ಕೂಲ್ ಕೂಲ್ ಕಲ್ಲಂಗಡಿ ಐಸ್‍ಕ್ಯಾಂಡಿ ಮಾಡೋ ವಿಧಾನ ಇಲ್ಲಿದೆ

ಬೇಸಿಗೆಯ ಬಿರು ಬೀಸಿಲಲ್ಲಿ ಏನಾದ್ರೂ ಕೂಲ್ ಆಗಿರೋದನ್ನ ಕುಡಿಯಬೇಕು, ತಿನ್ಬೇಕು ಅನ್ನಿಸೋದು ಸಹಜ. ಅದ್ರಲ್ಲೂ ಈ ಬಿಸಿಲಲ್ಲಿ ಐಸ್‍ಕ್ರೀಂ ಅಥವಾ ಐಸ್‍ಕ್ಯಾಂಡಿಯನ್ನ ತಿನ್ನೋಕೆ ಯಾರಿಗೆ ತಾನೆ ಇಷ್ಟವಾಗಲ್ಲ. ಅಂಗಡಿಗೆ ಹೋಗಿ ಐಸ್‍ಕ್ಯಾಂಡಿ ಕೊಂಡು ತಿನ್ನೋದಕ್ಕಿಂತ ಮನೆಯಲ್ಲೇ ಮಾಡಿದ್ರೆ ಮಕ್ಕಳಿಗೂ ಇಷ್ಟವಾಗುತ್ತೆ. ಬೇಸಿಗೆ ರಜೆಯಲ್ಲಿರೋ ಮಕ್ಕಳಿಗಾಗಿ ಮನೆಯಲ್ಲೇ ಐಸ್‍ಕ್ಯಾಂಡಿ ಮಾಡಿ ಕೊಡ್ಬೇಕಾ? ಇಲ್ಲಿದೆ ನೋಡಿ ಕಲ್ಲಂಗಡಿ ಐಸ್‍ಕ್ಯಾಂಡಿ ಮಾಡೋ ಸಖತ್ ಸಿಂಪಲ್ ವಿಧಾನ.

ಬೇಕಾಗುವ ಸಾಮಾಗ್ರಿ:
1. ಕಲ್ಲಂಗಡಿ ಹಣ್ಣು – 1 ಕಪ್ (ಕಟ್ ಮಾಡಿದ್ದು)
2. ಸ್ಟ್ರಾಬೆರಿ – 15
3. ಕಿವಿ ಹಣ್ಣು – 2 (ಕಟ್ ಮಾಡಿದ್ದು)
4. ಕಪ್ಪು ದ್ರಾಕ್ಷಿ – 8
5. ತೆಂಗಿನ ಹಾಲು – ಕಾಲು ಕಪ್
6. ಸಕ್ಕರೆ – ಸ್ವಲ್ಪ
7. ಮಾವಿನ ಹಣ್ಣು – 5-6 ಪೀಸ್‍ಗಳು (ಇಷ್ಟವಿದ್ದರೆ ಮಾತ್ರ ಬಳಸಿ)

ಮಾಡೋ ವಿಧಾನ:
* ಕಟ್ ಮಾಡಿರೋ ಕಲ್ಲಂಗಡಿ ಹಣ್ಣು ಹಾಗೂ ಸ್ಟ್ರಾಬೆರಿ ಹಣ್ಣುಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.
* ಮಾವಿನ ಹಣ್ಣಿನ ಪೀಸ್, ಸ್ಲೈಸ್ ಮಾಡಿಕೊಂಡ ಕಿವಿ ಹಣ್ಣನನ್ನು ಐಸ್‍ಕ್ಯಾಂಡಿ ಮೌಲ್ಡ್ ಗಳಿಗೆ ಹಾಕಿ. (ಮೌಲ್ಡ್ ಇಲ್ಲವೆಂದಲ್ಲಿ ಪ್ಲಾಸ್ಟಿಕ್ ಗ್ಲಾಸ್‍ಗಳನ್ನೂ ಬಳಸಬಹುದು)
* ಬಳಿಕ ರುಬ್ಬಿಕೊಂಡ ಕಲ್ಲಂಗಡಿ ಹಾಗೂ ಸ್ಟ್ರಾಬೆರಿ ಹಣ್ಣಿನ ರಸವನ್ನು ಮೌಲ್ಡ್ ಗಳಲ್ಲಿ ಮುಕ್ಕಾಲು ಭಾಗದಷ್ಟು ತುಂಬಿ.
* ಕಟ್ ಮಾಡಿದ ದ್ರಾಕ್ಷಿ ಹಣ್ಣನ್ನು ಅದರ ಮೇಲೆ ಹಾಕಿ.
* ನಂತ್ರ ಮೌಲ್ಡ್ ಮುಚ್ಚಳ ಹಾಕಿ 30 ನಿಮಿಷ ಫ್ರಿಡ್ಜ್ ನಲ್ಲಿಡಿ.
* ತದನಂತರ ಫ್ರಿಡ್ಜ್ ನಿಂದ ಮೌಲ್ಡ್ ಹೊರತೆಗೆಯಿರಿ, ತೆಂಗಿನ ಹಾಲಿಗೆ 1 ಚಮಚ ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಈಗ ಮೌಲ್ಡ್ ತುಂಬ ತುಂಬುವಂತೆ ಹಾಕಿ. (ಒಂದು ವೇಳೆ ಪ್ಲಾಸ್ಟಿಕ್ ಗ್ಲಾಸ್‍ನಲ್ಲಿ ಐಸ್‍ಕ್ಯಾಂಡಿ ಮಾಡುತ್ತಿದ್ದರೆ ಈ ಹಂತದಲ್ಲಿ ಐಸ್‍ಕ್ಯಾಂಡಿ ಸ್ಟಿಕ್ ಮಧ್ಯದಲ್ಲಿ ಚುಚ್ಚಿ)
* ಮತ್ತೆ 4 ಗಂಟೆಗಳ ಕಾಲ ಮೌಲ್ಡನ್ನು ಫ್ರಿಡ್ಜ್ ನಲ್ಲಿಡಿ.
* ನಂತರ ಒಂದು ಪಾತ್ರೆಯಲ್ಲಿ ಬೆಚ್ಚಗಿನ ನೀರು ಹಾಕಿ ಅದರಲ್ಲಿ ಮೌಲ್ಡ್ ಅಥವಾ ಪ್ಲಾಸ್ಟಿಕ್ ಗ್ಲಾಸ್ ಅದ್ದಿದರೆ ಐಸ್ ಕ್ಯಾಂಡಿ ಸುಲಭವಾಗಿ ಬಿಡಿಸಿಕೊಳ್ಳುತ್ತದೆ.
* ಈಗ ಕೂಲ್ ಆದ ಕಲ್ಲಂಗಡಿ ಐಸ್‍ಕ್ಯಾಂಡಿ ಸವಿಯಲು ಸಿದ್ಧ.

You might also like More from author

Leave A Reply

Your email address will not be published.

badge