ಯುಗಾದಿ ವಿಶೇಷ: ಬೇಳೆ ಒಬ್ಬಟ್ಟು ಮಾಡೋಕೆ ಸಿಂಪಲ್ ರೆಸಿಪಿ ಇಲ್ಲಿದೆ

ಯುಗಾದಿ ಹಬ್ಬದಂದು ಪ್ರತಿಯೊಬ್ಬರ ಮನೆಯಲ್ಲೂ ಒಬ್ಬಟ್ಟಿನ ಘಮ ಇರಲೇಬೇಕು. ತೆಂಗಿನ ಕಾಯಿ ಹೋಳಿಗೆ, ತೊಗರಿಬೇಳೆ ಒಬ್ಬಟ್ಟು ಅಥವಾ ಕಡಲೆಬೇಳೆಯನ್ನ ಬಳಸಿಯೂ ಒಬ್ಬಟ್ಟು ಮಾಡ್ತಾರೆ. ಬೇಳೆ ಒಬ್ಬಟ್ಟು ಮಾಡೋಕೆ ಸಖತ್ ಸುಲಭವಾದ ವಿಧಾನ ಇಲ್ಲಿದೆ.

ಬೇಗಾಗುವ ಸಾಮಾಗ್ರಿಗಳು:
1. ತೊಗರಿ ಬೇಳೆ – 1/2 ಕೆಜಿ
2. ಚಿರೋಟಿ ರವೆ – ಕಾಲು ಕಪ್
3. ಮೈದಾಹಿಟ್ಟು – 2 ಬಟ್ಟಲು
4. ಬೆಲ್ಲ – 1/2 ಕೆಜಿ ಅಥವಾ ನಿಮಗೆ ಎಷ್ಟು ಸಿಹಿ ಬೇಕೋ ಅದಕ್ಕೆ ಅನುಗುಣವಾಗಿ ಬಳಸಿ
5. ತೆಂಗಿನಕಾಯಿ ತುರಿ – ಒಂದು ಬಟ್ಟಲು
6. ಏಲಕ್ಕಿ ಪುಡಿ – ಸ್ವಲ್ಪ
7. ತುಪ್ಪ – ಎರಡು ಚಮಚ
8. ಎಣ್ಣೆ – 1 ಕಪ್
9. ಉಪ್ಪು – 1 ಚಿಟಿಕೆ
10. ಅರಿಸಿನ – 1 ಚಿಟಿಕೆ

ಮಾಡುವ ವಿಧಾನ:
* ಒಂದು ಪಾತ್ರೆಯಲ್ಲಿ ಮೈದಾಹಿಟ್ಟು, ಚಿರೋಟಿ ರವೆ, ಅರಿಶಿನ, ಒಂದು ಚಿಟಿಕೆ ಉಪ್ಪು ಮತ್ತು ತುಪ್ಪ ಹಾಕಿ ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಚಪಾತಿ ಹಿಟ್ಟಿಗಿಂತ ತುಂಬಾ ಮೃದುವಾಗಿ ಕಲಸಿಕೊಳ್ಳಿ. ನಂತರ ಇದಕ್ಕೆ 1/2 ಕಪ್ ಎಣ್ಣೆ ಹಾಕಿ ಚೆನ್ನಾಗಿ ನಾದಿಕೊಂಡು 30 ನಿಮಿಷ ನೆನೆಯಲು ಬಿಡಿ.
* ಬೆಲ್ಲವನ್ನು ಪುಡಿ ಮಾಡಿಟ್ಟುಕೊಳ್ಳಿ.
* ಒಂದು ಪಾತ್ರೆಯಲ್ಲಿ ತೊಗರಿಬೇಳೆ, ಚಿಟಿಕೆ ಅರಿಶಿನ ಮತ್ತು ಒಂದು ಚಮಚ ಎಣ್ಣೆ ಹಾಗೂ ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಬೇಯಿಸಿಕೊಳ್ಳಿ.
* ಬೇಳೆ ನುಣ್ಣಗಾಗುವಂತೆ ಬೇಯಿಸಬೇಡಿ. ಸ್ವಲ್ಪ ಗಟ್ಟಿಯಿರುವಾಗಲೇ ಇದಕ್ಕೆ ಪುಡಿ ಮಾಡಿದ ಬೆಲ್ಲ, ತೆಂಗಿನಕಾಯಿ ತುರಿ, ಮತ್ತು ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ ಒಲೆಯಿಂದ ಇಳಿಸಿ.
* ಈ ಮಿಶ್ರಣ ತಣ್ಣಗಾದ ನಂತರ ನುಣ್ಣಗೆ ರುಬ್ಬಿಕೊಳ್ಳಬೇಕು(ನೀರು ಸೇರಿಸಬರದು).
* ಹೀಗೆ ನುಣ್ಣಗೆ ರುಬ್ಬಿದ ಮಿಶ್ರಣವನ್ನ ಸಣ್ಣ ಸಣ್ಣ ಉಂಡೆಗಳಾಗಿ ಮಾಡಿಕೊಳ್ಳಿ.

ಹೋಳಿಗೆ ಮಾಡುವುದು:
* ಕಲಸಿಟ್ಟ ಮೈದಾ ಮಿಶ್ರಣವನ್ನು ತೆಗೆದುಕೊಂಡು ಮತ್ತೊಮ್ಮೆ ಚೆನ್ನಾಗಿ ನಾದಿಕೊಳ್ಳಿ.
* ಒಂದು ಮಣೆ ಮೇಲೆ ಬಾಳೆ ಎಲೆ/ ಪ್ಲಾಸ್ಟಿಕ್ ಕವರ್ ಹಾಕಿ ಅದರ ಮೇಲೆ ಸ್ವಲ್ಪ ಎಣ್ಣೆ ಸವರಿ, ಸ್ವಲ್ಪ ಮೈದಾ ಮಿಶ್ರಣವನ್ನು ತೆಗೆದುಕೊಂಡು ಅದರ ಮೇಲೆ ತಟ್ಟಿಕೊಳ್ಳಿ.
* ಇದರ ಮಧ್ಯೆ ಹೂರಣದ ಉಂಡೆಯನ್ನು ಇಟ್ಟು ಎಲ್ಲಾ ಬದಿಯಿಂದ ಮೇಲ್ಮುಖವಾಗಿ ಮೈದಾ ಹಿಟ್ಟಿನಿಂದ ಹೂರಣವನ್ನು ಮುಚ್ಚಿ.


* ಹೂರಣವನ್ನು ಮುಚ್ಚಿದ ತುದಿಯನ್ನು ಕೆಳಭಾಗಕ್ಕೆ ತಿರುಗಿಸಿ ಕೈಗೆ ಎಣ್ಣೆ ಸವರಿಕೊಂಡು ಲಘುವಾಗಿ ತಟ್ಟಿಕೊಳ್ಳಿ.
* ಒಬ್ಬಟ್ಟು ತಟ್ಟುವಾಗಿ ತೀರಾ ತೆಳ್ಳಗೆ ತಟ್ಟಿದರೆ ಬೇಯಿಸುವಾಗ ಮುರಿದು ಹೋಗುತ್ತದೆ. ಆದ್ದರಿಂದ ತೀರಾ ತೆಳ್ಳಗೂ ಅಲ್ಲದೆ ದಪ್ಪವೂ ಅಲ್ಲದೆ ಮಧ್ಯಮ ಗಾತ್ರದಲ್ಲಿ ತಟ್ಟಿಕೊಳ್ಳಿ.

     
* ಒಲೆ ಮೇಲೆ ತವಾ ಇಟ್ಟು ಸ್ವಲ್ಪ ಎಣ್ಣೆ ಅಥವಾ ತುಪ್ಪ ಸವರಿ. ತವಾ ಬಿಸಿಯಾದ ನಂತರ ಅದರ ಮೇಲೆ ತಟ್ಟಿಕೊಂಡ ಒಬ್ಬಟ್ಟು ಹಾಕಿ ಎರಡೂ ಬದಿ ಹದವಾಗಿ ಬೇಯಿಸಿದ್ರೆ ಬೇಳೆ ಒಬ್ಬಟ್ಟು ರೆಡಿ.
* ಇದನ್ನು ಬಿಸಿ ಇರುವಾಗಲೇ ತುಪ್ಪ ಅಥವಾ ಬಿಸಿ ಮಾಡಿದ ಹಾಲಿನೊಂದಿಗೆ ಸವಿಯಬಹುದು.

You might also like More from author

Leave A Reply

Your email address will not be published.

badge