ಕೊಪ್ಪಳ ಗವಿಮಠದ ದಾಸೋಹಕ್ಕೆ ಬಂತು ಧಾನ್ಯ, ರೊಟ್ಟಿ ದೇಣಿಗೆ

– ಜ.14ರಿಂದ ಶ್ರೀ ಗವಿಸಿದ್ದೇಶ್ವರ ಜಾತ್ರೆ ಶುರು

ಕೊಪ್ಪಳ: ನಗರದ ಶ್ರೀ ಗವಿಸಿದ್ದೇಶ್ವರ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ಜನವರಿ 14ರಂದು ನಡೆಯುವ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆಗಳು ಈಗಾಗಲೇ ಆರಂಭವಾಗಿವೆ.

ಇಂದು ಬೆಳಿಗ್ಗೆಯಿಂದ ಸುತ್ತಮುತ್ತಲಿನ ಭಕ್ತಾದಿಗಳು ಅಲಂಕೃತ ಎತ್ತಿ ಬಂಡಿ, ಲಘು ವಾಹನಗಳನ್ನು ತೆಗೆದುಕೊಂಡು ಭಜನೆಯೊಂದಿಗೆ ಗವಿಮಠಕ್ಕೆ ಆಗಮಿಸುತ್ತಿರುವ ದೃಶ್ಯ ಮಠದಲ್ಲಿ ಕಂಡುಬರುತ್ತಿತ್ತು. ವಜ್ರಬಂಡಿ, ಸಿದ್ದಾಪುರ, ಚಿಕ್ಕ ಬೆಣಕಲ್, ಗಂಗಾವತಿ ತಾಲೂಕಿನ ಆದಾಪುರ, ನಿರಲೂಟಿ, ಹೊಮ್ಮಿನಾಳ, ಇಂದರಗಿ, ಗುನ್ನಾಳ, ಹನುಮನಹಟ್ಟಿ, ಗಂಗನಾಳ, ಕಲ್ಲತಾವರಗೇರಿ, ಲೇಬಗೇರಿ, ಚಾಮಾಲಾಪುರ, ವನಜಭಾವಿ, ಹಳ್ಳಳ್ಳಿ, ಕೆ.ಹಂಚಿನಾಳ ಗ್ರಾಮದಿಂದ ರೊಟ್ಟಿ ಮಹಾದಾಸೋಹಕ್ಕೆ ಸಮರ್ಪಣೆಯಾದವು.

ಜಾತ್ರೆಗೆ ಸಿದ್ಧವಾಗಿದೆ ಊರು: 14 ರಂದು ಜರಗುವ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ಶ್ರೀ ಮಠದ ಮುಂಭಾಗದಲ್ಲಿರುವ ಸುಮಾರು 10-12 ಎಕರೆ ಪ್ರದೇಶದಲ್ಲಿರುವ ಜಾಗದಲ್ಲಿ ಅಂಗಡಿ ಮುಂಗಟ್ಟುಗಳು ಈಗಾಗಲೇ ಬಂದಿವೆ. ಮಿಠಾಯಿ ಅಂಗಡಿಗಳು, ವಿವಿಧ ರೀತಿಯ ಮಕ್ಕಳ ಆಟಿಕೆಯ ಸಾಮಾನುಗಳ ಅಂಗಡಿ, ಬಳೆ ಅಂಗಡಿಗಳು, ಕೃಷಿ ಸಲಕರಣೆಗಳು, ಸರ್ಕಾರಿ ಹಾಗೂ ಸರ್ಕಾರೇತರ ಮಳಿಗೆಗಳು ಅಲಂಕೃತಗೊಂಡಿವೆ.

ಶೃಂಗಾರಗೊಳ್ಳುತ್ತಿದೆ ಮಹಾದಾಸೋಹ ಮಂಟಪ: ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯ ಅಂಗವಾಗಿ ನಡೆಯಲಿರುವ ಮಹಾದಾಸೋಹವು ಗವಿಮಠದ ಜಾತ್ರಾ ವೈಶಿಷ್ಟ್ಯತೆಗಳಲ್ಲೊಂದು. ಜನವರಿ 14 ರಂದು ಜರುಗಲಿರುವ ಮಹಾರಥೋತ್ಸವದ ದಿನದಿಂದ ಹಿಡಿದು ಅಮವಾಸ್ಯೆಯವರೆಗೂ ನಿರಂತರವಾಗಿ ನಿತ್ಯ ಮುಂಜಾನೆ, ಸಾಯಂಕಾಲ ಹಾಗೂ ರಾತ್ರಿಯವರೆಗೂ ಮಹಾದಾಸೋಹ ನಡೆಯಲಿದೆ.

ಈಗಾಗಲೇ ಮಹಾದಾಸೋಹ ಮಂಟಪದಲ್ಲಿ ಪ್ರಸಾದ ಸ್ವೀಕರಿಸುವ ಬೃಹತ್ ವಿಶಾಲ ಸ್ಥಳವೂ ಭರದಿಂದ ಸಿದ್ಧಗೊಳ್ಳುತ್ತಿದೆ. ಈ ಬಾರಿ ಮಹಾದಾಸೋಹ ಮಂಟಪದ ಒಳಗೆ ಏಕಕಾಲಕ್ಕೆ ಸುಮಾರು 10000 ಕ್ಕಿಂತಲೂ ಹೆಚ್ಚು ಭಕ್ತರು ಪ್ರಸಾದ ಸ್ವೀಕರಿಸಬಸಹುದು. ಮಹಿಳೆಯರಿಗಾಗಿ ಕಳೆದ ಸಲದಂತೆ ಪ್ರತ್ಯೇಕವಾಗಿಯೇ ವ್ಯವಸ್ಥೆ ಮಾಡಲಾಗಿದೆ.

ಪ್ರಸಾದ ತಯಾರಿಸುವ ಸ್ಥಳಗಳಲ್ಲಿ ಬೃಹತ್ ವಿಶೇಷ ಒಲೆಗಳನ್ನು ನಿರ್ಮಿಸುವ ಕಾರ್ಯ ನಡೆಯುತ್ತಿದೆ. ಅಲ್ಲಿ ವಿಶೇಷ ಒಲೆಗಳನ್ನು ನಿರ್ಮಿಸಿ ಅದರ ಮೇಲೆ ಬೃಹತ್ ಕೊಪ್ಪರಿಕೆ, ಆಳೆತ್ತರದ ಕೊಳಗಗಳು, ಸಿಹಿ ಮಾದಲಿಯನ್ನು ಸಂಗ್ರಹ ಮಾಡಲು ದೊಡ್ಡ ಕಟ್ಟೆ, ಬೃಹತ್ ಪಾಕ ಶಾಲೆಗಳು, ಧಾನ್ಯ ಸಂಗ್ರಹ ಕೋಣೆ, ಕಾಯಿಪಲ್ಯ, ರೊಟ್ಟಿ ಸಂಗ್ರಹ ಸ್ಥಳವನ್ನೂ ವ್ಯವಸ್ಥೆ ಮಾಡಲಾಗಿದೆ. ಮಹಾದಾಸೋಹದ ಒಳಗಡೆ ಸಾಲು ಸಾಲು ಹಸಿರಿನ ಗಿಡಗಳು, ಬಣ್ಣ ಬಣ್ಣದ ಹೂವುಗಳು ಭಕ್ತರನ್ನು ಆಕರ್ಷಿಸಲಿವೆ.

LEAVE A REPLY