Friday, 25th May 2018

Recent News

ಆಸೀಸ್ ವಿರುದ್ಧ ಕ್ಲೀನ್ ಸ್ವೀಪ್ ಮಾಡಿದ್ರೆ ಟೀಂ ಇಂಡಿಯಾ ಟಿ-20ಯಲ್ಲಿ ನಂ.2

ರಾಂಚಿ: ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಮೂರು ಟಿ-20 ಪಂದ್ಯಕ್ಕೆ ಟೀಂ ಇಂಡಿಯಾ ಸಜ್ಜಾಗಿದೆ. ಒಂದು ವೇಳೆ 3 ಪಂದ್ಯಗಳ ಸರಣಿಯನ್ನು ಟೀಂ ಇಂಡಿಯಾ ಕ್ಲೀನ್ ಸ್ವೀಪ್ ಮಾಡಿದರೆ ಟಿ-20ಯಲ್ಲೂ ನಂ.2 ಪಟ್ಟಕ್ಕೇರಲಿದೆ. ಏಕದಿನ ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿರುವ ಟೀಂ ಇಂಡಿಯಾ ಟಿ20ಯಲ್ಲಿ ಸದ್ಯ 5ನೇ ಸ್ಥಾನದಲ್ಲಿದೆ.

ಈ ಸರಣಿಯ ಎಲ್ಲಾ ಪಂದ್ಯಗಳನ್ನು ಗೆದ್ದರೆ ಭಾರತ 2ನೇ ಸ್ಥಾನ ಖಚಿತವಾಗಲಿದೆ. ರಾಂಚಿಯ ಜೆ.ಎಸ್.ಸಿ.ಎ ಕ್ರೀಡಾಂಗಣದಲ್ಲಿ ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದೆ. ಆದರೆ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಸರಣಿ ಆರಂಭಕ್ಕೆ ಮುನ್ನವೇ ಆಸ್ಟ್ರೇಲಿಯಾ ತಂಡಕ್ಕೆ ಭಾರೀ ಹೊಡೆತ ಬಿದ್ದಿದೆ. ಕಾರಣ ನಾಯಕ ಸ್ಟೀವ್ ಸ್ಮಿತ್ ಭುಜದ ನೋವಿನಿಂದಾಗಿ ಸರಣಿಯಿಂದ ಸಂಪೂರ್ಣವಾಗಿ ಹೊರಗೆ ಬಿದ್ದಿದ್ದಾರೆ. ಸ್ಮಿತ್ ಸ್ಥಾನಕ್ಕೆ ಮಾಕ್ರ್ಸ್ ಸ್ಟಾಯಿನ್ಸ್ ಆಯ್ಕೆಯಾಗಿದ್ದಾರೆ. ಪಂದ್ಯಕ್ಕೆ ಅಭ್ಯಾಸ ನಡೆಸುವ ವೇಳೆ ರಾಂಚಿಯಲ್ಲಿ ಸ್ಮಿತ್ ಗೆ ಗಾಯವಾಗಿತ್ತು. ಆರಂಭದಲ್ಲಿ ವೈದ್ಯರು ಪಂದ್ಯ ಆಡಬಹುದು ಎಂದಿದ್ದರೂ ಈಗ ಸರಣಿಯಲ್ಲಿ ಆಡಲು ಸ್ಮಿತ್ ಗೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ದಾಖಲೆಗಳಿಂದ…: ಭಾರತ ಹಾಗೂ ಆಸೀಸ್ ಇದುವರೆಗೆ ಒಟ್ಟು 14 ಟಿ20 ಪಂದ್ಯಗಳನ್ನಾಡಿದ್ದು ಇದರಲ್ಲಿ ಭಾರತ 9 ಹಾಗೂ ಆಸ್ಟ್ರೇಲಿಯಾ 4 ಪಂದ್ಯಗಳನ್ನು ಗೆದ್ದಿದೆ. ಭಾರತದಲ್ಲಿ ಎರಡೂ ತಂಡಗಳು 3 ಪಂದ್ಯವನ್ನಾಡಿದ್ದು ಇದರಲ್ಲಿ ಮೂರೂ ಪಂದ್ಯಗಳನ್ನು ಭಾರತವೇ ಗೆದ್ದಿದೆ. ಭಾರತದಲ್ಲಿ ಟೀಂ ಇಂಡಿಯಾ ಇದುವರೆಗೆ ಒಟ್ಟು 23 ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ್ದು 12ರಲ್ಲಿ ಗೆಲುವು ಸಾಧಿಸಿದರೆ, 11 ಪಂದ್ಯದಲ್ಲಿ ಸೋತಿದೆ.

ಆಸೀಸ್ ಇದುವರೆಗೆ ವಿದೇಶದಲ್ಲಿ 63 ಪಂದ್ಯವನ್ನಾಡಿದೆ. ಇದರಲ್ಲಿ 29 ಗೆಲುವು ಸಾಧಿಸಿದರೆ 31ರಲ್ಲಿ ಸೋತಿದೆ. 2 ಪಂದ್ಯ ಟೈ ಆಗಿದ್ದು 1 ಪಂದ್ಯದಲ್ಲಿ ಯಾವುದೇ ಫಲಿತಾಂಶ ಬಂದಿಲ್ಲ.

2012ರಲ್ಲಿ ಕೊನೆಯ ಬಾರಿಗೆ ಆಸ್ಟ್ರೇಲಿಯಾ ಭಾರತವನ್ನು ಸೋಲಿಸಿದ್ದು, ಇದಾದ ನಂತರ ಒಟ್ಟು 6 ಪಂದ್ಯಗಳು ಇತ್ತಂಡಗಳ ನಡುವೆ ನಡೆದಿದೆ. ಈ ಆರೂ ಪಂದ್ಯಗಳಲ್ಲಿ ಟೀಂ ಇಂಡಿಯಾವೇ ಗೆಲುವು ಸಾಧಿಸಿದೆ ಎನ್ನುವುದೇ ವಿಶೇಷ.

Leave a Reply

Your email address will not be published. Required fields are marked *