Thursday, 21st June 2018

Recent News

ಎಟಿಎಂನಲ್ಲಿ ಹಣ ಡ್ರಾ ಮಾಡಲು ಆಗ್ಲಿಲ್ಲವೆಂದ್ರೆ ಟ್ರಾನ್ಸಾಕ್ಷನ್ ರದ್ದು ಮಾಡದೇ ಹೊರಬರಬೇಡಿ- ಈ ಸುದ್ದಿ ನೀವು ಓದ್ಲೇಬೇಕು

ಮುಂಬೈ: ಕೇವಲ ಗ್ಲೂ ಹಾಗೂ ಲ್ಯಾಪ್‍ಟಾಪ್ ರೀತಿಯ ಕೀಪ್ಯಾಡ್ ಸಾಕಾಗಿತ್ತು ಆ ಇಬ್ಬರು ಖತರ್ನಾಕ್ ಖದೀಮರ ಹಣ ದೋಚೋ ಪ್ಲ್ಯಾನ್ ವಕೌರ್ಟ್ ಆಗಲು. ಗ್ರಾಹಕರಿಗೆ ಗೊತ್ತಾಗದಂತೆ ಅವರ ಬ್ಯಾಂಕ್ ಖಾತೆಯಿಂದ ಸಾವಿರಾರು ರೂ. ಹಣ ಡ್ರಾ ಮಾಡಿಕೊಳ್ಳುತ್ತಿದ್ದ ಇಬ್ಬರು ಯುವಕರು ಈಗ ಪೊಲೀಸರ ಅತಿಥಿಯಾಗಿದ್ದಾರೆ.

ಸಾಹಿಲ್ ಶೇಕ್ ಹಾಗೂ ಸ್ವರೂಪ್ ಖಾಮ್ಕರ್ ಬಂಧಿತ ಆರೋಪಿಗಳು. ಇಬ್ಬರೂ 19 ವರ್ಷ ವಯಸ್ಸಿನವರಾಗಿದ್ದು ಕುರ್ಲಾ ಮೂಲದವರು ಎಂದು ವರದಿಯಾಗಿದೆ. ಮಾರ್ಚ್ 9ರಂದು ಡಿಎನ್ ನಗರ್ ಪೊಲೀಸರು ಇವರನ್ನ ಬಂಧಿಸಿದ್ದಾರೆ.

ಅಂಧೇರಿಯ ಎಟಿಎಂ ಬಳಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಆರೋಪಿಗಳನ್ನ ನೋಡಿದ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ಈ ಇಬ್ಬರೂ ಮೂರು ತಿಂಗಳಿನಿಂದ ಸುಮಾರು 18 ಮಂದಿಗೆ ವಂಚಿಸಿದ್ದರು ಎಂದು ವರದಿಯಾಗಿದೆ.

ಗ್ಲೂ ಬಳಸಿ ಹಣ ಕಳ್ಳತನ: ಆರೋಪಿಗಳು ಮೊದಲು ಲ್ಯಾಪ್‍ಟಾಪ್‍ನಂತಹ ಕೀಪ್ಯಾಡ್ ಇರೋ ಎಟಿಎಂ ಪತ್ತೆಹಚ್ಚುತ್ತಿದ್ರು. ಅಲ್ಲಿ ಕೆಲವು ಬಟನ್‍ಗಳನ್ನ ತೆಗೆದು, ಅದರ ಅಂಚಿಗೆ ಬಲಶಾಲಿಯಾದ ಗ್ಲೂ ಹಾಕುತ್ತಿದ್ರು. ಇದರಿಂದ ಆ ಬಟನ್‍ಗಳು ಕಾರ್ಯ ನಿರ್ವಹಿಸದಂತೆ ಮಾಡುತ್ತಿದ್ರು. ಅನಂತರ ಆ ಎಟಿಎಂಗೆ ಗ್ರಾಹಕರು ಬರೋದನ್ನೇ ಕಾದು ಕುಳಿತಿರುತ್ತಿದ್ದರು. ಯಾರಾದ್ರೂ ಗ್ರಾಹಕರು ಬಂದರೆ ಅವರು ಒಳಗೆ ಹೋಗಿ ಹಣ ಡ್ರಾ ಮಾಡಲು ಪ್ರಯತ್ನಿಸುವವರೆಗೂ ಕಾಯುತ್ತಿದ್ದರು. ಗ್ರಾಹಕರು ಕಾರ್ಡ್ ಉಜ್ಜಿ ಪಿನ್ ನಂಬರ್ ಒತ್ತಲು ಯತ್ನಿಸುವಾಗ ಬಟನ್‍ಗಳು ಕಾರ್ಯ ನಿರ್ವಹಿಸದೇ ವಿಫಲರಾಗ್ತಿದ್ರು.

ಈ ವೇಳೆ ಆರೋಪಿಗಳಲ್ಲೊಬ್ಬ ಅವರಿಗೆ ಸಹಾಯ ಮಾಡುವ ನೆಪದಲ್ಲಿ ಒಳಗೆ ಹೋಗ್ತಿದ್ದ. ಆ ಗ್ರಾಹಕರ ಪಿನ್ ನಂಬರ್ ಕೇಳಿ ಹಣ ಡ್ರಾ ಮಾಡಲು ಹಲವು ಬಾರಿ ಪ್ರಯತ್ನಿಸುತ್ತಿದ್ದ. ಈ ಇಬ್ಬರ ಖತರ್ನಾಕ್ ಕೆಲಸದ ಬಗ್ಗೆ ಅರಿವಿಲ್ಲದ ಗ್ರಾಹಕರು ಬೇಸತ್ತು ಟ್ರಾನ್ಸಾಕ್ಷನ್ ರದ್ದು ಮಾಡದೇ ಅಲ್ಲಿಂದ ಹೊರಟುಹೋಗ್ತಿದ್ರು. ಅವರು ಎಟಿಎಂನಿಂದ ಹೊರಗೆ ಕಾಲಿಡುವುದೇ ತಡ ಶೇಕ್ ಹಾಗೂ ಖಾಮ್ಕರ್ ಇಬ್ಬರೂ ಒಳಗೆ ಹೋಗಿ ಗ್ಲೂ ತೆಗೆದು, ಗ್ರಾಹಕರ ಪಿನ್ ನಂಬರ್ ಬಳಸಿ ಸಾವಿರಾರು ರೂ. ಹಣ ಲಪಟಾಯಿಸುತ್ತಿದ್ದರು.

ಸಿಕ್ಕಿಬಿದ್ದಿದ್ದು ಹೇಗೆ?: ಹಲವಾರು ಗ್ರಾಹಕರು ಎಟಿಎಂ ನಿಂದ ಹಣ ಕಳೆದುಕೊಂಡ ಬಗ್ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಎಟಿಎಂ ಕೇಂದ್ರಗಳ ಮೇಲೆ ನಿಗಾ ವಹಿಸಿದ್ದರು. ಈ ಇಬ್ಬರು ಆರೋಪಿಗಳು ಸುಮಾರು 15 ನಿಮಿಷಗಳ ಕಾಲ ಎಟಿಎಂ ಬಳಿ ಇದ್ದಿದ್ದು, ಹಾಗೂ ಅವರ ವರ್ತನೆಯೂ ಅನುಮಾನಾಸ್ಪದವಾಗಿ ಇದ್ದ ಕಾರಣ ಇಬ್ಬರನ್ನೂ ವಶಕ್ಕೆ ಪಡೆದಿದ್ದರು. ಈವರೆಗೆ ತಲಾ 25 ಸಾವಿರ ರೂ. ಕಳೆದುಕೊಂಡಿದ್ದ ಮೂವರು ಗ್ರಾಹಕರು ಪೊಲೀಸರಿಗೆ ದೂರು ನೀಡಿದ್ದರು ಎಂದು ವರದಿಯಾಗಿದೆ.

ಬೇಗ ಹಣ ಮಾಡಬೇಕು ಎಂಬ ಉದ್ದೇಶದಿಂದ ಯುವಕರು ಈ ಕೃತ್ಯವೆಸಗುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಯುವಕರು ಎರಡು ವರ್ಷಗಳ ಹಿಂದೆ ತನ್ನ ಸ್ನೇಹಿತನೊಬ್ಬನಿಂದ ಈ ಟ್ರಿಕ್ ಕಲಿತಿದ್ದಾಗಿ ಬಾಯ್ಬಿಟ್ಟಿದ್ದಾರೆ. ಇತ್ತೀಚೆಗೆ ಆರೋಪಿಗಳು ಬೈಕ್ ಖರೀದಿಸಿದ್ದು, ಅದನ್ನ ಕಳ್ಳತನ ಮಾಡಿದ ಹಣದಿಂದಲೇ ಕೊಂಡುಕೊಂಡಿದ್ದಾರಾ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆರೋಪಿಗಳು ಬಹುತೇಕ ಕೋಟಕ್ ಮಹಿಂದ್ರಾ ಬ್ಯಾಂಕ್‍ನ ಎಟಿಎಂಗಳಲ್ಲೇ ಈ ಕೃತ್ಯವೆಸಗುತ್ತಿದ್ದರು. ಯಾಕಂದ್ರೆ ಅದರ ಎಟಿಎಂಗಳಲ್ಲಿ ಲ್ಯಾಪ್‍ಟಾಪ್ ನಂತಹ ಕೀಪ್ಯಾಡ್‍ಗಳಿರುತ್ತವೆ. ಈ ಬಗ್ಗೆ ಬ್ಯಾಂಕ್‍ನವರೊಂದಿಗೆ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲು ನೆರವಾಗುತ್ತೇವೆ ಎಂದು ತನಿಖಾಧಿಕಾರಿ ಶ್ರೀನಿವಾಸ್ ಚೇವಾಲೆ ಹೇಳಿದ್ದಾರೆ.

ಐಪಿಸಿ ಸೆಕ್ಷನ್ 420(ವಂಚನೆ) ಹಾಗು ಐಟಿ ಕಾಯ್ದೆಯಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಇಬ್ಬರನ್ನೂ ಪೊಲಿಸ್ ಕಸ್ಟಿಡಿಗೆ ಕಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಪರಮೇಶ್ವರ್ ಗನಾಮೇ ಹೇಳಿದ್ದಾರೆ.

Leave a Reply

Your email address will not be published. Required fields are marked *