Sunday, 24th June 2018

Recent News

ಕಲ್ಲಿನಿಂದ ತಲೆಗೆ ಹೊಡೆದು 500 ಅಡಿ ಆಳದ ಕಂದಕಕ್ಕೆ ನೂಕಿದ್ರು- 5 ದಿನಗಳ ನಂತರ ಜೀವಂತವಾಗಿ ಸಿಕ್ಕ ಯುವಕ

ಇಂದೋರ್: ಅಪಹರಣಕ್ಕೊಳಗಾಗಿ, ತಲೆಗೆ ಕಲ್ಲಿನಿಂದ ಹೊಡೆದು 500 ಅಡಿ ಆಳದ ಕಂದಕಕ್ಕೆ ತಳ್ಳಿದರೂ 5 ದಿನಗಳ ನಂತರ ಪವಾಡಸದೃಶವಾಗಿ ಯುವಕ ಜೀವಂತವಾಗಿ ಸಿಕ್ಕಿರುವ ಘಟನೆ ಇಂದೋರ್‍ನಲ್ಲಿ ನಡೆದಿದೆ.

ಸಾಗರ್ ಜಿಲ್ಲೆಯ ಶಾಹ್‍ಘರ್‍ನವನಾದ ಮೃದುಲ್ ಅಲಿಯಾಸ್ ಮನು ಭಲ್ಲಾ(20) ಅಪಹರಣಕ್ಕೊಳಗಾದ ಯುವಕ. ಸದ್ಯ ಇಂದೋರ್‍ನ ಬಾಂಬೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ.

ಪೊಲೀಸರ ಪ್ರಕಾರ ಮೃದುಲ್ ಇಂದೋರ್‍ನಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದ. ಇಲ್ಲಿನ ಪರ್ದೇಶಿಪುರದ ಕ್ಲರ್ಕ್ ಕಾಲೋನಿಯಲ್ಲಿ ತನ್ನ ಸ್ನೇಹಿತ ಸೌರಭ್ ಸೇನ್‍ನೊಂದಿಗೆ ಬಾಡಿಗೆ ಅಪಾರ್ಟ್‍ಮೆಂಟ್‍ವೊಂದರಲ್ಲಿ ವಾಸವಿದ್ದ. ಜನವರಿ 7 ರಂದು ಮೃದುಲ್ ಕಾಣೆಯಾಗಿದ್ದ. ಸೋಮವಾರದಂದು ಸೌರಭ್ ಹಾಗೂ ಆತನ ಸ್ನೇಹಿತರು ಮೃದುಲ್ ಕಾಣೆಯಾಗಿರುವ ಬಗ್ಗೆ ತಿಳಿಸಲು ಪೊಲೀಸರ ಬಳಿ ಹೋದಾಗ ಅವರು ಈ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಂಡಿರಲಿಲ್ಲ. ಆದ್ರೆ ಮೃದುಲ್ ತಂದೆ ಮೋಹಿತ್ ಭಲ್ಲಾ ಮರುದಿನ ಸಾಗರ್‍ನಿಂದ ಬಂದ ಬಳಿಕ ಪೊಲೀಸರು ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ರು.

ಸಿಸಿಟಿವಿ ದೃಶ್ಯವಾಳಿ, ಕಾಲ್ ಡೀಟೇಲ್ಸ್ ಹಾಗೂ ಕೆಲವು ಸಾಕ್ಷ್ಯಾಧಾರದ ಮೇಲೆ ಪೊಲೀಸರು ಆಕಾಶ್ ರತ್ನಾಕರ್ ಹಾಗೂ ಆತನ ಇಬ್ಬರು ಸಹಚರರಾದ ರೋಹಿತ್ ಅಲಿಯಾಸ್ ಪಿಯೂಶ್ ಹಾಗೂ ವಿಜಯ್‍ನನ್ನು ಬಂಧಿಸಿದ್ದಾರೆ. ಆರೋಪಿಗಳೆಲ್ಲರೂ 20 ವರ್ಷ ವಯಸ್ಸಿನವರಾಗಿದ್ದು ಇಂದೋರ್‍ನವರಾಗಿದ್ದಾರೆ. ಆರೋಪಿ ಆಕಾಶ್ ವೈದ್ಯರೊಬ್ಬರ ಚಾಲಕನಾಗಿ ಕೆಲಸ ಮಾಡುತ್ತಿದ್ದು, ರೋಹಿಲ್ ಕಬ್ಬಿಣ ಫ್ಯಾಬ್ರಿಕೇಟರ್ ಆಗಿ ಹಾಗೂ ವಿಜಯ್ ಎಲೆಕ್ಟ್ರಿಶಿಯನ್ ಆಗಿ ಕೆಲಸ ಮಾಡಿಕೊಂಡಿದ್ದಾರೆ.

ಕಿಡ್ನಾಪ್ ಮಾಡಿದ್ದು ಯಾಕೆ?: ಮೃದುಲ್ ಮನೆ ಬಳಿ ವಾಸಿಸುತ್ತಿದ್ದ ಯುವತಿಯೊಬ್ಬಳನ್ನ ಆಕಾಶ್ ಪ್ರೀತಿಸುತ್ತಿದ್ದು. ಆಕೆಯನ್ನ ಸೆಳೆಯಲು ಮೃದುಲ್ ಪ್ರಯತ್ನಿಸುತ್ತಿದ್ದಾನೆ ಎಂದು ಆಕಾಶ್ ಅನುಮಾನಿಸಿದ್ದ. ಅಲ್ಲದೆ ಮೃದುಲ್ ಮತ್ತು ಯುವತಿ ತಡರಾತ್ರಿಯ ವೇಳೆ ಚಟ್ ಮಾಡುತ್ತಿದ್ದರೆಂದು ಮೃದುಲ್‍ನನ್ನು ಕೊಲ್ಲಲು ಆಕಾಶ್ ತನ್ನ ಇಬ್ಬರು ಸ್ನೇಹಿತರೊಂದಿಗೆ ಪಿತೂರಿ ಮಾಡಿದ್ದ. ಭಾನುವಾರದಂದು ಆಕಾಶ್ ತನ್ನ ಅಣ್ಣನ ಕಾರ್ ತೆಗೆದುಕೊಂಡು ಹೋಗಿ ಯುವತಿಯ ಅಂಕಲ್ ನಿನ್ನ ಜೊತೆ ಮತಾಡಬೇಕೆಂತೆ ಎಂದು ಹೇಳಿ ಮೃದುಲ್‍ನನ್ನು ಕರೆದುಕೊಂಡು ಹೋಗಿದ್ದಾಗಿ ವಿಚಾರಣೆ ವೇಳೆ ಹೇಳಿದ್ದಾನೆ.

ಮೃದುಲ್‍ನನ್ನು ಕಾರಿನಲ್ಲಿ ಕೂರಿಸಿಕೊಂಡ ತಂಡ ಇಂದೋರ್‍ನಿಂದ 35 ಕಿ.ಮೀ ದೂರದ ಪೆದ್ಮಿ- ಉದಯ್‍ನಗರ್ ರಸ್ತೆಯಲ್ಲಿನ ಮೌರಾ ಘಾಟ್ ಹತ್ತಿರದ ಕಾಡು ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಮೃದುಲ್‍ಗೆ ಥಳಿಸಿ, ಆತನ ತಲೆಗೆ ಕಲ್ಲಿನಿಂದ ಹೊಡೆದು ನಂತರ ಆತನ್ನನ್ನು ಕಟ್ಟಿದ್ದಾರೆ. ಈ ವೇಳೆ ಮೃದುಲ್ ಸತ್ತಿದ್ದಾನೆ ಎಂದು ತಿಳಿದಿದ್ದ ಅವರು, ಆಳವಾದ ಕಂದಕಕ್ಕೆ ಮೃದುಲ್‍ನನ್ನು ಎಸೆದಿದ್ದಾರೆ.

ಪೊಲೀಸರು ಮೃದುಲ್‍ಗಾಗಿ ಶೋಧ ಕಾರ್ಯ ನಡೆಸಿದಾಗ 5 ದಿನಗಳ ನಂತರವೂ ಕಾಡಿನಲ್ಲಿ ಜೀವಂತವಾಗಿ ಪತ್ತೆಯಾಗಿದ್ದಾನೆ. ಕಿಡ್ನಾಪರ್‍ಗಳು ತಾವು ಮೃದುಲ್‍ನನ್ನು ಕೊಲೆ ಮಾಡಿದ್ದಾಗಿ ಹೇಳಿದ್ರು ಎಂದು ಎಎಸ್‍ಪಿ ಪ್ರಶಾಂತ್ ಚೌಬೆ ಹೇಳಿದ್ದಾರೆ.

ಮೃದುಲ್‍ನನ್ನು ಪರೀಕ್ಷೆ ಮಾಡಿದ ವೈದ್ಯರು ಆತನ ನಾಡಿಬಡಿತ 46ಕ್ಕೆ ಕುಸಿದಿದ್ದು, ಹೈಪೋಥರ್ಮಿಯಾದಿಂದ ಬಳಲುತ್ತಿದ್ದಾನೆ ಎಂದು ಹೇಳಿದ್ದರು. ಆತನ ದೇಹದಲ್ಲಿ ಗ್ಲೂಕೋಸ್ ಅಂಶ ಕಡಿಮೆಯಾಗಿದ್ದು, ಆತ ಬದುಕಿರೋದೇ ಒಂದು ಪವಾಡ ಎಂದು ವೈದ್ಯರಾದ ರವಿ ಬಗೇಲ್ ಹೇಳಿದ್ದಾರೆ.

ನನ್ನ ಮಗ ಸತ್ತಿದ್ದಾನೆಂದು ತಿಳಿದು ಎಲ್ಲಾ ನಂಬಿಕೆ ಕಳೆದುಕೊಂಡಿದ್ದೆ. ಇಂದೋರ್‍ನ ಮನೆಗೆ ಬಂದ ಸಂಬಂಧಿಕರಿಗೂ ಹೀಗೆ ಹೇಳಿದ್ದೆ. ಈಗ ಆತ ಬದುಕಿರೋದು ದೇವರ ದಯೆ ಎಂದು ಮೃದುಲ್ ತಂದೆ ಹೇಳಿದ್ದಾರೆ.

Leave a Reply

Your email address will not be published. Required fields are marked *