Saturday, 23rd June 2018

Recent News

ವಿಧವೆ ತಾಯಿಗೆ ವರನನ್ನು ಹುಡುಕಿ ಮದ್ವೆ ಮಾಡಿಸಿದ ಮಗಳು

ಜೈಪುರ: ಎಲ್ಲಾ ಸಾಮಾಜಿಕ ನಿಯಮಗಳ ವಿರುದ್ಧ ಹೋರಾಡಿ ವಿವಾಹಿತ ತಾಯಿಗೆ ಮರು ಮದುವೆ ಮಾಡಿಸಿದ ರಾಜಸ್ಥಾನದ ಹುಡುಗಿಯ ಕಥೆ ಇದು.

ಸಂಹಿತಾ ಅಗರ್‍ವಾಲ್ ತನ್ನ ತಾಯಿಗೆ ಮರು ಮದುವೆ ಮಾಡಿಸಿ ಈಗ ಸುದ್ದಿಯಾಗಿದ್ದಾರೆ. ಎರಡು ವರ್ಷಗಳ ಹಿಂದೆ ತನ್ನ 52 ವರ್ಷದ ತಂದೆಯನ್ನು ಸಂಹಿತಾ ಅಗರ್‍ವಾಲ್ ಕಳೆದುಕೊಂಡಿದ್ದರು. ತಂದೆ ಮೃತಪಟ್ಟ ಬಳಿಕ ತಾಯಿ ಬೇಸರಗೊಂಡಿರುವುದನ್ನು ಗಮನಿಸಿ ಅವರ ಏಕಾಂಗಿತನವನ್ನು ದೂರ ಮಾಡಲು ಅವರ ಮನಒಲಿಸಿ ಮತ್ತೊಂದು ಮದುವೆ ಮಾಡಿ ಯಶಸ್ವಿಯಾಗಿದ್ದಾರೆ.

ತಾಯಿಗೆ ಮದುವೆ ಮಾಡಿದ್ದು ಹೀಗೆ:
ನನ್ನ ತಂದೆ ಸುಮಾರು 2 ವರ್ಷಗಳ ಹಿಂದೆ ನಿಧನರಾದದರು. ಈ ವಿಚಾರ ತಿಳಿದು ನನಗೆ, ಸಹೋದರಿ, ತಾಯಿಗೆ ಆಘಾತವಾಯಿತು. ಈ ನೋವನ್ನು ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಜೀವನವೇ ಬೇಡವೆನ್ನಿಸಿತು. ಈ ಮಧ್ಯೆ ಮುಂದೆ ಜೀವನದ ದಿಕ್ಕೆ ತೋಚದಂತೆ ಏನು ಮಾಡುವುದು ಎಂದು ಬೇಸರದಲ್ಲಿದ್ದೆವು. ಈ ವೇಳೆ ದುಃಖವನ್ನು ಮರೆಯಲು ನನ್ನ ಅಕ್ಕ ಕೆಲಸದಲ್ಲಿ ಬ್ಯುಸಿಯಾದರು. ಆದರೆ ನನಗೆ ಮತ್ತು ತಾಯಿಗೆ ಅಪ್ಪನ ಕಳೆದುಕೊಂಡ ನೋವನ್ನು ಮರೆಯಲು ಸಾಧ್ಯವಾಗಲಿಲ್ಲ.

ಎಂದಿನಂತೆ ನಾನು ಪ್ರತಿದಿನ ಕೆಲಸ ಮುಗಿಸಿ ಕಚೇರಿಯಿಂದ ಹೋಗುತ್ತಿದ್ದೆ. ಆದರೆ ಕೆಲಸ ಮುಗಿಸಿ ಮನೆಗೆ ಬರುವಾಗ ಅಮ್ಮ ಮನೆಯ ಹೊರಗಡೆ ದುಃಖದಲ್ಲಿ ಕುಳಿತಿರುತ್ತಿದ್ದರು. ನನ್ನ ಜೊತೆ ಕೂಡ ಮಾತನಾಡುತ್ತಿರಲಿಲ್ಲ. ಬಳಿಕ ನಾನೇ ಕೆಲವು ದಿನಗಳವರೆಗೆ ಅವರೇ ಪತಿ ಕಳೆದುಕೊಂಡ ನೋವು, ಯೋಚನೆಗಳಿಂದ ಹೊರ ಬಂದು ಮಾತನಾಡಿಸುತ್ತಾರೆ ಎಂದು ಸುಮ್ಮನಾದೆ.

ತಿಂಗಳುಗಳು ಕಳೆದು ಹೋದರೂ ಅಮ್ಮ ಅವರ ನೋವಿನಿಂದ ಹೊರ ಬರಲೇ ಇಲ್ಲ. ಮೌನವಾಗಿಯೇ ಇದ್ದರು. ಈ ಸಂದರ್ಭದಲ್ಲಿ ನಾನು ಕೆಲಸಕ್ಕಾಗಿ ಅಮ್ಮನನ್ನು ಬಿಟ್ಟು ಮನೆಯಿಂದ ದೂರ ಹೋಗಬೇಕಾದ ಸಂದರ್ಭ ಬಂತು. ಆದರೆ ನನಗೆ ತಾಯಿಯನ್ನು ಬಿಟ್ಟು ಹೋಗುವುದಕ್ಕೆ ಮನಸ್ಸಾಗಲಿಲ್ಲ. ಅದಕ್ಕಾಗಿ ಕಷ್ಟವಾದರೂ ಪರವಾಗಿಲ್ಲ ಎಂದು ನಮ್ಮ ನಗರದಲ್ಲಿ ಕೆಲಸವನ್ನು ಪಡೆಯಲು ಪ್ರಯತ್ನಿಸಿದೆ. ಆದರೆ ಅದು ಸಾಧ್ಯವಾಗದೇ ಕೊನೆಗೆ ನಾನು ಅಮ್ಮನ ಬಿಟ್ಟು ಬೇರೆ ಹೋಗಲೇಬೇಕಾಯಿತು. ಅಮ್ಮನನ್ನು ಬಿಟ್ಟು ಹೋಗಿದ್ದಕ್ಕೆ ನನ್ನನ್ನು ನಾನೇ ಶಪಿಸಿಕೊಂಡೆನು. ದೂರ ಹೋದರೂ ಪ್ರತಿ ವಾರ ಎರಡು ದಿನ ಅಮ್ಮನನ್ನು ಭೇಟಿಯಾಗುಲು ಬರುತ್ತಿದ್ದೆ. ಇದರಿಂದ ಅವರಿಗೂ ಸಂತೋಷವಾಗುತ್ತಿತ್ತು. ಆದರೆ ನಾನು ನನ್ನ ವೃತ್ತಿಜೀವನವನ್ನು ಆಯ್ಕೆ ಮಾಡಿಕೊಂಡು ಸ್ವಾರ್ಥಿಯಾಗಿದ್ದೇನೆ ಎನ್ನಿಸಿತು. ಆದರೆ ಅಮ್ಮ ಯಾವಾಗಲೂ ನಿನ್ನ ಕೆಲಸವನ್ನು ಕಳೆದುಕೊಳ್ಳಬೇಡ ಎಂದು ಧೈರ್ಯ ಹೇಳುತ್ತಿದ್ದರು.

ಮೂರು ತಿಂಗಳ ಬಳಿಕ ನಾನು ಯೋಚನೆ ಮಾಡಿ ತಾಯಿಗಾಗಿ ಸಂಗಾತಿಯನ್ನು ಹುಡುಕಲು ನಿರ್ಧಾರ ಮಾಡಿಕೊಂಡೆ. ಅವರ ಸಂತೋಷ ಮತ್ತು ಭರವಸೆ, ನೋವುಗಳನ್ನು ಹಂಚಿಕೊಳ್ಳಲು ಒಬ್ಬ ಜೀವನ ಸಂಗಾತಿಯ ಅವಶ್ಯಕತೆ ಇದೆ ಎಂದು ಈ ನಿರ್ಧಾರ ಮಾಡಿದೆ. ನಂತರ ತಾಯಿ ಹೆಸರಿನಲ್ಲಿ ಮ್ಯಾಟ್ರಿಮೋನಿಯ ವೆಬ್‍ಸೈಟ್‍ನಲ್ಲಿ ಒಂದು ಖಾತೆಯನ್ನು ಸೃಷ್ಟಿಸಿ ಅನೇಕ ವರಗಳನ್ನು ಹುಡುಕಾಡಿದೆ. ಯಾರು ಕೂಡ ನನಗೆ ಒಪ್ಪಿಗೆಯಾಗಿಲ್ಲ. ಅಂತಿಮವಾಗಿ ಒಬ್ಬರು ನನಗೆ ಇಷ್ಟವಾದರು. ಅವರು ಕೂಡ ನನ್ನ ಅಮ್ಮನಂತೆಯೇ ಸರ್ಕಾರಿ ಕೆಲಸವನ್ನು ಹೊಂದಿದ್ದರು. ಜೊತೆಗೆ ಬುದ್ಧಿವಂತ ಮತ್ತು ಪ್ರೌಢರಾಗಿದ್ದರು.

ಸಂಗಾತಿಯನ್ನು ಹುಡುಕುವ ಕೆಲಸ ಮುಗಿದರೂ ತಾಯಿಯನ್ನು ಒಪ್ಪಿಸುವುದು ತುಂಬಾ ಕಷ್ಟವೆನಿಸಿತು. ಆದರೂ ಬಿಡದೇ ಅಮ್ಮನ ಜೊತೆ ಮಾತನಾಡಿದೆ. ಅಮ್ಮ ಈ ಭೂಮಿಯ ಮೇಲೆ ಇರುವ ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಜೀವನವನ್ನು ತಮಗೆ ಇಷ್ಟವಾದ ರೀತಿಯಲ್ಲಿ ಬದುಕುವ ಹಕ್ಕನ್ನು ಹೊಂದಿದ್ದಾರೆ. ಏಕೆಂದರೆ ಈ ಸಮಾಜದಲ್ಲಿ ವಯಸ್ಸಾದ ಮೇಲೆ ನಮ್ಮೊಂದಿಗೆ ಯಾರು ಇರುವುದಿಲ್ಲ. ನಮಗೆ ಅನಾರೋಗ್ಯ ಸಮಸ್ಯೆ ಎದುರಾದಾಗ ನಮ್ಮ ಸಹಾಯಕ್ಕೆ ಸಂಬಂಧಿಕರು ಯಾರು ಬರುವುದಿಲ್ಲ. ಆದ್ದರಿಂದ ನಮ್ಮ ಜೀವನದ ಸಂಗಾತಿ ಮಾತ್ರ ನಮ್ಮ ಜೊತೆ ಕೊನೆತನಕ ಇರುತ್ತಾರೆ. ನಿಮ್ಮ ಜೀವನದಲ್ಲಿ ಇರುವ ಭಾವನೆಗಳನ್ನು ಹಂಚಿಕೊಳ್ಳಲು ಒಬ್ಬ ಸಂಗಾತಿಯ ಅಗತ್ಯವಿದೆ ಯೋಚಿಸಿ ಎಂದು ನಾನು ತಾಯಿಗೆ ತಿಳಿಸಿದೆ.

ನಾನು ಇಷ್ಟೆಲ್ಲ ವಿವರವಾಗಿ ವಿವರಿಸಿದ ಮೇಲೆ ಅಂತಿಮವಾಗಿ ತಾಯಿ ಮದುವೆಗೆ ಒಪ್ಪಿಗೆ ಸೂಚಿಸಿದರು. ಕೆಲ ದಿನದ ಹಿಂದೆ ತಾಯಿಯ ಮದುವೆ ನಡೆದಿದ್ದು, ಈಗ ನೋವುಗಳನ್ನು ಮರೆತು ಅವರು ತುಂಬಾ ಸಂತೋಷವಾಗಿದ್ದಾರೆ ಎಂದು ಸಂಹಿತಾ ಹೇಳಿದರು.

Leave a Reply

Your email address will not be published. Required fields are marked *