Saturday, 23rd June 2018

Recent News

ಒಂದೇ ಪಂದ್ಯದಲ್ಲಿ 2 ವಿಶ್ವದಾಖಲೆ ಬರೆದ ಟೀಂ ಇಂಡಿಯಾದ ನಾಯಕಿ ಮಿಥಾಲಿ ರಾಜ್

ಬ್ರಿಸ್ಟಲ್: ಟೀಂ ಇಂಡಿಯಾದ ನಾಯಕಿ ಮಿಥಾಲಿ ರಾಜ್ ವಿಶ್ವಕಪ್ ಕ್ರಿಕೆಟ್‍ನ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಎರಡು ವಿಶ್ವದಾಖಲೆ ನಿರ್ಮಿಸಿದ್ದಾರೆ.

ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಹೊಡೆದ ಆಟಗಾರ್ತಿ ಎಂಬ ಹೆಗ್ಗಳಿಕೆಯ ಜೊತೆ 6 ಸಾವಿರ ರನ್ ಗಡಿ ದಾಟಿದ ಮೊದಲ ಆಟಗಾರ್ತಿಯಾಗಿ ಮಿಥಾಲಿ ರಾಜ್ ಹೊರ ಹೊಮ್ಮಿದ್ದಾರೆ.

ಇಲ್ಲಿಯವರೆಗೆ ಏಕದಿನದ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಹೊಡೆದ ದಾಖಲೆ ಇಂಗ್ಲೆಂಡಿನ ಚಾರ್ಲೊಟ್ ಎಡ್ವರ್ಡ್ಸ್  ಹೆಸರಿನಲ್ಲಿತ್ತು. 191 ಪಂದ್ಯಗಳಿಂದ ಚಾರ್ಲೊಟ್ 5992 ರನ್ ಹೊಡೆದಿದ್ದರು. ಈ ಪಂದ್ಯ ಆರಂಭಕ್ಕೂ ಮುನ್ನ 5959 ರನ್ ಗಳಿಸಿದ್ದ ಮಿಥಾಲಿ ರಾಜ್ ಇಂದು 33 ರನ್ ಗಳಿಸುವ ಮೂಲಕ ಈ ದಾಖಲೆಯನ್ನು ಮುರಿದಿದ್ದಾರೆ.

ಇಂದಿನ ಪಂದ್ಯ ಸೇರಿದಂತೆ ಮಿಥಾಲಿ ರಾಜ್ ಒಟ್ಟು 183 ಪಂದ್ಯಗಳ 164 ಇನ್ನಿಂಗ್ಸ್ ಮೂಲಕ 6028 ರನ್ ಗಳಿಸಿದ್ದಾರೆ. ಏಕದಿನದಲ್ಲಿ 5 ಶತಕ, 49 ಅರ್ಧ ಶತಕ ಹೊಡೆದಿದ್ದಾರೆ.

ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಮಿಥಾಲಿ ರಾಜ್ 69 ರನ್(114 ಎಸೆತ, 4 ಬೌಂಡರಿ,1 ಸಿಕ್ಸರ್) ಸಿಡಿಸಿ ಔಟಾದರು. ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನಿಂದಾಗಿ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇಸ್ಥಾನಕ್ಕೆ ಕುಸಿದಿರುವ ಭಾರತಕ್ಕೆ ಈ ಪಂದ್ಯವನ್ನು ಗೆದ್ದರೆ ಮಾತ್ರ ಸೆಮಿಫೈನಲ್ ಪ್ರವೇಶಿಸಲಿದೆ.

ಪಾದಾರ್ಪಣೆ ಪಂದ್ಯದಲ್ಲಿಯೇ ಮಿಥಾಲಿ ಶತಕ ಹೊಡೆದಿದ್ದರು. 1999ರಲ್ಲಿ ಐರ್ಲೆಂಡ್ ವಿರುದ್ಧದ ನಡೆದ ಏಕದಿನ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿದ ಮಿಥಾಲಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿ 114 ರನ್ ಹೊಡೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.

ಮಹಿಳೆಯರ ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ಸತತ 7 ಅರ್ಧಶತಕ ದಾಖಲಿಸಿ ವಿಶ್ವ ದಾಖಲೆ ನಿರ್ಮಿಸಿರುವ ಮಿಥಾಲಿ ಒಟ್ಟು 49 ಅರ್ಧಶತಕ ದಾಖಲಿಸುವ ಮೂಲಕ ಏಕದಿನದಲ್ಲಿ ಅತಿ ಹೆಚ್ಚು ಅರ್ಧಶತಕ ದಾಖಲಿಸಿದ ಆಟಗಾರ್ತಿ ಎಂಬ ದಾಖಲೆಯನ್ನು ಬರೆದಿದ್ದಾರೆ.

 

Leave a Reply

Your email address will not be published. Required fields are marked *