ರಾಯಚೂರಲ್ಲಿ ತಂಪೆರದ ಮಳೆ: ಬಿರುಗಾಳಿಗೆ ದಾಳಿಂಬೆ ಬೆಳೆ ಹಾನಿ

-ಬಳ್ಳಾರಿಯಲ್ಲಿ ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು

ರಾಯಚೂರು/ಬಳ್ಳಾರಿ: ಬಿರುಬಿಸಿಲ ಮಧ್ಯದಲ್ಲೇ ಬಿಸಿಲನಾಡು ರಾಯಚೂರಿನಲ್ಲಿ ಮಳೆರಾಯ ಕೃಪೆ ತೋರಿದ್ದಾನೆ. ರಾತ್ರಿಯಿಡಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುವ ಮೂಲಕ ಜಿಲ್ಲೆ ತಂಪಾಗಿದೆ. ಲಿಂಗಸುಗೂರು, ಸಿಂಧನೂರು, ಮಾನ್ವಿ ಸೇರಿ ಎಲ್ಲೆಡೆ ಮಳೆಯಾಗಿದ್ದು ಅಲ್ಲಲ್ಲಿ ಮಳೆಹಾನಿಯೂ ಆಗಿದೆ. ಗುಡುಗು, ಬಿರುಗಾಳಿ ಸಹಿತ ಮಳೆಯಾಗಿದ್ದರಿಂದ ಕೆಲವೆಡೆ ಹಾನಿ ಸಂಭವಿಸಿದೆ.

ಲಿಂಗಸುಗೂರಿನಲ್ಲಿ ಸುರಿದ ಮಳೆಗೆ ಮನೆ ಹಾಗೂ ಅಂಗಡಿಗಳ ಶೆಡ್‍ಗಳು ಹಾರಿಹೋಗಿವೆ. ಲಿಂಗಸುಗೂರು ತಾಲೂಕಿನಲ್ಲಿ ಬಿರುಗಾಳಿ ಸಹಿತ ಸುರಿದ ಮಳೆಗೆ ದಾಳಿಂಬೆ ಬೆಳೆ ಸಂಪೂರ್ಣ ನೆಲಕ್ಕಚ್ಚಿದೆ. ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಸುಮಾರು 100 ಎಕರೆಯಷ್ಟು ಬೆಳೆ ಹಾನಿ ಸಂಭವಿಸಿದೆ. ಈ ಬೇಸಿಗೆ ಮಳೆ ನೇರವಾಗಿ ತೋಟಗರಿಕಾ ಬೆಳೆಯ ಮೇಲೆ ಪರಿಣಾಮ ಬೀರಿದೆ.

ಇನ್ನೂ ಬಿರುಗಾಳಿಗೆ 30 ಕ್ಕೂ ಹೆಚ್ಚು ಮರಗಳು ಧರೆಗುರಳಿದ್ದು, 15 ವಿದ್ಯುತ್ ಕಂಬಗಳು ಬಿದ್ದಿವೆ. ಗುಡಿಸಲು ಹಾಗೂ ಗೂಡಂಗಡಿಗಳು ಹಾರಿಹೋಗಿವೆ. ಮಾನ್ವಿ, ಸಿಂಧನೂರು, ರಾಯಚೂರು ತಾಲೂಕುಗಳಲ್ಲಿ ಸಾಧಾರಣ ಮಳೆಯಾಗಿದ್ದು, ಯಾವುದೇ ಹಾನಿ ಸಂಭವಿಸಿಲ್ಲ. ರಾಯಚೂರು ನಗರದಲ್ಲಿ ಜಿಟಿ ಜಿಟಿ ಮಳೆ ಮುಂದುವರೆದಿದ್ದು, ಜನಜೀವನ ಸ್ವಲ್ಪಮಟ್ಟಿಗೆ ಅಸ್ತವ್ಯಸ್ತವಾದ್ರು ಬೇಸಿಗೆಯ ಮಳೆಗೆ ಜನ ಖುಷಿಯಾಗಿದ್ದಾರೆ.

ಬಳ್ಳಾರಿಯಲ್ಲೂ ಮಳೆ: ಗಣಿನಾಡು ಬಳ್ಳಾರಿಯಲ್ಲೂ ರಾತ್ರಿ ಮಳೆಯಾಗಿದೆ. ಮಳೆಯಾದ ಪರಿಣಾಮ ಬಳ್ಳಾರಿಯ ಕೆಲ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ. ಬಳ್ಳಾರಿಯ ಹೊಸ ಬಸ ನಿಲ್ದಾಣದ ಬಳಿಯ ಅಂಡರ್ ಬ್ರೀಡ್ಜ್ ಬಳಿ ನೀರು ಶೇಖರಣೆಯಾದ ಪರಿಣಾಮ ಇಂದು ಮುಂಜಾನೆ ಕೆಲ ಕಾಲ ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾಯಿತು.

ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಕ್ಯಾದಿಗೇನಹಳ್ಳಿ ಎಂಬಲ್ಲಿ ಗೋಣೆಪ್ಪ ಎಂಬವರಿಗೆ ಸೇರಿದ 14 ಕುರಿ ಹಾಗೂ ಒಂದು ನಾಯಿ ಸಿಡಿಲು ಬಡಿದು ಸಾವನ್ನಪ್ಪಿವೆ.

 

You might also like More from author

Leave A Reply

Your email address will not be published.

badge