Tuesday, 19th June 2018

Recent News

ಜಿಎಸ್‍ಟಿ ಸೇವಾ ತೆರಿಗೆ: ಯಾವುದಕ್ಕೆ ಎಷ್ಟು? ದುಬಾರಿಯಾಗಲಿದೆ ಕನ್ನಡ ಸಿನಿಮಾ ಟಿಕೆಟ್ ದರ

ಶ್ರೀನಗರ: ಜುಲೈ 1ರಿಂದ ದೇಶಾದ್ಯಂತ ಜಾರಿಗೆ ಬರಲಿರುವ `ಏಕರಾಷ್ಟ್ರ, ಏಕ ತೆರಿಗೆ’ ಪರಿಕಲ್ಪನೆಯ ಜಿಎಸ್‍ಟಿಯ ಸೇವಾ ತೆರಿಗೆಯ ದರ ಅಂತಿಮಗೊಂಡಿದೆ. ನಾಲ್ಕು ಹಂತದಲ್ಲಿ ಜಿಎಸ್‍ಟಿ ದರ ಘೋಷಿಸಲಾಗಿದ್ದು, ಶೇ.5, 12, 18 ಹಾಗೂ 28ರಷ್ಟು ತೆರಿಗೆ ವಿಧಿಸಲು ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ನಡೆದ ಎರಡನೇ ದಿನದ ಸಭೆಯಲ್ಲಿ ಅಂಕಿತ ಸಿಕ್ಕಿದೆ.

ಶಿಕ್ಷಣ ಹಾಗೂ ಆರೋಗ್ಯ ಸೇವೆಗಳಿಗೆ ವಿನಾಯ್ತಿ ನೀಡಲಾಗಿದ್ದು, ಐಷಾರಾಮಿ ಜೀವನ ದುಬಾರಿಯಾಗಲಿದೆ. ಆದ್ರೆ, ಚಿನ್ನದ ಮೇಲಿನ ತೆರಿಗೆ ಇನ್ನು ಅಂತಿಮಗೊಂಡಿಲ್ಲ. ಹೀಗಾಗಿ ಜೂನ್ 3ರಂದು ಮತ್ತೊಂದು ಸುತ್ತಿನ ಜಿಎಸ್‍ಟಿ ಸಭೆ ನಡೆಯಲಿದೆ.

ಯಾವುದಕ್ಕೆ ಎಷ್ಟು ತೆರಿಗೆ?
ರಸ್ತೆ, ರೈಲ್ವೇ ಸೇವೆಗಳ ಮೇಲೆ ಶೇ.5 ರಷ್ಟು ತೆರಿಗೆ (ಓಲಾ, ಉಬರ್ ಕ್ಯಾಬ್ ಸೇವೆಗಳಿಗೆ ಶೇ.5 ರಷ್ಟು ತೆರಿಗೆ) ವಿಧಿಸಲಾಗಿದ್ದರೆ, ಎಸಿ ಸೌಲಭ್ಯವಿಲ್ಲದ ಹೋಟೆಲ್‍ಗಳಲ್ಲಿ ಶೇ.12 ರಷ್ಟು ತೆರಿಗೆ ಹಾಕಲಾಗಿದೆ.

1 ಸಾವಿರ ರೂ. ಬಾಡಿಗೆ ಇರುವ ಹೋಟೆಲ್‍ಗಳಿಗೆ ತೆರಿಗೆ ಇಲ್ಲ. ಆದರೆ 2,500 ರೂ. ನಿಂದ 5000 ರೂ. ಹೊಟೇಲ್ ಬಾಡಿಗೆ ಕೊಟ್ಟರೆ ಶೇ.12ರಷ್ಟು ತೆರಿಗೆ ಕಟ್ಟಬೇಕಾಗುತ್ತದೆ. ಫೈವ್‍ಸ್ಟಾರ್ ಹೋಟೆಲ್‍ಗಳಿಗೆ ಶೇ.18 ರಷ್ಟು ತೆರಿಗೆ ವಿಧಿಸಲಾಗಿದ್ದು, 5 ಸಾವಿರ ರೂಪಾಯಿ ಮೇಲ್ಪಟ್ಟ ಹೋಟೆಲ್ ವ್ಯವಹಾರಗಳಿಗೆ ಶೇ.28ರಷ್ಟು ತೆರಿಗೆ ವಿಧಿಸಲು ಒಪ್ಪಿಗೆ ಸಿಕ್ಕಿದೆ.

ಸಿನಿಮಾ, ಜೂಜಿನ ಮೇಲೆ ಶೇ.28ರಷ್ಟು ತೆರಿಗೆ, ಹಣಕಾಸು, ದೂರಸಂಪರ್ಕದ ಮೇಲೆ ಶೇ.18ರಷ್ಟು ತೆರಿಗೆ, ಬ್ರಾಂಡೆಂಡ್ ಬಟ್ಟೆಗಳಿಗೆ ಶೇ.18ರಷ್ಟು ತೆರಿಗೆ ವಿಧಿಸಲಾಗಿದೆ. ರೆಫ್ರಿಜರೇಟರ್, ಎಸಿ, ಟಿವಿ, ಕಾರ್ ಸೇರಿದಂತೆ ಐಷಾರಾಮಿ ವಸ್ತುಗಳಿಗೆ ಶೇ.28ರಷ್ಟು ತೆರಿಗೆ ವಿಧಿಸಲಾಗಿದ್ದು, ಶಿಕ್ಷಣ ಮತ್ತು ಆರೋಗ್ಯದ ಸೆಸ್ ರದ್ದು ಮಾಡಲಾಗಿದೆ.

ಕನ್ನಡ ಸಿನಿಮಾ ಟಿಕೆಟ್ ರೇಟ್ ದುಬಾರಿ:
ಜಿಎಸ್‍ಟಿ ಕಾಯ್ದೆಯಡಿ ಎಲ್ಲಾ ಭಾಷೆಯ ಚಿತ್ರಗಳಿಗೆ ಶೇ.28 ಏಕರೂಪ ಟ್ಯಾಕ್ಸ್ ವಿಧಿಸಲಾಗಿದೆ. ಇದರಿಂದಾಗಿ ಕನ್ನಡ ಚಿತ್ರ ವೀಕ್ಷಕರಿಗೆ ಹೊರೆಯಾಗಲಿದೆ ಏಕರೂಪ ಟ್ಯಾಕ್ಸ್. ಹಳೆಯ ತೆರಿಗೆಯ ನಿಯಮ ಪ್ರಕಾರ ಕನ್ನಡ ಚಿತ್ರಗಳಿಗೆ ಸರ್ಕಾರ ಮನರಂಜನಾ ತೆರಿಗೆ ವಿನಾಯ್ತಿ ನೀಡಿತ್ತು. ಇಲ್ಲಿವರೆಗೆ ಕನ್ನಡ ವೀಕ್ಷಕರು ಕೇಂದ್ರ ಸರ್ಕಾರದ ಸೇವಾ ತೆರಿಗೆ ಶೇ.15 ಹಾಗೂ ಇತರೆ ಸೆಸ್ ಸೇರಿ ಶೇ. 17 ಟ್ಯಾಕ್ಸ್ ಮಾತ್ರ ನೀಡುತ್ತಿದ್ದರು. ಆದರೆ ಜಿಎಸ್‍ಟಿಯಿಂದ ಈಗ ಕನ್ನಡ ಹಾಗೂ ಎಲ್ಲಾ ಭಾಷೆಯ ಸಿನಿಮಾಗಳಿಗೆ ಶೇ.28 ಆಗಲಿದೆ. ಇದರ ಪರಿಣಾಮ ಕನ್ನಡ ಚಿತ್ರ ವೀಕ್ಷಕರಿಗೆ ಶೇ.10 ಶೇ.11 ತೆರಿಗೆ ಹೆಚ್ಚಾಗಲಿದೆ. ಪರಭಾಷೆ ಚಿತ್ರ ಪ್ರೇಕ್ಷಕರಿಗೆ ಶೇ.3 ರಿಂದ ಶೇ.5 ತೆರಿಗೆ ಕಡಿಮೆಯಾಗಲಿದೆ .

ಕನ್ನಡ ಮತ್ತು ಕನ್ನಡೇತರ ಸಿನಿಮಾಗಳಿಗೆ ಎಷ್ಟು ತೆರಿಗೆ ಇತ್ತು?
ಇಲ್ಲಿಯವರೆಗೆ ಕನ್ನಡ ಸಿನಿಮಾಗಳಿಗೆ ಶೇ.100 ರಷ್ಟು ಮನರಂಜನಾ ತೆರಿಗೆ ಉಚಿತವಾಗಿದ್ದರೆ, ಕನ್ನಡೇತರ ಸಿನಿಮಾಗಳಿಗೆ ಶೇ.30 ತೆರಿಗೆ ವಿಧಿಸಲಾಗುತಿತ್ತು. ಪ್ರದರ್ಶನ ತೆರಿಗೆ ಕನ್ನಡ ಚಿತ್ರಗಳಿಗೆ 48 ರೂ. ಇದ್ದರೆ, ಕನ್ನಡೇತರ ಸಿನಿಮಾಗಳಿಗೆ 118 ರೂ. ಇತ್ತು. ಕನ್ನಡ ಮತ್ತು ಕನ್ನಡೇತರ ಸಿನಿಮಾಗಳಿಗೆ ಸೇವಾ ಶುಲ್ಕ 3 ರೂ. ಮತ್ತು ಪ್ರತಿ ಟಿಕೆಟ್ ಗೆ 1 ರೂ. ಹೆಚ್ಚುವರಿ ಶುಲ್ಕ ವಿಧಿಸಲಾಗುತಿತ್ತು.

ಪರಿಹಾರ ಏನು?
ದಶಕಗಳಿಂದ ಕನ್ನಡ ಚಿತ್ರಗಳಿಗೆ ಇದ್ದ ಮನರಂಜನಾ ತೆರಿಗೆ ವಿನಾಯಿತಿ ಉಳಿಸಿಕೊಳ್ಳಲು ಪರಿಹಾರವೂ ಇದೆ. ಈ ವಿನಾಯ್ತಿ ಮತ್ತೆ ಬೇಕಾದರೆ ಮೋದಿ ಸರ್ಕಾರದ ಜಿಎಸ್‍ಟಿ ಕೌನ್ಸಿಲ್‍ಗೆ ರಜ್ಯ ಸರ್ಕಾರ ಮೊರೆ ಹೋಗಬೇಕು. ಜಿಎಸ್‍ಟಿ ಕೌನ್ಸಿಲ್‍ಗೆ ತೆರಿಗೆ ಮರುಪರಿಶೀಲನೆ ಮಾಡುವ ಅಧಿಕಾರವಿದೆ. ರಾಜ್ಯ ಸರ್ಕಾರವೂ ಕೂಡ ತಮ್ಮ ತೆರಿಗೆ ಆದಾಯದಿಂದ ರೀಫಂಡ್ ಮಾಡುವ ಅವಕಾಶವಿದೆ.

ಇದನ್ನೂ ಓದಿ: ಜಿಎಸ್‍ಟಿಯಲ್ಲಿ ದಿನಬಳಕೆಯ ವಸ್ತುಗಳಿಗೆ ಎಷ್ಟು ತೆರಿಗೆ? ಯಾವುದು ಅಗ್ಗ? ಯಾವುದು ದುಬಾರಿ?

Leave a Reply

Your email address will not be published. Required fields are marked *