Wednesday, 23rd May 2018

Recent News

ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ವಾಕಿ ಟಾಕಿ ಬಳಸಿದ ಕೊಹ್ಲಿ – ಐಸಿಸಿಯಿಂದ ಕ್ಲೀನ್ ಚಿಟ್

ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ಟೀಂ ಇಂಡಿಯಾದ ಮೊದಲ ಟಿ20 ಪಂದ್ಯವನ್ನು ನೀವು ನಿನ್ನೆ ನೋಡಿದ್ರಾ..? ನೀವು ನಿನ್ನೆಯ ಮ್ಯಾಚ್ ಕಂಪ್ಲೀಟ್ ಆಗಿ ನೋಡಿದ್ರೆ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ವಾಕಿ ಟಾಕಿ ಬಳಸಿದ್ದನ್ನು ನೋಡಿರುತ್ತೀರಿ. ಟಿವಿಯಲ್ಲಿ ಈ ದೃಶ್ಯಾವಳಿಗಳು ಬರುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ವಾಕಿ ಟಾಕಿ ಬಳಕೆ ಬಗ್ಗೆ ಭಾರೀ ಚರ್ಚೆಗಳೆಲ್ಲಾ ನಡೆಯಿತು. ಕೊನೆಗೆ ಇಂದು ಐಸಿಸಿ ಅಧಿಕೃತವಾಗಿ ವಿರಾಟ್ ಕೊಹ್ಲಿ ವಾಕಿ ಟಾಕಿ ಬಳಸಿ ಯಾವುದೇ ತಪ್ಪು ಮಾಡಿಲ್ಲ ಎಂದು ಕ್ಲೀನ್ ಚಿಟ್ ನೀಡಿದೆ.

ಆಗಿದ್ದೇನು?: ನಿನ್ನೆ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯ ನಡೆಯುತ್ತಿತ್ತು. ಟಾಸ್ ಸೋತು ಬ್ಯಾಟ್ ಮಾಡಿದ ಟೀಂ ಇಂಡಿಯಾ ಆರಂಭಿಕ ಆಟಗಾರರಾದ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಭರ್ಜರಿಯಾಗಿ ಬ್ಯಾಟ್ ಮಾಡುತ್ತಿದ್ದರು. 14.4ನೇ ಓವರ್ ಆಗುತ್ತಿದ್ದಂತೆ ರೋಹಿತ್ ಶರ್ಮಾ ಬೌಂಡರಿ ಬಾರಿಸಿದರು. ಈ ವೇಳೆ ಟಿವಿ ಕ್ಯಾಮರಾಗಳು ಟೀಂ ಇಂಡಿಯಾಗೆ ಮೀಸಲಾಗಿಟ್ಟಿದ್ದ ಡಗೌಟ್ ತೋರಿಸಿದವು. ಈ ವೇಳೆ ಕೊಹ್ಲಿ ವಾಕಿ ಟಾಕಿಯಲ್ಲಿ ಮಾತನಾಡುತ್ತಿದ್ದರು. ನೇರಪ್ರಸಾರದಲ್ಲಿ ಈ ದೃಶ್ಯ ಬರುತ್ತಿದ್ದಂತೆಯೇ ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋ ವೈರಲಾಯ್ತು. ವಾಕಿ ಟಾಕಿ ಬಳಸಿ ಕೊಹ್ಲಿ ಐಸಿಸಿ ನಿಯಮ ಉಲ್ಲಂಘಿಸಿದ್ದಾರೆ ಎಂಬ ಆರೋಪಗಳೂ ಕೇಳಿ ಬಂದವು. ಈ ಹಿನ್ನೆಲೆಯಲ್ಲಿ ಇಂದು ಐಸಿಸಿ ವಿರಾಟ್ ಕೊಹ್ಲಿಗೆ ಕ್ಲೀನ್ ಚಿಟ್ ನೀಡಿದೆ.

ಸಾಮಾನ್ಯವಾಗಿ ಡಗೌಟ್ ಹಾಗೂ ಡ್ರೆಸ್ಸಿಂಗ್ ರೂಂನಲ್ಲಿರುವವರ ಸಂವಹನಕ್ಕಾಗಿ ವಾಕಿ ಟಾಕಿ ಬಳಸಲಾಗುತ್ತದೆ. ಆದರೆ ವಿರಾಟ್ ಕೊಹ್ಲಿ ವಾಕಿ ಟಾಕಿ ಬಳಸುವುದಕ್ಕೂ ಮುನ್ನ ಅನುಮತಿ ಪಡೆದಿದ್ದರು ಎಂದು ಹೆಸರು ಹೇಳಲಿಚ್ಛಿಸದ ಐಸಿಸಿ ಅಧಿಕಾರಿಯೊಬ್ಬರು ಪಿಟಿಐ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ. ಕ್ರೀಡಾಂಗಣದಲ್ಲಿದ್ದ ಭ್ರಷ್ಟಾಚಾರ ನಿಗ್ರಹ ಭದ್ರತಾ ಘಟಕದ ವ್ಯವಸ್ಥಾಪಕರಿಂದ ಅನುಮತಿ ಪಡೆದಿದ್ದರು ಎಂದೂ ಅವರು ಹೇಳಿದ್ದಾರೆ.

ನಿನ್ನೆ ಪಂದ್ಯ ಮುಗಿಯುತ್ತಿದ್ದಂತೆಯೇ ವಾಕಿ ಟಾಕಿ ಬಳಸಿ ಕೊಹ್ಲಿ ಐಸಿಸಿ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಬಂದಿದ್ದವು. ಪಂದ್ಯದ ವೇಳೆ ಆಟಗಾರರು, ತಂಡದ ಇತರೆ ಸಿಬ್ಬಂದಿ ಮೊಬೈಲ್ ಫೋನ್ ಬಳಕೆಗೆ ನಿಷೇಧ ಹೇರಿರುತ್ತಾರೆ. ಹೀಗಾಗಿ ಐಸಿಸಿ ನಿಯಮಗಳನ್ವಯ ವಾಕಿ ಟಾಕಿ ಬಳಸಲು ಅವಕಾಶವಿದೆ.

ಕೊಹ್ಲಿ ನಾಯಕತ್ವದ ಭಾರತ ತಂಡವು ಮೊದಲ ಟಿ20 ಪಂದ್ಯದಲ್ಲಿ 53 ರನ್‍ಗಳ ಗೆಲುವನ್ನು ಪಡೆಯುವ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.

Leave a Reply

Your email address will not be published. Required fields are marked *