Wednesday, 20th June 2018

Recent News

ಪ್ರಾರ್ಥನಾ ಮಂದಿರವಾಯ್ತಾ ಶಿವಾಜಿನಗರ ಸರ್ಕಾರಿ ಶಾಲೆ?- ಶಾಲೆಯಲ್ಲಿ ಪ್ರತಿದಿನ ನಡೆಯುತ್ತೆ ಸಾಮೂಹಿಕ ಪ್ರಾರ್ಥನೆ

ಬೆಂಗಳೂರು: ನಗರದ ಶಿವಾಜಿನಗರ ಸರ್ಕಾರಿ ಶಾಲೆಯನ್ನು ಧಾರ್ಮಿಕ ಪ್ರಾರ್ಥನಾ ಮಂದಿರದಂತೆ ಬದಲಾವಣೆ ಮಾಡಿರುವ ಆರೋಪ ಕೇಳಿಬಂದಿದೆ.

ಸರ್ಕಾರಿ ಶಾಲೆಯಲ್ಲಿ ನಿಯಮದಂತೆ ಪಾಠ, ಪ್ರವಚನ ಹಾಗೂ ಶೈಕ್ಷಣಿಕ ಚಟುವಟಿಕೆ ನಡೆಯಬೇಕು. ಆದರೆ ಶಿವಾಜಿನಗರದ ಸರ್ಕಾರಿ ಶಾಲೆಯನ್ನು ಅಲ್ಪಸಂಖ್ಯಾತ ಪ್ರಾರ್ಥನಾ ಮಂದಿರದಂತೆ ಮಾಡಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ.

ಪ್ರಸ್ತುತ ಶಿವಾಜಿನಗರದ ಸರ್ಕಾರಿ ಶಾಲೆಯನ್ನು ಸಂಸ್ಥೆಯೊಂದು ದತ್ತು ಪಡೆದುಕೊಂಡಿದೆ. ದತ್ತು ಪಡೆದುಕೊಂಡ ಸಂಸ್ಥೆ ಶಾಲೆಯಲ್ಲಿ ಕೇವಲ ಒಂದು ಧರ್ಮದ ವಿದ್ಯಾರ್ಥಿಗಳಿಗೆ ಮಾತ್ರ ದಾಖಲಾತಿ ನೀಡುತ್ತಿದೆ ಎನ್ನಲಾಗಿದೆ. ಅಲ್ಲದೇ ಪ್ರತಿನಿತ್ಯ ನಡೆಯಬೇಕಾದ ರಾಷ್ಟ್ರಗೀತೆ ಗಾಯನ ಹಾಗೂ ಶೈಕ್ಷಣಿಕ ಚಟುವಟಿಕೆಗಳನ್ನು ಹೊರತುಪಡಿಸಿ ಧಾರ್ಮಿಕ ಕೇಂದ್ರವಾಗಿ ಪರಿವರ್ತಿಸಲಾಗಿದೆ ಎಂದು ಆರೋಪಿಸಲಾಗಿದೆ.

ಸರ್ಕಾರದಿಂದ ನಿಯೋಜನೆಗೊಂಡಿರುವ ಶಿಕ್ಷಕರು ಸಹ ಶಾಲೆಯ ತರಗತಿಯಲ್ಲಿ ನಡೆಯುವ ಧಾರ್ಮಿಕ ಪ್ರಾರ್ಥನೆಯನ್ನು ನಿರ್ಬಂಧಿಸಲು ಸಾಧ್ಯವಾಗಿಲ್ಲ. ಅಕ್ಷರ ಕಲಿಸುವ ಸರ್ಕಾರಿ ಶಾಲೆಯನ್ನು ಒಂದು ಸಮುದಾಯದ ಧಾರ್ಮಿಕ ಕೇಂದ್ರದಂತೆ ಬದಲಾಯಿಸಿಕೊಂಡಿದ್ದು ಸಾಮೂಹಿಕ ಪ್ರಾರ್ಥನಾ ಕೇಂದ್ರವಾಗಿ ಮಾರ್ಪಡಿಸಲಾಗಿದೆ. ವಿದ್ಯಾರ್ಥಿ ದಿಸೆಯಲ್ಲೇ ಮಕ್ಕಳಲ್ಲಿ ಇಂತಹ ತಾರತಮ್ಯ ಭಾವನೆ ಬೆಳೆಸುತ್ತಿರುವ ಕುರಿತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯ ಶಿಕ್ಷಕರು, ಶಾಲೆಯಲ್ಲಿ ಇಂತಹ ಪ್ರತ್ಯೇಕ ಪ್ರಾರ್ಥನಾ ಕೊಠಡಿ ಇಲ್ಲ. ಧಾರ್ಮಿಕ ಪ್ರಾರ್ಥನೆ ನಡೆಸುತ್ತಿರುವ ಕುರಿತು ಆರೋಪದ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು. ಇನ್ನು ಸ್ಥಳೀಯ ಬಿಎಓ ಪ್ರಭಾ ಅವರನ್ನು ಈ ಕುರಿತು ಪ್ರಶ್ನಿಸಿದರೆ, ಘಟನೆ ಕುರಿತು ತಮಗೆ ಮಾಹಿತಿ ಇಲ್ಲ. ಆರೋಪದ ಕುರಿತು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

Leave a Reply

Your email address will not be published. Required fields are marked *