Thursday, 22nd March 2018

ಎಷ್ಟು ಬೇಗ ಸರ್ಕಾರ ತೊಲಗಿದರೆ ಅಷ್ಟು ಬೇಗ ರಾಜ್ಯದ ಜನರಿಗೆ ಅನುಕೂಲ: ಸಿಟಿ ರವಿ

ಬೆಂಗಳೂರು: ಎಷ್ಟು ಬೇಗ ಸರ್ಕಾರ ತೊಲಗಿದರೆ ಅಷ್ಟು ಬೇಗ ರಾಜ್ಯದ ಜನರಿಗೆ ಅನುಕೂಲ ಎಂದು ಬಿಜೆಪಿ ಶಾಸಕ ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ.

ಡಿಐಜಿ ರೂಪಾ ಅವರನ್ನು ವರ್ಗಾವಣೆಗೊಳಿಸಿದ ಸಂಬಂಧವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರ ಸತ್ಯದ ಮೇಲೆ ಸಮಾಧಿ ಕಟ್ಟುವ ಕೆಲಸ ಮಾಡುತ್ತಿದೆ. ಈ ಹಿಂದೆ ಗಂಭೀರ ಆರೋಪ ಪ್ರಕರಣಗಳಿಗೆ ಕ್ಲೀನ್ ಚಿಟ್ ಕೊಟ್ಟು ಎಡವಟ್ಟು ಮಾಡಿದ್ದಾರೆ. ಅಧಿಕಾರಿಗಳ ಮನೋಸ್ಥೈರ್ಯ ಕುಗ್ಗಿಸುವ ಕೆಲಸ ಸರ್ಕಾರದಿಂದ ಆಗುತ್ತಿದೆ ಎಂದು ಅವರು ಕಿಡಿಕಾರಿದರು.

ಸೆರೆಮನೆ ಅರಮನೆಯಾಗಿದ್ದು, ಶಿಕ್ಷೆಯಾದವರಿಗೆ ಹೇಗೆಲ್ಲ ಸೌಲಭ್ಯ ಸಿಗಲಿದೆ ಎನ್ನುವುದನ್ನು ಸ್ಪಷ್ಟವಾಗಿ ವರದಿ ರವಾನಿಸಿದ್ದಾರೆ. ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ನಿಷ್ಪಕ್ಷಪಾತವಾಗಿ ತನಿಖೆ ನಡಸಬೇಕಿತ್ತು ಎಂದು ಅವರು ಹೇಳಿದರು.

ಈ ಸರ್ಕಾರ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುವ ಕೆಲಸ ಮಾಡುತ್ತಿದೆ ಎನ್ನುವುದು ಇದರಿಂದ ಸಾಬೀತಾಗಿದೆ. ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು. ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಮುಂದಿನ ಹೋರಾಟದ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಿದ ಪ್ರಕರಣವನ್ನು ಬಯಲಿಗೆ ಎಳೆದ ಕಾರಾಗೃಹ ಇಲಾಖೆಯ ಡಿಐಜಿ ರೂಪಾ ಅವರನ್ನು ಸಂಚಾರ ಮತ್ತು ರಸ್ತೆ ಸುರಕ್ಷತಾ ಆಯುಕ್ತರನ್ನಾಗಿ ನೇಮಿಸಿ ವರ್ಗಾವಣೆ ಮಾಡಲಾಗಿದೆ.

Leave a Reply

Your email address will not be published. Required fields are marked *