Saturday, 23rd June 2018

Recent News

ಸುಪ್ರೀಂ ಜಡ್ಜ್ ಗಳ ಮಧ್ಯೆ ಎಲ್ಲವೂ ಸರಿಯಿಲ್ಲ ಅನ್ನೋದು ನವೆಂಬರ್ ನಲ್ಲೇ ಬಹಿರಂಗವಾಗಿತ್ತು

ನವದೆಹಲಿ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ದೇಶದಲ್ಲೇ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿ ನೇರವಾಗಿ ಮುಖ್ಯ ನ್ಯಾಯಾಧೀಶರ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಆದರೆ ಈ ಸುದ್ದಿಗೋಷ್ಠಿಗೂ ಮುನ್ನವೇ ನ್ಯಾಯಮೂರ್ತಿಗಳ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವುದು  ಬಹಿರಂಗವಾಗಿತ್ತು.

ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಹಾಗೂ ಎರಡನೇ ನ್ಯಾಯಮೂರ್ತಿಗಳಾದ ಚೆಲಮೇಶ್ವರ್ ಅವರ ನಡುವೆ 2017ರ ನವೆಂಬರ್ ಎರಡನೇ ವಾರದಲ್ಲಿ ಬಹಿರಂಗವಾಗಿಯೇ ಅಸಮಾಧಾನ ಸ್ಫೋಟಗೊಂಡಿತ್ತು.

ಉತ್ತರ ಪ್ರದೇಶದ ಮೆಡಿಕಲ್ ಕಾಲೇಜು ಹಗರಣದ ಬಗ್ಗೆ ಒಡಿಶಾ ಹೈಕೋರ್ಟ್ ನ್ಯಾಯಮೂರ್ತಿ ಒಬ್ಬರ ಪಾತ್ರದ ಬಗ್ಗೆ ವಿಚಾರಣೆ ನಡೆಸಲು ನ್ಯಾ. ಚೆಲಮೇಶ್ವರ್ ಅವರು ಮುಖ್ಯ ನ್ಯಾಯಮೂರ್ತಿಗಳ ಅನುಮತಿ ಇಲ್ಲದೆ ಏಕಾಏಕಿ ಸಂವಿಧಾನ ಪೀಠ ರಚಿಸಿದ್ದರು. ಈ ವೇಳೆ ನಿಯಮಗಳ ಪ್ರಕಾರ ನ್ಯಾಯಾಪೀಠ ರಚಿಸಲು ಮುಖ್ಯ ನ್ಯಾಯಮೂರ್ತಿಗಳಿಗೆ ಮಾತ್ರ ಅನುಮತಿ ಇದೆ ಎಂದು ಹಿರಿಯ ವಕೀಲ ದುಶ್ಯಂತ್ ದಾವ್ ಕೂಡಲೇ ಹೇಳಿದರೂ ನ್ಯಾ. ಚೆಲಮೇಶ್ವರ್ ಅವರು 5 ನ್ಯಾಯಾಧೀಶರ ಹೆಸರನ್ನು ಪ್ರಕಟಿಸಿಯೇ ಬಿಟ್ಟಿದ್ದರು.

ಸಂವಿಧಾನ ಪೀಠ ರಚನೆಯಾಗಿದ್ದನ್ನು ಕಂಡು ಮುಖ್ಯ ನ್ಯಾ. ದೀಪಕ್ ಮಿಶ್ರಾ ಅವರು ಸುಪ್ರೀಂ ಕೋರ್ಟ್‍ನ ಹಿರಿಯ ನ್ಯಾಯಾಧೀಶರರ ಜೊತೆ ತುರ್ತು ಸಭೆ ನಡೆಸಿದ್ದರು. ಈ ವೇಳೆ ಅಲ್ಲಿದ್ದ ಹಿರಿಯ ನ್ಯಾಯಮೂರ್ತಿಗಳು ಸಲಹೆಯ ಬಳಿಕ, “ರೋಸ್ಟರ್ ಪ್ರಕಾರವಾಗಿ ಸಂವಿಧಾನ ಪೀಠ ರಚಿಸಲು ಮತ್ತು ಮತ್ತೊಂದು ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸುವ ಅಧಿಕಾರ ಇರುವುದು ಮುಖ್ಯ ನ್ಯಾಯಾಧೀಶರಿಗೆ” ಎಂದು ಹೇಳಿ ಚೆಲಮೇಶ್ವರ್ ಅವರು ನೀಡಿದ ಆದೇಶವನ್ನು ನ್ಯಾ. ದೀಪಕ್ ಮಿಶ್ರಾ ರದ್ದು ಪಡಿಸಿದ್ದರು. ಈ ಘಟನೆ ನಡೆದ ಬಳಿಕ ಸುಪ್ರೀಂ ನ್ಯಾಯಾಧೀಶರ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಮಾತು ಬರಲು ಆರಂಭವಾಗಿತ್ತು.

ನ್ಯಾ.ಭೂಷಣ್ ವಾಕ್ ಔಟ್: ನ್ಯಾ.ಚೆಲಮೇಶ್ವರ್ ಅವರ ನಿರ್ಧಾರದ ಕುರಿತು ಚರ್ಚೆ ನಡೆಯುವ ವೇಳೆ ನ್ಯಾ. ಭೂಷಣ್ ಅವರು ವಾಕ್ ಔಟ್ ನಡೆದ ಘಟನೆಯೂ ನಡೆದಿತ್ತು. ನ್ಯಾ. ಚೆಲಮೇಶ್ವರ್ ಅವರ ನಿರ್ಧಾರ ನಿಯಮ ಬಾಹಿರ ಎಂಬ ವಾದ ಪ್ರತಿವಾದ ನಡೆಯುತ್ತಿದ್ದ ವೇಳೆ ನ್ಯಾ. ಭೂಷಣ್ ಅವರು ಮಧ್ಯ ಪ್ರವೇಶಿಸಿ ಯಾವುದೇ ಕಾರಣಕ್ಕೂ ಈ ವಿಚಾರದಲ್ಲಿ ಮುಖ್ಯ ನ್ಯಾಯಾಧೀಶರು ಮಧ್ಯ ಪ್ರವೇಶ ಮಾಡಬಾರದು, ಇಲ್ಲವಾದರೆ ನ್ಯಾಯಾಂಗದ ಘನತೆಗೆ ದಕ್ಕೆ ಉಂಟಾಗುತ್ತದೆ ಎಂದು ಕೋರಿದ್ದರು. ಇದನ್ನೂ ಓದಿ: ದೇಶದಲ್ಲೇ ಫಸ್ಟ್ ಟೈಂ – ಸುಪ್ರೀಂನಲ್ಲಿ ಎಲ್ಲವೂ ಸರಿಯಿಲ್ಲ ಎಂದ ನಾಲ್ವರು ಜಡ್ಜ್ ಗಳು

ಆದರೆ ನ್ಯಾ.ಭೂಷಣ್ ಅವರ ಕೋರಿಕೆಗೆ ಮುಖ್ಯ ನ್ಯಾ. ದೀಪಕ್ ಮಿಶ್ರಾ ಮನ್ನಣೆ ನೀಡಿರಲಿಲ್ಲ. ಅಷ್ಟೇ ಅಲ್ಲದೇ ನಾನ್ ಸೆನ್ಸ್ ಎಂದು ಹೇಳಿದಾಗ ಕೋಪಗೊಂಡ ಭೂಷಣ್ ಅವರು ನನಗೆ ಮಾತನಾಡಲು ಅವಕಾಶ ನೀಡಲಿಲ್ಲ ಎಂದು ಹೇಳಿ ಕಲಾಪದಿಂದ ಹೊರ ನಡೆದಿದ್ದರು.

Leave a Reply

Your email address will not be published. Required fields are marked *