Friday, 22nd June 2018

Recent News

ಜನತೆಗೆ ಸಾವಿನ ಭಾಗ್ಯ – ವೈದ್ಯರ ಪ್ರತಿಭಟನೆಗೆ ಮೂವರು ಮಕ್ಕಳು ಸೇರಿ 7 ಬಲಿ

ಬೆಂಗಳೂರು: ಮಂಗಳವಾರ ಮಕ್ಕಳ ದಿನಾಚರಣೆ ಒಂದು ಕಡೆಯಾದರೆ ಮತ್ತೊಂದು ಕಡೆ, ವೈದ್ಯರು ಮತ್ತು ಸರ್ಕಾರ ನಡುವಿನ ಹೋರಾಟ ಮಕ್ಕಳ ಜೀವವನ್ನೇ ಪರೋಕ್ಷವಾಗಿ ಬಲಿ ಪಡೆದಿದೆ.

ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಮಸೂದೆ ವಿಚಾರದಲ್ಲಿ ಸರ್ಕಾರ ಹಾಗೂ ವೈದ್ಯರ ಜಟಾಪಟಿಯಲ್ಲಿ 7 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ಮೂವರು ಮಕ್ಕಳು ಎನ್ನುವುದು ದುರದೃಷ್ಟಕರ ಸಂಗತಿ. ಮಸೂದೆ ಮಂಡಿಸಿಯೇ ಸಿದ್ಧ ಎಂದು ಸರ್ಕಾರ ಬಿಗಿಪಟ್ಟು ಹಿಡಿದಿದ್ದರೆ, ಮಸೂದೆ ವಿರೋಧಿಸಿ ವೈದ್ಯರು ಬೀದಿಗೆ ಇಳಿದ ಪರಿಣಾಮ ಅಮಾಯಕರು ಪರಿತಪಿಸುವಂತಾಗಿದೆ.

ರಾಜ್ಯದ ವಿವಿಧೆಡೆ ವೈದ್ಯರು ಲಭ್ಯವಿಲ್ಲದಿರುವುದರಿಂದ, ಸೂಕ್ತ ಸೌಲಭ್ಯಗಳಿಲ್ಲದೇ ಜನಸಾಮಾನ್ಯರು ಜೀವ ತೆತ್ತಿದ್ದಾರೆ. ವಿಧೇಯಕ ವಿಚಾರದಲ್ಲಿ ವೈದ್ಯರೊಂದಿಗೆ ಜಿದ್ದಿಗೆ ಬಿದ್ದಿರುವ ಸರ್ಕಾರ, ರಾಜ್ಯದ ಜನತೆಗೆ ಸಾವಿನ ಭಾಗ್ಯ ಕರುಣಿಸಿದೆ.

ಎಲ್ಲಿ ಯಾರು ಮೃತಪಟ್ಟಿದ್ದಾರೆ?
ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ 3 ತಿಂಗಳ ಇಬ್ರಾಹಿಂ ಹಾಸನದಲ್ಲಿ ಸಾವನ್ನಪ್ಪಿದ್ದರೆ, ಧಾರವಾಡದಲ್ಲಿ ಡೆಂಗ್ಯೂ ಜ್ವರಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೇ 12 ವರ್ಷದ ವೈಷ್ಣವಿ ಮೃತಪಟ್ಟಿದ್ದಾಳೆ.

ಬೆಳಗಾವಿಯ ಅಥಣಿಯಲ್ಲಿ 12 ವರ್ಷದ ಕಲ್ಲವ್ವಾ ಅಂಬಿ ಮೃತಪಟ್ಟರೆ, ತುಮಕೂರಿನಲ್ಲಿ 26 ವರ್ಷದ ಜ್ಯೋತಿ ಹೃದಯಾಘಾತಗೊಂಡು ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಸಾವನ್ನಪ್ಪಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಅಪಘಾತದಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ 25 ವರ್ಷದ ಮಹೇಶ್ ವಾಘ್ಮೋರ್ ಸಾವನ್ನಪ್ಪಿದ್ದರೆ, ಬಾಗಲಕೋಟೆ ಜಿಲ್ಲೆಯ ಇಳಕಲ್ ನಲ್ಲಿ 52 ವರ್ಷದ ಶೇಖಪ್ಪ ಎಂಬುವರು ಹೃದಯಾಘಾತದಿಂದ ಚಿಕಿತ್ಸೆ ಸಿಗದೆ ಮೃತ ಪಟ್ಟಿದ್ದಾರೆ. ಕೊಪ್ಪಳದಲ್ಲಿ ಹೃದಯಾಘಾತದಿಂದ ಚಿಕಿತ್ಸೆ ಸಿಗದೆ 55 ವರ್ಷದ ಗ್ಯಾನಪ್ಪ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಪರಿಷತ್‍ನಲ್ಲಿ ಕಣ್ಣೀರಿಟ್ಟ ರಮೇಶ್ ಕುಮಾರ್: ಪರಿಶೀಲನಾ ಸಮಿತಿಯ ವರದಿಯಲ್ಲಿ ಏನಿದೆ?

Leave a Reply

Your email address will not be published. Required fields are marked *