Saturday, 20th January 2018

MRPಗಿಂತ ಹೆಚ್ಚಿನ ಬೆಲೆಗೆ ನೀರಿನ ಬಾಟಲಿ ಮಾರುವವರಿಗೆ ಜೈಲು, ದಂಡ- ಸುಪ್ರೀಂಗೆ ಸರ್ಕಾರ ಹೇಳಿಕೆ

ನವದೆಹಲಿ: ರೆಸ್ಟೊರೆಂಟ್, ಹೋಟೆಲ್, ಮಲ್ಟಿಪ್ಲೆಕ್ಸ್ ಹಾಗೂ ಇನ್ನಿತರ ಸ್ಥಳಗಳಲ್ಲಿ MRPಗಿಂತ ಹೆಚ್ಚಿನ ಬೆಲೆಗೆ ಪ್ಯಾಕೇಜ್ಡ್ ನೀರಿನ ಬಾಟಲಿಗಳನ್ನ ಮಾರುವುದು ಗೊತ್ತೇ ಇದೆ. ಆದ್ರೆ ಹೀಗೆ ಹೆಚ್ಚಿನ ಬೆಲೆಗೆ ನೀರಿನ ಬಾಟಲಿ ಮಾರಾಟ ಮಾಡಿದ್ರೆ ದಂಡ ತೆರಬೇಕಾಗುತ್ತದೆ ಅಥವಾ ಜೈಲು ಶಿಕ್ಷೆ ಎದುರಿಸಬೇಕು ಎಂದು ಸರ್ಕಾರ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದೆ.

ಫೆಡರೇಷನ್ ಆಫ್ ಹೋಟೆಲ್ ಅಂಡ್ ರೆಸ್ಟೊರೆಂಟ್ ಅಸೋಸಿಯೇಷನ್ಸ್ ಆಫ್ ಇಂಡಿಯಾ(FHRAI) ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆ ನೀಡಿರೋ ಗ್ರಾಹಕ ವ್ಯವಹಾರಗಳ ಸಚಿವಾಲಯ, MRPಗಿಂತ ಹೆಚ್ಚಿನ ಬೆಲೆಗೆ ಪ್ಯಾಕೇಜ್ಡ್ ನೀರಿನ ಬಾಟಲಿ ಮಾರಾಟ ಮಾಡುವುದು ತೆರಿಗೆ ವಂಚನೆಗೆ ಎಡೆ ಮಾಡಿಕೊಡುತ್ತದೆ ಎಂದು ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.

ಹೋಟೆಲ್‍ನವರು ನಿರ್ದಿಷ್ಟ ದರಕ್ಕೆ ನೀರಿನ ಬಾಟಲಿ ಖರೀದಿಸಿರುತ್ತಾರೆ. ಅದನ್ನ MRPಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ರೆ ಸೇವಾ ತೆರಿಗೆ, ಅಬಕಾರಿ ಸುಂಕ ರೂಪದಲ್ಲಿ ಸರ್ಕಾರಕ್ಕೆ ಬರಬೇಕಾದ ಹೆಚ್ಚುವರಿ ಆದಾಯಕ್ಕೆ ನಷ್ಟ ಉಂಟಾಗುತ್ತದೆ ಎಂದು ಸರ್ಕಾರ ಕೋರ್ಟ್ ಗೆ ತಿಳಿಸಿದೆ ಎಂದು ವರದಿಯಾಗಿದೆ.

ಪ್ಯಾಕೇಜ್ಡ್ ಉತ್ಪನ್ನಗಳನ್ನ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಲೀಗಲ್ ಮೆಟ್ರೋಲಜಿ ಆ್ಯಕ್ಟ್ ಪ್ರಕಾರ ಅಪರಾಧ. ಯಾವುದೇ ಪ್ರೀ ಪ್ಯಾಕೇಜ್ಡ್ ಉತ್ಪನ್ನದ ಮೇಲೆ ನಮೂದಿಸಿರುವುದಕ್ಕೆ ಬದ್ಧವಾಗಿರದೆ ಅದನ್ನ ಮಾರಾಟ, ವಿತರಣೆ ಅಥವಾ ಡೆಲಿವರಿ ಮಾಡುವಾಗ ಸಿಕ್ಕಿಬಿದ್ದರೆ ಮೊದಲನೇ ಅಪರಾಧಕ್ಕಾಗಿ 25 ಸಾವಿರ ರೂ ದಂಡ ಹಾಕುವ ಮೂಲಕ ಶಿಕ್ಷಿಸಲಾಗುತ್ತದೆ ಎಂದು ಲೀಗಲ್ ಮೆಟ್ರೊಲಜಿ ಕಾಯ್ದೆಯ ಸೆಕ್ಷನ್ 36 ಹೇಳುತ್ತದೆ. ಎರಡನೇ ಅಪರಾಧಕ್ಕೆ 50 ಸಾವಿರ ರೂ. ಹಾಗೂ ನಂತರದ ಅಪರಾಧಗಳಿಗೆ 1 ಲಕ್ಷ ರೂ ದಂಡ ಅಥವಾ 1 ವರ್ಷ ಜೈಲು ಶಿಕ್ಷೆ ಅಥವಾ ಎರಡೂ ಶಿಕ್ಷೆ ವಿಧಿಸಲಾಗುತ್ತದೆ ಎಂದು ಹೇಳಿದೆ.

2009ರ ಕಾಯ್ದೆಯಡಿ ನೀರಿನ ಬಾಟಲಿಗಳನ್ನ ಹೆಚ್ಚಿನ ಬೆಲೆಗೆ ಮಾರಾಟ ಮಾಡೋ ರೆಸ್ಟೊರೆಂಟ್ ಹಾಗೂ ಹೋಟೆಲ್ ವಿರುದ್ಧ ಕ್ರಮ ಕೈಗೊಳ್ಳುವ ಸರ್ಕಾರದ ಅಧಿಕಾರವನ್ನು ದೆಹಲಿ ಹೈ ಕೋರ್ಟ್ 2015ರ ಆಗಸ್ಟ್ ನಲ್ಲಿ ಎತ್ತಿ ಹಿಡಿದಿತ್ತು. ಈ ಆದೇಶಕ್ಕೆ ವಿರುದ್ಧವಾಗಿ FHRAI ಮರುಪರಿಶೀಲನಾ ಅರ್ಜಿ ಸಲ್ಲಿಸಿತ್ತು. ಆದ್ರೆ ಅದು ತಿರಸ್ಕೃತವಾದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಲೇರಿತ್ತು.

ಹೋಟೆಲ್, ಮಲ್ಟಿಪ್ಲೆಕ್ಸ್ ಹಾಗೂ ವಿಮಾನ ನಿಲ್ದಾಣ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ಪ್ಯಾಕೇಜ್ಡ್ ನೀರಿನ ಬಾಟಲಿ ಹಾಗೂ ತಂಪು ಪಾನೀಯವನ್ನು ನಿಗದಿತ ಬೆಲೆಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದ್ರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಕಳೆದ ವರ್ಷ ಅಕ್ಟೋಬರ್ ನಲ್ಲಿ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಟ್ವೀಟ್ ಮಾಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

Leave a Reply

Your email address will not be published. Required fields are marked *