Wednesday, 29th January 2020

ಎಲ್‍ಒಸಿ ಬಳಿ ಪಾಕ್ ದಾಳಿ – ಇಬ್ಬರು ಸಾವು, ಆರು ಮಂದಿಗೆ ಗಾಯ

ಶ್ರೀನಗರ: ಎಲ್‍ಒಸಿ(ಗಡಿ ನಿಯಂತ್ರಣ ರೇಖೆ) ಬಳಿ ಪಾಕಿಸ್ತಾನ ಸೈನಿಕರು ಮಾಡಿದ ಅಪ್ರಚೋದಿತ ಗುಂಡಿನ ದಾಳಿಗೆ ಇಬ್ಬರು ನಾಗರಿಕರು ಸಾವನ್ನಪ್ಪಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಬಂಡಿ ಚೆಚಿಯನ್ ಪ್ರದೇಶದ ಮೇಲೆ ಪಾಕಿಸ್ತಾನ ಪಡೆಗಳು ಅಪ್ರಚೋದಿತ ಗುಂಡಿನ ದಾಳಿ ನಡೆಸಿವೆ ಎಂದು ಭಾರತೀಯ ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ ಇದಕ್ಕೆ ಭಾರತೀಯ ಸೇನೆ ಸೂಕ್ತವಾದ ಪ್ರತೀಕಾರ ತೀರಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ.

ಇಂದು ಮಧ್ಯಾಹ್ನ 2:30ರ ಸುಮಾರಿಗೆ ಭಾರತದ ನಾಗರೀಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಸೈನಿಕರು ಗುಂಡಿನ ದಾಳಿ ಮತ್ತು ಶೆಲ್ ದಾಳಿ ಮಾಡಿದ್ದಾರೆ. ಈ ದಾಳಿಯಲ್ಲಿ ಗುಲ್ನಾಜ್ ಅಖ್ತರ್ (35) ಮತ್ತು ಶೋಹೈಬ್ (16) ಮೃತಪಟ್ಟಿದ್ದಾರೆ ಮತ್ತು ಆರು ಜನ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದೇವೆ ಎಂದು ಸೇನೆ ತಿಳಿಸಿದೆ.

ಕಳೆದ ಒಂದು ವಾರದಿಂದ ಪಾಕಿಸ್ತಾನ ಎಲ್‍ಒಸಿ ಬಳಿ ತನ್ನ ಪುಂಡಾಟ ಮುಂದುವರಿಸಿದ್ದು, ಭಾರತೀಯ ನಾಗರಿಕ ಪ್ರದೇಶದ ಮೇಲೆ ಅಪ್ರಚೋದಿತ ಶೆಲ್ ದಾಳಿ ಮತ್ತು ಗುಂಡಿನ ದಾಳಿ ನಡೆಸುತ್ತಿದೆ. ಕಳೆದ ಮೂರು ದಿನಗಳಲ್ಲಿ ಇದಕ್ಕೆ ಎರಡನೇ ಬಾರಿ ಪೂಂಚ್ ಜಿಲ್ಲೆಯ ಎಲ್‍ಒಸಿ ಬಳಿ ಪಾಕಿಸ್ತಾನ ಗುಂಡಿನ ದಾಳಿ ಮಾಡುತ್ತಿದೆ. ನವೆಂಬರ್ 25 ರಿಂದ ಸತತವಾಗಿ ಅಖ್ನೂರ್ ವಲಯದಲ್ಲಿ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಲೇ ಇದೆ ಎಂದು ಸೇನೆ ಹೇಳಿದೆ.

Leave a Reply

Your email address will not be published. Required fields are marked *