Wednesday, 19th July 2017

ಹಾಲಿವುಡ್‍ಗೆ ಹಾರಲಿದ್ದಾರೆ ಸ್ಯಾಂಡಲ್‍ವುಡ್ ಕಿಚ್ಚ ಸುದೀಪ್

ಬೆಂಗಳೂರು: ಸ್ಯಾಂಡಲ್‍ವುಡ್ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಗುಡ್‍ನ್ಯೂಸ್. ಸುದೀಪ್ ಅವರು ಹಾಲಿವುಡ್ ಸಿನಿಮಾ ಮಾಡಲು ಸಹಿ ಹಾಕಿದ್ದಾರೆ ಎನ್ನುವ ಸುದ್ದಿ ಗಾಂಧಿನಗರದಿಂದ ಕೇಳಿ ಬಂದಿದೆ.

ಹೌದು. ಸ್ಯಾಂಡಲ್‍ವುಡ್ ನಲ್ಲಿ ಮಿಂಚಿ ನಂತರ ಕಾಲಿವುಡ್, ಟಾಲಿವುಡ್, ಬಾಲಿವುಡ್ ಗೆ ಹಾರಿದ್ದ ಸುದೀಪ್ ಈಗ ಹಾಲಿವುಡ್ ಸಿನಿಮಾದಲ್ಲಿ ನಟಿಸಲು ಮುಂದಾಗಿದ್ದು, ಶೀಘ್ರವೇ ಶೂಟಿಂಗ್ ನಡೆಸಲು ವಿದೇಶಕ್ಕೆ ಹಾರಲಿದ್ದಾರೆ.

ಆಸ್ಟ್ರೇಲಿಯಾ ಮೂಲದ ಎಡ್ಡಿ ಆರ್ಯ ನಿರ್ದೇಶನ ಮಾಡುವ ಚಿತ್ರದಲ್ಲಿ ಆರ್ಮಿ ಮಾರ್ಷಲ್ ಪಾತ್ರವನ್ನು ಸುದೀಪ್ ಮಾಡಲಿದ್ದಾರೆ. ಚಿತ್ರಕ್ಕೆ ರಿಸನ್ ಹೆಸರನ್ನು ಇಟ್ಟಿದ್ದು, ನಿರ್ದೇಶಕ ಎಡ್ಡಿ ಆರ್ಯ ಸುದೀಪ್ ಅವರನ್ನು ಸಂಪರ್ಕಿಸಿ ಕತೆ ಹೇಳಿದ್ದಾರೆ ಎನ್ನಲಾಗಿದೆ.

ಲಂಡನ್ ಮೂಲದ ಪ್ರತಿಷ್ಠಿತ ಸಂಸ್ಥೆಯೊಂದು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಚಳಿಗಾಲದಲ್ಲಿ ಶೂಟಿಂಗ್ ನಡೆಸಲು ಸಿದ್ಧತೆ ನಡೆದಿದೆ. ಹಾಲಿವುಡ್ ಪ್ರಸಿದ್ಧ ನಟರು ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ನಗರ ಒಂದರಲ್ಲಿ ಉಲ್ಕಾಪಾತವಾದಾಗ ವಾತಾವರಣ ಕಲುಷಿತಗೊಳ್ಳುವ ಕಥೆಯನ್ನು ಆಧಾರಿಸಿ ಚಿತ್ರ ರೂಪುಗೊಳ್ಳಲಿದ್ದು, ಹಲವು ದೇಶದ ನಟರು ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂದು ಎಡ್ಡಿ ಆರ್ಯ ತಿಳಿಸಿದ್ದಾರೆ.

ಜೋಗಿ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಚಿತ್ರದ ಶೂಟಿಂಗ್ ಮಾಡಲು ಸುದೀಪ್ ಲಂಡನ್‍ಗೆ ಹಾರಲಿದ್ದಾರೆ. ಈ ಶೂಟಿಂಗ್ ವೇಳೆ ಸುದೀಪ್ ಹಾಲಿವುಡ್ ಚಿತ್ರದ ಬಗ್ಗೆ ನಿರ್ದೇಶಕರ ಜೊತೆ  ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಸುದ್ದಿಗೆ ನಟ ಜಗ್ಗೇಶ್ ಪ್ರತಿಕ್ರಿಯಿಸಿ, ಕನ್ನಡಿಗನ ಸಾಧನೆ ನೋಡಿದಾಗ ಹೆಮ್ಮೆಯಾಗುತ್ತೆ ನಮ್ಮದೊಂದು ಚಪ್ಪಾಳೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ದರ್ಶನ್ ಜೊತೆ ಸಿನಿಮಾ ಮಾಡ್ತೀರಾ: ಅಭಿಮಾನಿಯ ಪ್ರಶ್ನೆಗೆ ಸುದೀಪ್ ಉತ್ತರ ನೀಡಿದ್ದು ಹೀಗೆ

 

ಇದನ್ನೂ ಓದಿ: ಅಭಿಮಾನಿಗಳ ಗಮನ ಸೆಳೆಯುತ್ತಿದೆ ಸುದೀಪ್, ರಮ್ಯಾ ಮಾತುಗಳು

Leave a Reply

Your email address will not be published. Required fields are marked *