SSLC ವಿದ್ಯಾರ್ಥಿಗಳೇ ಗಮನಿಸಿ- 1 ನಿಮಿಷ ತಡವಾಗಿ ಹೋದ್ರೂ ಎಕ್ಸಾಂ ಹಾಲ್‍ಗೆ ಪ್ರವೇಶವಿಲ್ಲ

– ಎಸ್‍ಎಸ್‍ಎಲ್‍ಸಿ ಬೋರ್ಡ್‍ನಿಂದ ಕಟ್ಟುನಿಟ್ಟಿನ ಕ್ರಮ

ಬೆಂಗಳೂರು: ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಗೆ ಲೇಟ್ ಆಗಿ ಹೋದ್ರೆ ಪರೀಕ್ಷೆ ಬರೆಯೋ ಅವಕಾಶವನ್ನ ಮಿಸ್ ಮಾಡಿಕೊಳ್ಳಬೇಕಾಗುತ್ತದೆ. ನಿಗದಿತ ಸಮಯಕ್ಕಿಂತ ಒಂದು ನಿಮಿಷ ತಡ ಮಾಡಿದ್ರೂ ಪರೀಕ್ಷಾ ಕೊಠಡಿಗೆ ಪ್ರವೇಶ ಇರುವುದಿಲ್ಲ. ಈ ಬಗ್ಗೆ ಎಸ್‍ಎಸ್‍ಎಲ್‍ಸಿ ಬೋರ್ಡ್‍ನಿಂದ ಸುತ್ತೋಲೆ ಬಂದಿದೆ.

ಪೇಪರ್ ಲೀಕ್ ತಡೆಗಟ್ಟಲು ಹಾಗೂ ಪರೀಕ್ಷೆಯನ್ನ ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಎಸ್‍ಎಸ್‍ಎಲ್‍ಸಿ ಬೋರ್ಡ್ ನಿಂದ ಈ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ಎಷ್ಟು ಗಂಟೆಗೆ ಹಾಜರಿರಬೇಕು?: ಪರೀಕ್ಷೆ ಪ್ರಾರಂಭವಾಗೋದು ಬೆಳಗ್ಗೆ 9.30ಕ್ಕೆ. ಬೆಳಗ್ಗೆ 9.15 ರಿಂದ 9.30ರೊಳಗೆ ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳು ಹಾಜರಾಗೋದು ಕಡ್ಡಾಯ. ಬೆಳಗ್ಗೆ 9.15ಕ್ಕೆ ಮೊದಲ ಲಾಂಗ್ ಬೆಲ್ ಹೊಡೆಯಲಿದ್ದು ಪರೀಕ್ಷಾ ಕೊಠಡಿಗೆ ವಿದ್ಯಾರ್ಥಿಗಳು ಹಾಜರಾಗಬೇಕು. ಬೆಳಗ್ಗೆ 9.25ಕ್ಕೆ ಎರಡನೇ ಲಾಂಗ್ ಬೆಲ್ ಆದಾಗ ಮುಖ್ಯ ಅಧೀಕ್ಷಕರಿಂದ ಕೊಠಡಿ ಮೇಲ್ವೀಚಾರಕರ ಕೈಗೆ ಪ್ರಶ್ನೆ ಪತ್ರಿಕೆ ನೀಡಲಾಗುತ್ತದೆ. 9.30ಕ್ಕೆ ಮೂರನೇ ಲಾಂಗ್ ಬೆಲ್ ಆದಾಗ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ವಿತರಣೆ ಮಾಡಲಾಗುತ್ತದೆ. 9.30ರ ನಂತರ ತಡವಾಗಿ ಬರುವ ವಿದ್ಯಾರ್ಥಿಗಳಿಗೆ ಪ್ರವೇಶವಿಲ್ಲ. ಈ ಬಗ್ಗೆ ಎಸ್‍ಎಸ್‍ಎಲ್‍ಸಿ ಬೋರ್ಡ್, ಡಿಡಿಪಿಐಗಳು ಹಾಗೂ ಬಿಇಓಗಳ ಮೂಲಕ ಎಲ್ಲ ಶಾಲೆಗಳಿಗೆ ಸುತ್ತೋಲೆ ಕಳಿಸಿದೆ.

ಈ ಹಿಂದೆ 9.30 ರಿಂದ 10 ಗಂಟೆಯೊಳಗೆ ವಿದ್ಯಾರ್ಥಿಗಳು ಬಂದರೆ ಮಾನವೀಯತೆ ದೃಷ್ಟಿಯಿಂದ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡಲಾಗುತ್ತಿತ್ತು. ಈ ಸಮಯ ದುರುಪಯೋಗ ಆಗಬಹುದು ಅನ್ನೋ ನಿಟ್ಟಿನಲ್ಲಿ ಬೋರ್ಡ್‍ನಿಂದ ಈ ಕ್ರಮ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಎಕ್ಸಾಂಗೆ ಹೋಗೋ ವಿದ್ಯಾರ್ಥಿಗಳು ಪರೀಕ್ಷೆ ಪ್ರಾರಂಭಕ್ಕೂ ಮುನ್ನವೇ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಲು ಸೂಚಿಸಲಾಗಿದೆ.

LEAVE A REPLY