ಗಮನಿಸಿ: ವಿಮಾನದಲ್ಲಿ ಬ್ಯಾಟರಿ ಚಾಲಿತ ಹೆಡ್‍ಫೋನ್ ಸ್ಫೋಟಗೊಂಡು ಮಹಿಳೆಗೆ ಗಾಯ

ಸಿಡ್ನಿ: ಬ್ಯಾಟರಿ ಚಾಲಿತ ಹೆಡ್‍ಫೋನ್ ಸ್ಫೋಟಗೊಂಡು ಮಹಿಳೆಯೊಬ್ಬರ ಮುಖ ಹಾಗೂ ಕೈಗಳಿಗೆ ಗಾಯವಾಗಿರೋ ಘಟನೆ ಆಸ್ಟ್ರೇಲಿಯಾಗೆ ಹೋಗುತ್ತಿದ್ದ ವಿಮಾನದಲ್ಲಿ ನಡೆದಿದೆ. ಇದರ ಫೋಟೋಗಳನ್ನ ಅಧಿಕಾರಿಗಳು ಬಿಡುಗಡೆ ಮಾಡಿ ಪ್ರಯಾಣಿಕರಿಗೆ ವಿಮಾನದಲ್ಲಿ ಬ್ಯಾಟರಿ ಬಳಕೆ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಫೆಬ್ರವರಿ 19ರಂದು ಚೀನಾ ರಾಜಧಾನಿ ಬೀಜಿಂಗ್‍ನಿಂದ ಮೆಲ್ಬೋರ್ನ್‍ಗೆ ಹೊರಟಿದ್ದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಬ್ಯಾಟರಿ ಚಾಲಿತ ಹೆಡ್‍ಫೋನ್‍ನಲ್ಲಿ ಸಂಗೀತ ಕೇಳುತ್ತಿದ್ದರು. ಈ ವೇಳೆ ಹೆಡ್‍ಫೋನ್ ಸ್ಫೋಟಗೊಂಡು ದೊಡ್ಡ ಶಬ್ದ ಕೇಳಿಸಿತ್ತು.

ನಾನು ಹಿಂದೆ ತಿರುಗಿ ನೋಡುವಷ್ಟರಲ್ಲಿ ನನ್ನ ಮುಖ ಸುಟ್ಟುಹೋಗಿತ್ತು. ನನ್ನ ಮುಖವನ್ನು ಒತ್ತಿ ಹಿಡಿದೆ. ನಂತರವೂ ಮುಖ ಉರಿಯುತ್ತಿದ್ದರಿಂದ ಹೆಡ್‍ಫೋನ್ ತೆಗೆದು ನೆಲದ ಮೇಲೆ ಎಸೆದೆ. ಹೆಡ್‍ಫೋನ್‍ನಲ್ಲಿ ಸಣ್ಣ ಮಟ್ಟದ ಬೆಂಕಿ ಕಾಣಿಸಿಕೊಂಡಿತ್ತು ಎಂದು ಮಹಿಳೆ ಪ್ರಕರಣದ ತನಿಖೆ ನಡೆಸಿದ ಆಸ್ಟ್ರೇಲಿಯನ್ ಟ್ರಾನ್ಸ್ ಪೋರ್ಟ್ ಸೇಫ್ಟಿ ಬ್ಯೂರೋದ ಅಧಿಕಾರಿಗಳಿಗೆ ಹೇಳಿದ್ದಾರೆ.

ಘಟನೆ ನಡೆದ ವೇಳೆ ವಿಮಾನದ ಸಿಬ್ಬಂದಿ ಕೂಡಲೇ ಮಹಿಳೆಯ ಸಹಾಯಕ್ಕೆ ಮುಂದಾಗಿ, ಹೆಡ್‍ಫೋನ್ ಮೇಲೆ ನೀರು ಸುರಿದಿದ್ದಾರೆ. ಆದ್ರೆ ಬ್ಯಾಟರಿ ಮತ್ತು ಅದರ ಮೇಲ್ಭಾಗದ ಕವರ್ ಕರಗಿ ನೆಲಕ್ಕೆ ಅಂಟಿಕೊಂಡಿತ್ತು ಎಂದು ವರದಿಯಾಗಿದೆ.

ಹೆಡ್‍ಫೋನ್ ಯಾವ ಕಂಪೆನಿಗೆ ಸೇರಿದ್ದು ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಿಲ್ಲ. ಆದ್ರೆ ಲಿಥಿಯಮ್ ಬ್ಯಾಟರಿಯಿಂದ ಈ ಅನಾಹುತ ಸಂಭವಿಸಿದೆ ಎಂದು ಹೇಳಿದ್ದಾರೆ. ಹಾಗೂ ವಿಮಾನದಲ್ಲಿ ಬ್ಯಾಟರಿ ಬಳಕೆ ಬಗ್ಗೆ ಅಧಿಕಾರಿಗಳು ಪ್ರಯಾಣಿಕರಿಗೆ ಎಚ್ಚರಿಸಿದ್ದಾರೆ. ವಿಮಾನಗಳಲ್ಲಿ ಬ್ಯಾಟರಿ ಚಾಲಿತ ಸಾಧನಗಳನ್ನು ಬಳಸದಿರುವ ಸಂದರ್ಭದಲ್ಲಿ ಅವನ್ನು ಒಂದು ಕಡೆ ಜೋಪಾನವಾಗಿ ಇಡಬೇಕು. ಪ್ರತ್ಯೇಕವಾದ ಬ್ಯಾಟರಿಗಳನ್ನು ಲಗೇಜ್‍ಗಳಲ್ಲಿ ಇಟ್ಟುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

2016ರಲ್ಲಿ ಸ್ಯಾಮ್‍ಸಂಗ್ ಗೆಲಾಕ್ಸಿ ನೋಟ್ 7 ಬ್ಯಾಟರಿ ಹಲವೆಡೆ ಸ್ಫೋಟಗೊಂಡ ಪ್ರಕರಣ ದಾಖಲಾಗಿತ್ತು. ಇದಾದ ಬಳಿಕ ಸ್ಯಾಮ್ ಸಂಗ್ ಕಂಪೆನಿ ನೋಟ್ 7 ಫೋನ್‍ಗಳನ್ನು ಗ್ರಾಹಕರಿಂದ ಹಿಂದಕ್ಕೆ ಪಡೆದುಕೊಂಡಿತ್ತು.

You might also like More from author

Leave A Reply

Your email address will not be published.

badge