ಮಲೆನಾಡು ಸ್ಪೆಷಲ್ ಪತ್ರೊಡೆ ಮಾಡೋ ವಿಧಾನ

ಲೆನಾಡಿನ ಸಾಂಪ್ರಾದಾಯಿಕ ರೆಸಿಪಿಗಳಲ್ಲಿ ಪತ್ರೊಡೆಯೂ ಒಂದು. ಮಳೆಗಾಲದಲ್ಲಿ ಹಳ್ಳಿ ಕಡೆ ಸಿಗುವ ಕೆಸುವಿನ ಎಲೆಯಿಂದ ಇದನ್ನು ಹೆಚ್ಚಾಗಿ ತಯಾರು ಮಾಡ್ತಾರೆ. ಕೆಸುವಿನ ಎಲೆಯಲ್ಲಿ ಕಬ್ಬಿಣಾಂಶ ಹೆಚ್ಚಾಗಿದ್ದು, ಆರೋಗ್ಯಕ್ಕೆ ಒಳ್ಳೆಯದು. ಪತ್ರೋಡೆ ತಯಾರು ಮಾಡೋದು ಹೇಗೆ ಅನ್ನೋದಕ್ಕೆ ಇಲ್ಲಿದೆ ಸಿಂಪಲ್ ರೆಸಿಪಿ

ಬೇಕಾಗುವ ಸಾಮಾಗ್ರಿಗಳು:
1. ಕೆಸುವಿನ ಎಲೆ – 15-20
2. ಅಕ್ಕಿ – ಮುಕ್ಕಾಲು ಕಪ್
3. ತೊಗರಿಬೇಳೆ – ಅರ್ಧ ಕಪ್
4. ಕಡಲೆಬೇಳೆ – ಅರ್ಧ ಕಪ್
5. ಹುಣಸೆಹಣ್ಣು – ಅರ್ಧ ಕಪ್ (ಕನಿಷ್ಟ 15-20 ನಿಮಿಷ ನೀರಿನಲ್ಲಿ ನೆನೆಯಲು ಬಿಡಿ)
6. ಒಣಮೆಣಸಿನಕಾಯಿ- 10-15 (ಮೆಣಸಿನ ಪುಡಿಯೂ ಬಳಸಬಹುದು. ಖಾರಕ್ಕೆ ತಕ್ಕ ಹಾಗೆ ಬಳಸಿ)
7. ತೆಂಗಿನ ತುರಿ – ಅರ್ಧ ಕಪ್
8. ಕೊತ್ತಂಬರಿ ಬೀಜ/ ಧನಿಯಾ – 2 ಚಮಚ
9. ಜೀರಿಗೆ – 1 ಚಮಚ
10. ಬೆಲ್ಲ – 3 ಚಮಚ
11. ಇಂಗು – 2 ಚಿಟಿಕೆ

ಮಾಡುವ ವಿಧಾನ:

* ಮೊದಲು ತೊಗರಿಬೇಳೆ, ಅಕ್ಕಿ, ಕಡಲೆಬೇಳೆ, ಜೀರಿಗೆ ಹಾಗೂ ಕೊತ್ತಂಬರಿ ಬೀಜವನ್ನು ನೀರಿನಲ್ಲಿ ಹಾಕಿ 2-3 ಗಂಟೆ ನೆನೆಯಲು ಬಿಡಿ.

* ಬಳಿಕ ಇದರ ಜೊತೆಗೆ ತೆಂಗಿನ ತುರಿ, ಹುಣಸೆಹಣ್ಣು, ಬೆಲ್ಲ ಮತ್ತು ಒಣಮೆಣಸಿನ ಕಾಯಿ ಹಾಕಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿ.

* ರುಬ್ಬಿದ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಗೂ 2 ಚಿಟಿಕೆ ಇಂಗು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

* ಒಂದು ದೊಡ್ಡ ಕೆಸುವಿನ ಎಲೆಯನ್ನು (ತೊಳೆದಿದ್ದು, ದಂಟು ತೆಗೆದುಕೊಳ್ಳಬೇಕು) ಉಲ್ಟಾ ಇಟ್ಟುಕೊಳ್ಳಿ. ಅದರ ಮೇಲೆ ತೆಳುವಾಗಿ ಹಿಟ್ಟನ್ನು ಹಚ್ಚಿ. ಎಲೆಗೆ ಪೂರ್ತಿಯಾಗಿ ಹಿಟ್ಟು ಹಚ್ಚಿದ ನಂತರ ಅದರ ಮೇಲೆ ಇನ್ನೊಂದು ಅದಕ್ಕಿಂತ ಸಣ್ಣ ಎಲೆಯನ್ನು ಹಾಗೆ ಉಲ್ಟಾ ಇಟ್ಟು, ಅದರ ಮೇಲೆಯೂ ತೆಳುವಾಗಿ ಹಿಟ್ಟನ್ನು ಹಚ್ಚಿ. ಹೀಗೆ 5 ಎಲೆಗಳನ್ನು ಒಂದರ ಮೇಲೊಂದರಂತೆ ಇಟ್ಟು ಹಿಟ್ಟನ್ನು ಹಚ್ಚಿ ಇಡಿ.

* ಬಳಿಕ ದೊಡ್ಡ ಎಲೆಯನ್ನು ಒಂದು ಸೈಡಿನಿಂದ ಮಧ್ಯಕ್ಕೆ ಮಡಚಿ. ಇನ್ನೊಂದು ಬದಿಯನ್ನು ಕೂಡ ಮಧ್ಯಕ್ಕೆ ಮಡಚಿ. ಮಡಚಿದ ಎರಡೂ ಭಾಗಕ್ಕೆ ಹಿಟ್ಟನ್ನು ಹಚ್ಚಿ. ಬಳಿಕ ತುದಿಯಿಂದ ನಿಧಾನಕ್ಕೆ ಟೈಟಾಗಿ ರೋಲ್ ಮಾಡಿ. ಈ ರೋಲ್ ಮೇಲೆಯೂ ಹಿಟ್ಟು ಹಚ್ಚಿ. ಇದೇ ರೀತಿ ನೀವೆಷ್ಟು ಎಲೆಯನ್ನ ತೆಗೆದುಕೊಂಡಿದ್ದೀರೋ ಅಷ್ಟನ್ನ ರೋಲ್ ಮಾಡಿಕೊಳ್ಳಿ.

* ಒಂದು ಇಡ್ಲಿ ಕುಕ್ಕರ್‍ನಲ್ಲಿ 6-7 ಕಪ್ ನೀರು ಹಾಕಿ, ಸ್ವಲ್ಪ ಬಿಸಿಯಾದ ನಂತರ ಇಡ್ಲಿ ಪ್ಲೇಟ್ ಇಟ್ಟು ಅದರ ಮೇಲೆ ಈ ರೋಲ್ಸ್‍ನ್ನು ಇಟ್ಟು ಹಬೆಯಲ್ಲಿ ಬೇಯಿಸಿ. ಇದನ್ನ ಕುಕ್ಕರ್‍ನಲ್ಲೂ ಬೇಯಿಸಬಹುದು. ಆದ್ರೆ ವಿಶಲ್ ಹಾಕ್ಬೇಡಿ. ವಿಶಲ್ ಬದಲಾಗಿ ಕುಕ್ಕರ್ ಮೇಲೆ ಒಂದು ಲೋಟವನ್ನು ಉಲ್ಟಾ ಹಾಕಿ.

* ಹೀಗೆ ಕನಿಷ್ಟ 20ರಿಂದ 30 ನಿಮಿಷ ಬೇಯಿಸಿ. ಬೆಂದ ಬಳಿಕ ಒಲೆಯಿಂದ ತೆಗೆದು ಪೂರ್ತಿ ತಣ್ಣಗಾದ ನಂತ್ರ ಸಣ್ಣಗೆ ಕಟ್ ಮಾಡಿ ಒಗ್ಗರಣೆ ಹಾಕಿ ಸವಿಯಬಹುದು.

You might also like More from author

Leave A Reply

Your email address will not be published.

badge