Wednesday, 25th April 2018

Recent News

ಕೊಪ್ಪಳ: ಕರ್ನಾಟಕದ ಎರಡನೇ ತಿರುಪತಿ ಕನಕಾಚಲಪತಿ ಅದ್ಧೂರಿ ಕಲ್ಯಾಣೋತ್ಸವ

ಕೊಪ್ಪಳ: ಕರ್ನಾಟಕದ ಎರಡನೇ ತಿರುಪತಿ ಎಂದು ಕರೆಯಲ್ಪಡುವ ಕನಕಾಚಲಪತಿ ಕಲ್ಯಾಣೋತ್ಸವ ಅದ್ಧೂರಿಯಾಗಿ ಕೊಪ್ಪಳದಲ್ಲಿ ನಡೆಯಿತು.

ಕನಕಾಚಲ ಲಕ್ಷ್ಮೀ ನರಸಿಂಹ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ 14 ದಿನಗಳ ಕಾಲ ಉತ್ಸವ ನಡೆಯುತ್ತದೆ. ತಿರುಪತಿಯಲ್ಲಿ ಶ್ರೀನಿವಾಸ ಪದ್ಮಾವತಿ ಕಲ್ಯಾಣೋತ್ಸವ ನಡೆಯುವಂತೆ ಕನಕಗಿರಿಯ ಶ್ರೀ ಕನಕಾಚಲನ ಕಲ್ಯಾಣವು ನಡೆಯುತ್ತದೆ. ಈ ಕಾರ್ಯಕ್ರಮದಲ್ಲಿ ಹೆಣ್ಣಿನ ಕಡೆಯಿಂದ ಶಾಸಕ ಶಿವರಾಜ್ ತಂಗಡಗಿ ಅವರ ಧರ್ಮಪತ್ನಿ ಶ್ರೀಮತಿ ವಿದ್ಯಾ ತಂಗಡಗಿ ಭಾಗವಹಿಸಿದ್ದರು.

ಕನಕಾಚಲನ ವಿವಾಹ ಮಹೋತ್ಸವ ಶ್ರೀ ದೇವಿ ಹಾಗೂ ಭೂದೇವಿಯರೊಂದಿಗೆ ನಡೆದು ನಂತರದಲ್ಲಿ ಬೆಳಗಿನ ಜಾವ ಶ್ರೀ ಕನಕಾಚಲ ವಿವಾಹ ಮೆರವಣಿಗೆ ಗರುಡ ವಾಹನದಲ್ಲಿ ನಡೆಯುತ್ತದೆ. ಸಾವಿರಾರು ಭಕ್ತರು ದೀವಟಿಗೆಯಲ್ಲಿ ಕರ್ಪೂರ ಹಾಗೂ ಕೊಬ್ಬರಿ ದಹಿಸುತ್ತಾ, ಮೆರವಣಿಗೆಯಲ್ಲಿ ಗೋವಿಂದಾ.. ಗೋವಿಂದಾ.. ಎಂದು ಸ್ಮರಣೆ ಮಾಡುತ್ತಾ ಗ್ರಾಮದ ಪಶ್ಚಿಮ ದಿಕ್ಕಿನಲ್ಲಿರುವ ಹನುಮಂತನ ದೇವಸ್ಥಾನಕ್ಕೆ ತೆರಳಿ ಮತ್ತೆ ಹಿಂದಿರುಗುತ್ತಾರೆ.

ಈ ಕಲ್ಯಾಣೋತ್ಸವ ನಂತರ ನಡೆಯುವ ಗರುಡೋತ್ಸವ ನೋಡಲು ರಾಜ್ಯವಲ್ಲದೇ ನೆರೆಯ ಆಂಧ್ರ ಪ್ರದೇಶ, ಮಹಾರಾಷ್ಟ್ರಗಳಿಂದ ಮತ್ತು ರಾಜ್ಯದ ನಾನಾ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಶ್ರೀಮಂತ ದೇವರು ಎಂದು ಹೆಸರು ಪಡೆದ ತಿರುಪತಿಗೆ ಹೋಗಲಾರದ ಭಕ್ತರು ಈ ಬಡವರ ತಿರುಪತಿಯೆಂದು ಹೆಸರಾದ ಕನಕಗಿರಿಗೆ ಬಂದು ತಮ್ಮ ದಾಸೋಹ ಸೇವೆಯನ್ನು ಸಲ್ಲಿಸುತ್ತಾರೆ.

ಕಣ್ಣಿದ್ದವರು ಕನಕಗಿರಿ ನೋಡಬೇಕು. ಕಾಲಿದ್ದವರು ಹಂಪಿ ನೋಡಬೇಕು ಎನ್ನುವ ನಾಣ್ಣುಡಿಯಂತೆ ಕನಕಗಿರಿಯೂ ಕೂಡಾ ಒಂದು ಅಪೂರ್ವ ಪುಣ್ಯ ಕ್ಷೇತ್ರವಾಗಿದ್ದು ಎರಡನೇಯ ತಿರುಪತಿಯೆಂತಲೂ ಈ ಕ್ಷೇತ್ರವನ್ನು ಕರೆಯುತ್ತಾರೆ.

 

Leave a Reply

Your email address will not be published. Required fields are marked *