Monday, 18th June 2018

Recent News

ಭಾರತಕ್ಕೆ ಸರಣಿ: ಲಂಕಾ ಆಟಗಾರರ ವಿರುದ್ಧ ರೊಚ್ಚಿಗೆದ್ದ ಪ್ರೇಕ್ಷಕರು

ಕ್ಯಾಂಡಿ: ಶ್ರೀಲಂಕಾ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯವನ್ನು ಭಾರತ 6 ವಿಕೆಟ್ ಗಳಿಂದ ಜಯಗಳಿಸುವ ಮೂಲಕ ಇನ್ನು 2 ಪಂದ್ಯ ಬಾಕಿ ಇರುವಂತೆಯೇ ಮೈಕ್ರೋಮ್ಯಾಕ್ಸ್ ಸರಣಿಯನ್ನು ಜಯಗಳಿಸಿದೆ.

218 ರನ್‍ಗಳ ಸುಲಭ ಸವಾಲನ್ನು ಪಡೆದ ಭಾರತ ರೋಹಿತ್ ಶರ್ಮಾ ಅವರ ಆಕರ್ಷಕ ಶತಕ, ಧೋನಿ ಅರ್ಧಶತಕ ದಿಂದಾಗಿ ಜಯಗಳಿಸಿತು.

44 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 210 ರನ್ ಗಳಿಸಿದ್ದಾಗ ಶ್ರೀಲಂಕಾ ಆಟಗಾರರ ಕಳಪೆ ಪ್ರದರ್ಶನಕ್ಕೆ ರೊಚ್ಚಿಗೆದ್ದ ಪ್ರೇಕ್ಷಕರು ಕ್ರೀಡಾಂಗಣಕ್ಕೆ ಬಾಟಲಿಗಳನ್ನು ಎಸೆದು ಆಕ್ರೋಶವನ್ನು ವ್ಯಕ್ತಪಡಿಸಿದರು. ಬೌಂಡರಿ ಗೆರೆಯ ಬಳಿ ಬಾಟಲಿಗಳನ್ನು ಎಸೆದ ಹಿನ್ನೆಲೆಯಲ್ಲಿ ರೆಫ್ರಿ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಿದರು.

ಈ ವೇಳೆ ಬಾಟಲಿಗಳನ್ನು ಎಸೆದ ಸ್ಥಳದಲ್ಲಿದ್ದ ಪ್ರೇಕ್ಷಕರನ್ನು ಖಾಲಿ ಮಾಡಿದ ನಂತರ ಪಂದ್ಯ ಮತ್ತೆ 35 ನಿಮಿಷದ ಬಳಿಕ ಆರಂಭವಾಯಿತು. ಅಂತಿಮವಾಗಿ 45.1 ಓವರ್ ಗಳಲ್ಲಿ 218 ರನ್ ಹೊಡೆಯುವ ಮೂಲಕ ಭಾರತ ಪಂದ್ಯವನ್ನು ಗೆದ್ದುಕೊಂಡಿತು.

15.1 ಓವರ್ ಗಳಲ್ಲಿ 61 ರನ್ ಗಳಿಸಿದ್ದಾಗ 4 ವಿಕೆಟ್ ಕಳೆದುಕೊಂಡಿದ್ದ ವೇಳೆ ರೋಹಿತ್ ಶರ್ಮಾ ಮತ್ತು ಧೋನಿ ಮುರಿಯದ 5ನೇ ವಿಕೆಟ್‍ಗೆ 157 ರನ್ ಜೊತೆಯಾಟವಾಡುವ ಮೂಲಕ ಭಾರತಕ್ಕೆ ವಿಜಯವನ್ನು ತಂದಿಟ್ಟರು.

50 ಎಸೆತದಲ್ಲಿ ಅರ್ಧಶತಕ ಹೊಡೆದ ರೋಹಿತ್ 118 ಎಸೆತದಲ್ಲಿ ಕ್ರಿಕೆಟ್ ಬಾಳ್ವೆಯ 12 ನೇ ಶತಕ ಹೊಡೆದರು. ಅಂತಿಮವಾಗಿ ರೋಹಿತ್ ಶರ್ಮಾ 124 ರನ್(145 ಎಸೆತ, 16 ಬೌಂಡರಿ, 2 ಸಿಕ್ಸರ್) ಗಳಿಸಿ ಔಟಾಗದೇ ಉಳಿದರು. 74 ಎಸೆತದಲ್ಲಿ ಅರ್ಧಶತ ಹೊಡೆದ ಧೋನಿ ಅಂತಿಮವಾಗಿ 67ರನ್(86 ಎಸೆತ, 4 ಬೌಂಡರಿ, 1ಸಿಕ್ಸರ್) ಗಳಿಸಿ ಅಜೇಯರಾಗಿ ಉಳಿದರು.

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ್ದ ಲಂಕಾವನ್ನು ಬೂಮ್ರಾ ಕಟ್ಟಿ ಹಾಕಿದ್ದ ಪರಿಣಾಮ 9 ವಿಕೆಟ್ ನಷ್ಟಕ್ಕೆ 217 ರನ್‍ಗಳಿಸಿತು. ಲಂಕಾ ಪರ ತಿರಮಣೆ 80 ರನ್(105 ಎಸೆತ, 5 ಬೌಂಡರಿ, 1 ಸಿಕ್ಸರ್) ಆರಂಭಿಕ ಆಟಗಾರ ದಿನೇಶ್ ಚಾಂಡಿಮಲ್ 36 ರನ್, ಶ್ರೀವರ್ಧನ 29 ರನ್ ಹೊಡೆದರು.

ಭಾರತದ ಪರ ಜಸ್‍ಪ್ರಿತ್ ಬುಮ್ರಾ 27 ರನ್ ನೀಡಿ 5 ವಿಕೆಟ್ ಕಿತ್ತರೆ, ಹಾರ್ದಿಕ್ ಪಾಂಡ್ಯಾ, ಅಕ್ಷರ್ ಪಟೇಲ್, ಕೇದಾರ್ ಜಾದವ್ ತಲಾ ಒಂದೊಂದು ವಿಕೆಟ್ ಪಡೆದರು.

 

 

 

Leave a Reply

Your email address will not be published. Required fields are marked *