೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರ ಹೊರವಲಯದ ಮಾಡಿಕೆರೆ ಕ್ರಾಸ್ ಬಳಿ ಆಟೋ ಮೇಲೆ ಲಾರಿ ಹರಿದ ಪರಿಣಾಮ ಆಟೋದಲ್ಲಿದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಕುರಟಹಳ್ಳಿ ಗ್ರಾಮದ 45 ವರ್ಷದ ಮುರುಳಿ, 55 ವರ್ಷದ ಅಶ್ವತ್ಥಪ್ಪ ಹಾಗೂ ರಾಮಪುರ ಗ್ರಾಮದ 35 ವರ್ಷದ ಚಲಪತಿ ಮೃತ ದುರ್ದೈವಿಗಳು. ಆಂಧ್ರದ ಬಾಯಿಕೊಂಡ ಗಂಗಮ್ಮ ದೇವಸ್ಥಾನಕ್ಕೆ ಆಟೋ ಮೂಲಕ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಆಟೋದಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮತ್ತೋರ್ವ ವ್ಯಕ್ತಿ ಕಾಚಹಳ್ಳಿ ಗ್ರಾಮದ 50 ವರ್ಷದ ನಂಜಂಡಪ್ಪ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಲಾರಿ ಚಾಲಕ ನಿದ್ದೆಗೆ ಜಾರಿರುವುದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಮೊದಲು ಆಟೋ ಮೇಲೆ ಹರಿದ ಲಾರಿ ನಂತರ ರಸ್ತೆ ಬದಿಯ ಸಿಮೆಂಟ್ ತಡೆಗೋಡೆಗಳಿಗೆ ಡಿಕ್ಕಿ ಹೊಡೆದು ಮುಂದೆ ಹೋಗಿ ನಿಂತಿದೆ. ಘಟನೆ ನಂತರ ಲಾರಿ ಚಾಲಕ ಪರಾರಿಯಾಗಿದ್ದಾನೆ.

ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Leave a Reply

Your email address will not be published. Required fields are marked *