ಫೆ.6ರಿಂದ 10ರವರೆಗೆ ಜಂಟಿ ಅಧಿವೇಶನ: ಕ್ಯಾಬಿನೆಟ್ ಪ್ರಮುಖ ತೀರ್ಮಾನಗಳು ಇಲ್ಲಿವೆ

ಬೆಂಗಳೂರು: ಫೆಬ್ರವರಿ 6 ರಿಂದ 10ರ ತನಕ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ದಿನಾಂಕ ನಿಗದಿಯಾಗಿದೆ. ಫೆಬ್ರವರಿ 6ರಂದು ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಜಂಟಿ ಅಧಿವೇಶನಕ್ಕೆ ರಾಜ್ಯಪಾಲರ ಒಪ್ಪಿಗೆಗೆ ಪತ್ರ ಕಳುಹಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಿದೆ.

ಕ್ಯಾಬಿನೆಟ್ ಪ್ರಮುಖ ತೀರ್ಮಾನಗಳು
– ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಿಂದ ಮುಂದಿನ ಮೂರು ವರ್ಷಗಳಲ್ಲಿ 1,395.58 ಕೋಟಿ ರೂ. ವೆಚ್ಚದಲ್ಲಿ 195 ಸೇತುವೆಗಳನ್ನು ನಿರ್ಮಾಣ ಮಾಡಲು ಅನುಮೋದನೆ.
– 2017-18 ನೇ ಸಾಲಿನಲ್ಲಿ 350 ಕೋಟಿ ರೂ., 2018-19 ನೇ ಸಾಲಿನಲ್ಲಿ 450 ಕೋಟಿ ರೂ. ಹಾಗೂ 2019-20 ನೇ ಸಾಲಿನಲ್ಲಿ 495.58 ಕೋಟಿ ರೂ. ವೆಚ್ಚದಲ್ಲಿ ಪ್ರಮುಖ ಸೇತುವೆಗಳನ್ನು ನಿರ್ಮಿಸಿ ರಾಜ್ಯ ಹೆದ್ದಾರಿಗಳಿಗೆ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದೆ.
– ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆಯಡಿಯಲ್ಲಿ 103.53 ಕೋಟಿ ರೂ. ವೆಚ್ಚದಲ್ಲಿ ರೋಗಗಳ ಪತ್ತೆ ಹಚ್ಚುವ ವೈದ್ಯಕೀಯ ಡಯೋಗೋಸ್ಟಿಕ್ಸ್ ಯಂತ್ರಗಳ ಖರೀದಿಗೆ ಅನುಮೋದನೆ.

-ಬಡ ಹಾಗೂ ಕಡು ಬಡ ರೋಗಿಗಳಿಗೆ ಉಚಿತ ತಪಾಸಣೆ ನಡೆಸಿ ಚಿಕಿತ್ಸೆ ಒದಗಿಸುವುದು ಈ ಉಪಕರಣಗಳ ಖರೀದಿಯ ಮೂಲ ಉದ್ದೇಶವಾಗಿದೆ.
-ಪ್ರತಿ ಜಿಲ್ಲೆಯ ಜಿಲ್ಲಾ ಆಸ್ಪತ್ರೆಗಳಲ್ಲಿ ಸಿ ಟಿ ಸ್ಕ್ಯಾನ್ (ಕಂಪ್ಯೂಟೆಡ್ ಟೋಮೋಗ್ರಫಿ), ಎಂ ಆರ್. ಐ ಸ್ಕ್ಯಾನ್ ( ಮ್ಯಾಗ್ನೆಟಿಕ್ ರೆಸೋನಾನ್ಸ್ ಇಮೇಜಿಂಗ್ ) ಡಯೋಗ್ನೋಸ್ಟಿಕ್ಸ್ ಉಪಕರಣಗಳನ್ನು ಅಳವಡಿಸಲಾಗುವುದು. ಇದಕ್ಕಾಗಿ ಕೇಂದ್ರ ಸರ್ಕಾರ ರಾಜ್ಯಕ್ಕೆ 41.77 ಕೋಟಿ ರೂ ಅನುದಾನವನ್ನು ನೆರವಿನ ರೂಪದಲ್ಲಿ ನೀಡಲಿದೆ.

-ಕಲಬುರಗಿಯಲ್ಲಿ ನೂತನವಾಗಿ ಲೋಕೋಪಯೋಗಿ ಇಲಾಖೆಗಳ ಇಂಜಿನಿಯರ್‍ಗಳ ಕಟ್ಟಡಗಳ ನಿರ್ಮಾಣಕ್ಕೆ ಒಪ್ಪಿಗೆ.
-ಹೈದರಾಬಾದ್ ಪ್ರದೇಶ ಆಭಿವೃದ್ಧಿ ಮಂಡಳಿ ಹಾಗೂ ರಾಜ್ಯ ಸರ್ಕಾರ ಜಂಟಿಯಾಗಿ 47.10 ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲು ಸಮ್ಮತಿ.
-ಉತ್ತರ ಕನ್ನಡ ಜಿಲ್ಲೆಯ ಕಾರವಾರ ಬಂದರಿನಲ್ಲಿ 820 ಮೀಟರ್ ಎತ್ತರದ ಅಲೆ ತಡೆ ಗೋಡೆ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ.
-ನಗರ ಪ್ರದೇಶಗಳಲ್ಲಿ ನರ್ಮ್-2 ಯೋಜನೆಯಡಿ ಆಧುನಿಕ 133 ಮಿನಿ ಬಸ್‍ಗಳನ್ನು ಖರೀದಿಸಲು ಒಪ್ಪಿಗೆ.
– ನಗರ ಪ್ರದೇಶದ ತುಮಕೂರು, ಶಿವಮೊಗ್ಗ ಸೇರಿದಂತೆ ನಗರಗಳಲ್ಲಿ ದೊಡ್ಡ ಬಸ್‍ಗಳ ಬದಲು ಮಿನಿ ಬಸ್‍ಗಳ ಸಂಚಾರದ ಮೂಲಕ ವಾಹನ ದಟ್ಟಣೆ ಕಡಿಮೆ ಮಾಡಲು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಂದ ಒಟ್ಟು 32.23 ಕೋಟಿ ರೂ. ವೆಚ್ಚದಲ್ಲಿ 133 ಬಸ್‍ಗಳನ್ನು ಖರೀದಿಸಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಮೂಹಕ್ಕೆ ಸೇರ್ಪಡೆ ಮಾಡಲು ನಿರ್ಧಾರ.

-ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಕೈಗಾರಿಕಾ ಸಂಸ್ಥೆಗಳಲ್ಲಿ ತರಬೇತಿ ಪಡೆಯುತ್ತಿರುವ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳ ಅಭ್ಯರ್ಥಿಗಳಿಗೆ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಗಳಡಿ 10.22 ಕೋಟಿ ರೂ. ವೆಚ್ಚದಲ್ಲಿ ಶೂ ಮತ್ತು ಸಾಕ್ಸ್‍ಗಳನ್ನು ಉಚಿತವಾಗಿ ವಿತರಣೆ ಮಾಡಲು ಒಪ್ಪಿಗೆ.
– ಪ್ರಸಕ್ತ ಹಣಕಾಸು ವರ್ಷದಲ್ಲಿ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ತರಬೇತಿ ಪಡೆಯುತ್ತಿರುವ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳ ತರಬೇತಿದಾರರಿಗೂ ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಗಳಡಿ 47.84 ಕೋಟಿ ರೂ. ವೆಚ್ಚದಲ್ಲಿ ಟೂಲ್ ಕಿಟ್‍ಗಳನ್ನು ಉಚಿತವಾಗಿ ನೀಡಲು ಆಡಳಿತಾತ್ಮಕ ಅನುಮೋದನೆ.

-ಸೌರ ವಿದ್ಯುತ್ ನೀತಿ ಅನ್ವಯ ರಾಜ್ಯ ತುಮಕೂರು, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಎಲ್ಲಾ ತಾಲ್ಲೂಕುಗಳಲ್ಲಿ ಮನೆಯ ಮೇಲ್ಚಾವಣೆಯಲ್ಲಿ ಸೌರ ವಿದ್ಯುತ್ ಉತ್ಪಾದನೆ ಮಾಡಲು ವಿಪುಲ ಅವಕಾಶಗಳಿದ್ದು, ಇದಕ್ಕಾಗಿ ಸೌರ ವಿದ್ಯುತ್ ನೀತಿಗೆ ತಿದ್ದುಪಡಿ ನೀಡಲು ಸಮ್ಮತಿ.
-ರಾಜ್ಯದಲ್ಲಿ ಹಂತ ಹಂತವಾಗಿ ಸೌರ ವಿದ್ಯುತ್ ಘಟಕ ಸ್ಥಾಪನೆಗೆ ಉತ್ತೇಜನ ನೀಡಲು ಉದ್ದೇಶಿಸಲಾಗಿದೆ. ಅಲ್ಲದೆ, ರಾಜ್ಯದಲ್ಲಿ 20,700 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಅವಕಾಶಗಳಿವೆ. ಈ ನಿಟ್ಟಿನಲ್ಲಿ 2014-21 ರ ರಾಜ್ಯ ಸೌರ ವಿದ್ಯುತ್ ನೀತಿಗೆ ತಿದ್ದುಪಡಿ ನೀಡಲು ಆಡಳಿತಾತ್ಮಕ ಅನುಮೋದನೆ.

-ರಾಜ್ಯದ ಪಶು ವೈದ್ಯಕೀಯ ಮತ್ತು ಪಶು ಪಾಲನೆ ಇಲಾಖೆಯಲ್ಲಿ ಹಾಲಿ ಖಾಲಿ ಇರುವ ಪಶು ವೈದ್ಯರ ಕೊರತೆಯನ್ನು ನೀಗಿಸಲು ಒಂದು ಬಾರಿಗೆ ಅನ್ವಯವಾಗುವಂತೆ ಒಂದು ನೂರು ಹಿಂಬಾಕಿ ( ಬ್ಲಾಕ್‍ಲಾಗ್ ) ಹುದ್ದೆಗಳೂ ಸೇರಿದಂತೆ 550 ಹುದ್ದೆಗಳಿಗೆ ಇಲಾಖೆಯಿಂದಲೇ ನೇರ ನೇಮಕಾತಿ ಮಾಡಿ ಕೊಳ್ಳಲು ಅನುಮೋದನೆ.
-ಚಾಮರಾಜನಗರ ಜಿಲ್ಲೆಯ ಕಸಬಾ ಹೋಬಳಿಯ ಉತ್ತುವಳ್ಳಿ ಗ್ರಾಮದಲ್ಲಿ ನಳಂದ ವಿಶ್ವ ವಿದ್ಯಾಲಯ ಸ್ಥಾಪಿಸಲು ಇಂಟರ್ ನ್ಯಾಷನಲ್ ಬುದ್ದಿಸ್ಟ್ ಮಾಂಕ್ಸ್ ಚಾರಿಟೆಬಲ್ ಟ್ರಸ್ಟ್‍ಗೆ 25 ಎಕರೆ ಗೋಮಾಳ ಜಮೀನು ಒದಗಿಸಲು ಒಪ್ಪಿಗೆ.

-ದೇವನಹಳ್ಳಿ-ಕೆಂಪಾಪುರ ರಾಜ್ಯ ಹೆದ್ದಾರಿ ಸಂಖ್ಯೆ 96 ರ 00.00 ಕಿ ಮೀ ನಿಂದ 49.00 ಕಿ ಮೀ ವರೆಗೆ ವಿಜಯಪುರ ಹಾಗೂ ವೇಮಗಲ್ ಮಾರ್ಗವಾಗಿ ದೇವನಹಳ್ಳಿಯಿಂದ ಕೋಲಾರದವರೆಗೆ 148 ಕೋಟಿ ರೂ. ವೆಚ್ಚದಲ್ಲಿ ವಯಬಲಿಟಿ ಗ್ಯಾಪ್ ಫಂಡಿಂಗ್ ಹಾಗೂ ಡಿಸೈನ್, ಬಿಲ್ಡ್, ಫೈನಾನ್ಸ್, ಆಪರೇಟ್ ಅಂಡ್ ಟ್ರ್ಯಾನ್ಸ್‍ಫರ್ ಆಧಾರದ ಮೇರೆಗೆ ಟೋಲ್ ರಸ್ತೆ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ .
– ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರಣದಲ್ಲಿ ಅತ್ಯಾಧುನಿಕ ತ್ರೀ-ಡಿ ಡಿಜಿಟಲ್ ಮತ್ತು 8 ಎ ರೆಸಲ್ಯೂಷನ್ ಒಳಗೊಂಡ ತಾರಾಲಯವನ್ನು 22 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲು ಸಮ್ಮತಿ.

-ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕಟ್ಟಡದ ನಿರ್ಮಾಣ ಕಾಮಗಾರಿಗಳು ಅನುಮೋದಿತ ಮೊತ್ತಕ್ಕಿಂತಲೂ ಅಧಿಕವಾಗಿರುವ ಹಿನ್ನೆಲೆಯಲ್ಲಿ 29.60 ಕೋಟಿ ರೂ. ಹೆಚ್ಚುವರಿ ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ.
-ಶಿವಮೊಗ್ಗ ಜಿಲ್ಲಾ ಕಾರಾಗೃಹವನ್ನು ಉನ್ನತೀಕರಿಸಿ ಒಂದು ನೂರು ಮಹಿಳಾ ಹಾಗೂ ಐದು ನೂರು ಪುರುಷ ಬಂಧಿಗಳನ್ನು ಇರಿಸುವ ಕೇಂದ್ರ ಕಾರಾಗೃಹವನ್ನಾಗಿ ರೂಪಿಸಿ, ವಿವಿಧ ವೃಂದದ 134 ಹುದ್ದೆಗಳನ್ನು ಸೃಜಿಸಲು ಹಾಗೂ ಅಗತ್ಯಕ್ಕೆ ಅನುಗುಣವಾಗಿ 18 ವಾಹನಗಳನ್ನು ಖರೀದಿಸಲು ಸಂಪುಟ ಅನುಮತಿ.

-ಎಲ್ಲಾ ಪೊಲೀಸ್ ಸಿಬ್ಬಂದಿಗೂ ವಸತಿ ಕಲ್ಪಿಸುವ ಪೊಲೀಸ್ ಗೃಹ 2020 ಯೋಜನೆಯ ಪರಿಷ್ಕೃತ ಯೋಜನೆ ವೆಚ್ಚ 2,272.30 ಕೋಟಿ ರೂ. ಆಗಿರುವ ಹಿನ್ನೆಲೆಯಲ್ಲಿ ಈ ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ.
-2013-14 ನೇ ಸಾಲಿನಲ್ಲಿ ಈ ಯೋಜನೆಯನ್ನು ಪ್ರಕಟಿಸಿದ ವರ್ಷದಲ್ಲಿ, ಅಂದಿನ ಅಂದಾಜು ವೆಚ್ಚ 1,818 ಕೋಟಿ ರೂ. ಆಗಿತ್ತು. ಇದೀಗ ಪರಿಷ್ಕೃತ ಅಂದಾಜು 2,272.30 ಕೋಟಿ ರೂ. ಗೆ ಒಪ್ಪಿಗೆ.
-ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಮಣ್ಯ ಮತ್ತು ರಬ್ಬರ್ ವಿಭಾಗದ ಸುಳ್ಯ ಮತ್ತು ಪುತ್ತೂರು ತಾಲ್ಲೂಕುಗಳಲ್ಲಿ 330 ಹೆಕ್ಟೇರ್ ಪ್ರದೇಶದಲ್ಲಿ 19.04 ಕೋಟಿ ರೂ ವೆಚ್ಚದಲ್ಲಿ ರಬ್ಬರ್ ನೆಡು ತೋಪುಗಳನ್ನು ಮರು ನಾಟಿ ಮಾಡಲು ಆಡಳಿತಾತ್ಮಕ ಅನುಮೋದನೆ.

-ಪ್ರಸಕ್ತ ಹಣಕಾಸು ವರ್ಷದಲ್ಲಿ ರಾಜ್ಯ ಹಣಕಾಸು ಸಂಸ್ಥೆಗೆ 75 ಕೋಟಿ ರೂ. ಷೇರು ಬಂಡವಾಳವನ್ನು ಒದಗಿಸಲು ಅನುಮತಿ.
-ಗದಗ ಜಿಲ್ಲೆಯ ನರಗುಂದದಲ್ಲಿ ರಾಷ್ಟ್ರೀಯ ಉಚ್ಛತರ್ ಶಿಕ್ಷಾ ಅಭಿಯಾನ್ ಹಾಗೂ ರಾಜ್ಯ ಸರ್ಕಾರ ಜಂಟಿಯಾಗಿ 58 ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ನೂತನ ಕಟ್ಟಡ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ.

-ಸೂರಗೊಂಡನ ಕೊಪ್ಪದಲ್ಲಿ ಸಂತ ಸೇವಾಲಾಲ್ ಜನ್ಮಸ್ಥಳ ಮಹಾಮಠ ಸಮಿತಿಗೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಬೆಳಗುತ್ತಿ ಹೋಬಳಿಯ ಚಿನ್ನಿಕಟ್ಟೆ ಗ್ರಾಮದಲ್ಲಿ 13.20 ಎಕರೆ ಜಮೀನನ್ನು ಮಾರುಕಟ್ಟೆ ದರದಲ್ಲಿ ಖರೀದಿಸಲು ಮಂಜೂರಾತಿ.
-ರಾಜ್ಯದ ಪ್ರಮುಖ ರಸ್ತೆಗಳಲ್ಲಿ ನೆಡುತೋಪು ಅಭಿವೃದ್ಧಿಗೆ ಯೋಜನೆಗಳ ಎಲ್ಲಾ ಶೇಕಡಾ ಒಂದರಷ್ಟು ಮೊತ್ತವನ್ನು ಉಪಕರವನ್ನಾಗಿ ಸಂಗ್ರಹಿಸಿ ಅಭಿವೃದ್ಧಿ ಪಡಿಸಲು ರಾಜ್ಯ ರಸ್ತೆ ಅಭಿವೃದ್ಧಿ ನಿಗಮಕ್ಕೆ ಅನುಮತಿ ನೀಡಿದೆ.

LEAVE A REPLY