ಗುಂಡ್ಲುಪೇಟೆ ಉಪಚುನಾವಣೆ: ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರ ನಡುವೆ ಕಲ್ಲು ತೂರಾಟ

ಚಾಮರಾಜನಗರ: ಗುಂಡ್ಲುಪೇಟೆ ಉಪಚುನಾವಣಾ ಕಣ ಅಕ್ಷರಶಃ ರಣರಂಗವಾಗಿದೆ. ಒಂದು ಕಡೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದರೆ, ಮತ್ತೊಂದು ಕಡೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಕಲ್ಲು ತೂರಾಟ ನಡೆಯಿತು. ಇದನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಹರಸಾಹಸ ನಡೆಸಿದರು.

ಗುಂಡ್ಲುಪೇಟೆ ಉಪಚುನಾವಣಾ ಕಣ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಇಂದು ಎರಡು ಪಕ್ಷದ ಅಭ್ಯರ್ಥಿಗಳು ಉಪಚುನಾವಣೆಯ ನಾಮಪತ್ರ ಸಲ್ಲಿಸಿದ್ರು. ಇದಕ್ಕೂ ಮುನ್ನ ಎರಡು ಪಕ್ಷದ ಅಭ್ಯರ್ಥಿಗಳು ಪಕ್ಷ ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ಗುಂಡ್ಲುಪೇಟೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ್ರು. ಬಿಜೆಪಿ ಅಭ್ಯರ್ಥಿ ನಿರಂಜನ್ ಕುಮಾರ್ ರಾಜ್ಯಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಮೆರವಣಿಗೆ ನಡೆಸಿದ್ರೆ, ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವ ಪ್ರಸಾದ್ ಅವರು ಸಚಿವ ಯು.ಟಿ.ಖಾದರ್ ಜೊತೆಗೂಡಿ ಭರ್ಜರಿ ರೋಡ್ ಶೋ ಮಾಡಿದ್ರು. ಈ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿಯ ಸಾವಿರಾರು ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ 766 ರಲ್ಲಿರುವ ತಾಲೂಕು ಕಚೇರಿ ಆವರಣದ ಮುಂದೆ ಜಮಾವಣೆಗೊಂಡರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಏರ್ಪಟ್ಟಿತು. ಇದಾದ ಬಳಿಕ ಎರಡು ಪಕ್ಷಗಳ ಕಾರ್ಯಕರ್ತರು ನಡುವೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಈ ಹಂತದಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪೊಲೀಸರು ಪ್ರಯತ್ನಿಸಿದರು. ಈ ವೇಳೆ ಪೊಲೀಸ್ ರ ಮಾತು ಕೇಳದೆ ಕಾರ್ಯಕರ್ತರು ಕಲ್ಲು ತೂರಾಟ ಮಾಡಲು ಮುಂದಾದರು. ಪರಿಸ್ಥಿತಿ ಉದ್ವಿಗ್ನ ಸ್ಥಿತಿಗೆ ತಲುಪಿದ ಕಾರಣ ಪೊಲೀಸರು ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ರು. ಕಲ್ಲು ತೂರಾಟ ಹಾಗೂ ಲಾಠಿ ಚಾರ್ಚ್ ವೇಳೆ ಎರಡು ಪಕ್ಷದ ಕಾರ್ಯಕರ್ತರಿಗೆ ಹಾಗೂ ಪೊಲೀಸರಿಗೆ ಸಣ್ಣ ಪುಟ್ಟಗಾಯಗಳಾಗಿದ್ದು, ಗಾಯಳುಗಳನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಒಟ್ಟಿನಲ್ಲಿ ಶಾಂತಿಯುತವಾಗಿ ನಡೆಯಬೇಕಿದ್ದ ನಾಮಪತ್ರ ಸಲ್ಲಿಕೆ ಕಾರ್ಯ, ಅಕ್ಷರಶಃ ರಣ ರಂಗವಾಗಿದ್ದು ಸುಳ್ಳಲ್ಲ. ದಿನದಿಂದ ದಿನಕ್ಕೆ ಚುನಾವಣಾ ಕಣ ರಂಗೇರುತ್ತಿದ್ದು, ಮುಂದಿನ ದಿಗಳಲ್ಲಿ ಎರಡು ಪಕ್ಷಗಳ ಚುನಾವಣಾ ಕುಸ್ತಿ ಯಾವ ಹಂತಕ್ಕೆ ತಲುಪುತ್ತದೆ ಎಂಬುದನ್ನು ಕಾದು ನೋಡಬೇಕಿದೆ

You might also like More from author

Leave A Reply

Your email address will not be published.

badge