ಖಾಸಗೀಕರಣದ ಬಾಗಿಲಲ್ಲಿ ವಿಐಎಸ್‍ಎಲ್: ಕಾರ್ಮಿಕರ ಪ್ರತಿಭಟನೆ

ಶಿವಮೊಗ್ಗ: ಭದ್ರಾವತಿಯಲ್ಲಿರುವ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಖಾಸಗೀಕರಣ ಪ್ರಯತ್ನ ನಿಲ್ಲಿಸಬೇಕು ಎಂದು ಆಗ್ರಹಿಸಿ ಇಂದು ಕಾರ್ಖಾನೆ ಗೇಟ್ ಮುಂಭಾಗ ಕಾರ್ಮಿಕರು ತಮ್ಮ ಕುಟುಂಬ ಸಮೇತ ಪ್ರತಿಭಟನೆ ನಡೆಸಿದರು.

1923ರಲ್ಲಿ ಮೈಸೂರು ಅರಸರು ಆರಂಭಿಸಿದ ಈ ಕಾರ್ಖಾನೆಯನ್ನು 1989ರಲ್ಲಿ ಕೇವಲ ಒಂದೇ ಒಂದು ರೂಪಾಯಿಗೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಒಪ್ಪಿಸಿತ್ತು. ಆಗ 17 ಸಾವಿರ ಕಾರ್ಮಿಕರು ಹತ್ತಕ್ಕೂ ಹೆಚ್ಚು ಬೇರೆಬೇರೆ ಘಟಕಗಳಲ್ಲಿ ಕೆಲಸ ಮಾಡುತ್ತಿದ್ದರು. ಈಗ ಕೇವಲ ಮೂರು ಘಟಕಗಳಲ್ಲಿ ಮುನ್ನೂರು ಮಂದಿ ಹಾಗೂ ಗುತ್ತಿಗೆ ಆಧಾರದಲ್ಲಿ 1500 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.

ಕೇಂದ್ರ ಸರ್ಕಾರ ನಿರಂತರ ನಷ್ಟದ ನೆಪವೊಡ್ಡಿ ಕಾರ್ಖಾನೆಯನ್ನು ಖಾಸಗೀಕರಿಸಲು ಮುಂದಾಗಿದೆ. ವಿಐಎಸ್‍ಎಲ್‍ಗೆ ಸ್ವಂತ ಗಣಿ ನೀಡಿಲ್ಲ. 650 ಕೋಟಿ ಹೂಡಿಕೆ ಮಾಡಿ ಮೇಲ್ದರ್ಜೆಗೇರಿಸಿದರೆ ಕಾರ್ಖಾನೆ ಇನ್ನಷ್ಟು ಲಾಭಗಳಿಸಲು ಸಾಧ್ಯವಿದೆ. ಆದರೆ ಈಗ ಸುಮಾರು 10 ಸಾವಿರ ಕೋಟಿ ಮೌಲ್ಯದ ಈ ಕಾರ್ಖಾನೆಯನ್ನು ಸರ್ಕಾರ ಖಾಸಗಿಯವರಿಗೆ ನೀಡಿ ಕೈ ತೊಳೆದುಕೊಳ್ಳಲು ಮುಂದಾಗಿದೆ.

ವಿಐಎಸ್‍ಎಲ್ ಕಾರ್ಖಾನೆಯನ್ನು 1998ರಲ್ಲಿ ಸ್ಟಿಲ್ ಆಥಾರಿಟಿ ಆಫ್ ಇಂಡಿಯಾ ತನ್ನ ವಶಕ್ಕೆ ತೆಗೆದುಕೊಂಡಿದೆ. ಅಂದಿನಿಂದ ಇಂದಿನವರೆಗೂ ಇಲ್ಲಿಗೆ ಕೇವಲ 300 ಕೋಟಿಯಷ್ಟು ಮಾತ್ರ ಹೂಡಿಕೆ ಮಾಡಿದೆ. ತನ್ನದೇ ಅಧೀನದ ಇತರೆ ಸ್ಟೀಲ್ ಪ್ಲಾಂಟ್‍ಗಳಿಗೆ ಸಾವಿರಾರು ಕೋಟಿ ವ್ಯಯ ಮಾಡಿದೆ. ಕರ್ನಾಟಕದ ಬಗ್ಗೆ ಈ ರೀತಿಯ ನಿರ್ಲಕ್ಷ್ಯ ತೋರಿದ ಕೇಂದ್ರ ಸರ್ಕಾರ ಈಗ ಇಡೀ ಕಾರ್ಖಾನೆಯನ್ನೇ ಖಾಸಗಿಯವರಿಗೆ ವಹಿಸಲು ಮುಂದಾಗಿದೆ.

ಕೇಂದ್ರ ಸರ್ಕಾರದ ವಿರುದ್ಧ ಇದು ಮೊದಲ ಹಂತ ಹೋರಾಟ. ಕಾರ್ಮಿಕರು ಇಂದು ಕುಟುಂಬ ಸಮೇತ ಪ್ರತಿಭಟನೆ ನಡೆಸಿದ್ದಾರೆ. ಈ ಬಗ್ಗೆ ಸರ್ಕಾರಗಳು ತಮ್ಮ ಸ್ಪಷ್ಟ ನಿಲವು ಪ್ರಕಟಿಸುವವರೆಗೂ ಈ ಹೋರಾಟ ಮುಂದುವರೆಯಲಿದೆ ಎಂದು ವಿಐಎಸ್‍ಎಲ್ ಕಾರ್ಮಿಕ ಸಂಘದ ಅಧ್ಯಕ್ಷ ಚಂದ್ರಹಾಸ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

ಇಂದಿನ ಹೋರಾಟದಲ್ಲಿ ಕಾರ್ಮಿಕ ಸಂಘದ ಅಧ್ಯಕ್ಷ ಚಂದ್ರಹಾಸ್, ಪ್ರಧಾನ ಕಾರ್ಯದರ್ಶಿ ಜಗದೀಶ್, ಕಾರ್ಮಿಕ ಮುಖಂಡರಾದ ಜಗದೀಶ್, ರಾಮಕೃಷ್ಣ, ಡಿ.ಸಿ.ಮಾಯಣ್ಣ, ಶಾಸಕ ಅಪ್ಪಾಜಿಗೌಡ, ಮಾಜಿ ಶಾಸಕ ಸಂಗಮೇಶ್ ಇನ್ನಿತರರು ಪಾಲ್ಗೊಂಡಿದ್ದರು.

 

LEAVE A REPLY