Tuesday, 22nd May 2018

Recent News

ಕತಾರ್ ನಲ್ಲಿ ಬೀಸಲಿದೆ ಚಂದನವನದ `ಕಾಫಿ ತೋಟ’ದ ಪರಿಮಳ

ಬೆಂಗಳೂರು: ಕತಾರ್ ರಾಜಧಾನಿ ದೋಹಾದಲ್ಲಿ ಅಕ್ಟೋಬರ್ 13ರಂದು ಕನ್ನಡದ ವಿನೂತನ ಸಿನಿಮಾ, ಸ್ಯಾಂಡಲ್‍ವುಡ್ ಮೇಷ್ಟ್ರು ಟಿ.ಎನ್.ಸೀತಾರಂ ನಿರ್ದೇಶಿಸಿರುವ `ಕಾಫಿ ತೋಟ’ ಬಿಡುಗಡೆಯಾಗಲಿದೆ.

ಸಿನಿಮಾ ಬಿಡುಗಡೆ ವೇಳೆಯಲ್ಲಿ ಸಿನಿಮಾದ ನಾಯಕ ನಟ ರಘು ಮುಖರ್ಜಿ, ನಟಿಯರಾದ ರಾಧಿಕಾ ಚೇತನ್, ಅಪೇಕ್ಷ ಪುರೋಹಿತ್ ಭಾಗಿಯಾಗಲಿದ್ದಾರೆ. ಕೇವಲ ಒಂದು ವರ್ಷದ ಅವಧಿಯಲ್ಲಿ ರಂಗಿತರಂಗ, ಹೆಬ್ಬುಲಿ, ಕೋಟಿಗೊಬ್ಬ-2, ರಾಜಕುಮಾರ, ಚೌಕ, ಕಿರಿಕ್ ಪಾರ್ಟಿ, ಒಂದು ಮೊಟ್ಟೆಯ ಕಥೆ, ದೊಡ್ಮನೆ ಹುಡುಗ ಮತ್ತು ತುಳು ಚಿತ್ರ ಅರೈಮರ್ಲೆರ್ ಯಶಸ್ವಿಯಾಗಿ ಪ್ರದರ್ಶನಗೊಂಡಿವೆ ಎಂದು ಪ್ರದರ್ಶನದ ಮುಖ್ಯ ಆಯೋಜಕರಾದ ಸುಬ್ರಮಣ್ಯ ಹೆಬ್ಬಾಗಿಲು ಅವರು ತಿಳಿಸಿದ್ದಾರೆ.

ಎಲ್ಲರಿಗಿಂತಲೂ ಭಿನ್ನವಾಗಿ ಕಥೆ ಹೇಳುವ ಸೀತಾರಂ ಇಲ್ಲಿಯೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ಮಾಯಾಮೃಗ, ಮುಕ್ತ, ಮುಕ್ತ..ಮುಕ್ತ.. ಧಾರವಾಹಿಗಳ ಮೂಲಕ ಹಾಗೂ ಸೆಸ್ಪನ್ಸ್ ಕಥೆಗಳನ್ನು ನಿರ್ದೇಶಿಸುವ ಮೂಲಕ ತಮ್ಮದೇ ಆದ ಅಭಿಮಾನಿ ಬಳಗವನ್ನು ಸೀತಾರಂ ಹೊಂದಿದ್ದಾರೆ. ಚಿತ್ರವು ಸಂಪೂರ್ಣ ಹೊಸ ಕಲಾವಿದರನ್ನು ಒಳಗೊಂಡಿದ್ದು, ಸಸ್ಪೆನ್ಸ್ ಕಥಾ ಹಂದರವನ್ನು ಹೊಂದಿದೆ. ಟ್ರೇಲರ್‍ನಲ್ಲಿ ತೋರಿಸಿರುವಂತೆ ಸಿನಿಮಾ ಕೊಲೆಯ ಕೇಸನ್ನು ಭೇದಿಸುವ ರಹಸ್ಯ ಕಥಾನಕವನ್ನು ಹೊಂದಿದೆ. ಇದೂವರೆಗೂ ಸೀತಾರಂ ಅವರ ಧಾರವಾಹಿಗಳಲ್ಲಿ ನಟಿಸಿರುವ ಅನುಭವಿ ಕಲಾವಿದರ ಬಳಗವನ್ನೇ ಚಿತ್ರತಂಡ ಹೊಂದಿದೆ.

ಚಿತ್ರದ ಮುಖ್ಯಭೂಮಿಕೆಯಲ್ಲಿ ರಂಗಿತರಂಗ ಬೆಡಗಿ ರಾಧಿಕಾ ಚೇತನ್ ಮತ್ತು ರಘು ಮುಖರ್ಜಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಸಿನಿಮಾದಲ್ಲಿ ವಕೀಲರ ಪಾತ್ರದಲ್ಲಿ ಸೀತಾರಂ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಸಂಯುಕ್ತ ಹೊರನಾಡ್, ಅಚ್ಯುತ್ ಕುಮಾರ್, ರಾಹುಲ್ ಮಾಧವ್, ಅಪೇಕ್ಷ ಪುರೋಹಿತ್, ವೀಣಾ ಸುಂದರ್, ಸುಂದರ್ ರಾಜ್, ಅಮೋಘ (ಡ್ರಾಮ ಜ್ಯೂನಿಯರ್ಸ್) ಮುಂತಾದವರಿದ್ದಾರೆ. ಬಿ.ಸಿ. ಪಾಟೀಲ್ ಹಾಗೂ ಅಂಬಿಕಾ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಜಯಂತ್ ಕಾಯ್ಕಿಣಿ ಹಾಗೂ ಜೋಗಿಯವರು ಬರೆದಿರುವ ಹಾಡುಗಳಿಗೆ ಅನೂಪ್ ಸೀಳಿನ್, ಹರಿಚರಣ್, ಸಿಂಚನಾ ದೀಕ್ಷಿತ್, ಮಿಥುನ್ ಮುಕುಂದನ್, ರಾಜಗುರು ಹೊಸಕೋಟೆ, ಅನನ್ಯಾ ಭಗತ್ ಹಾಗೂ ಇನ್ನಿತರರು ತಮ್ಮ ಸುಮಧುರ ಧ್ವನಿ ನೀಡಿದ್ದಾರೆ.

 

Leave a Reply

Your email address will not be published. Required fields are marked *