Thursday, 21st June 2018

Recent News

ಯುಪಿಯಲ್ಲಿ ಸೈಕಲ್ ಕೇಕೆ, ಪ್ರಧಾನಿ ಮೋದಿಗೆ ಎಚ್ಚರಿಕೆ – ಮಹಾ ಮೈತ್ರಿಗೆ ಇದು ವೇದಿಕೆ!

ಮೋದಿ.. ಮೋದಿ.. ಯೋಗಿ.. ಯೋಗಿ.. ಇದು ಬಿಜೆಪಿ ಕಾರ್ಯಕರ್ತರ ಅಬ್ಬರಿಸಿ ಬೊಬ್ಬರಿದು ಘೋಷಣೆ ಕೂಗುತ್ತಿದ್ದ ಪರಿ. ಆದರೆ ಇವತ್ತು ಈ ಘೋಷಣೆ ಕೂಗು ತಗ್ಗಿ ಹೋಗಿತ್ತು. ಆನೆಯ ಸಹಾಯದಿಂದ ಸೈಕಲ್ ಸವಾರಿ ಮಾಡಿದವರಿಗೆ ಶಿಳ್ಳೆ, ಚಪ್ಪಾಳೆಯ ಸ್ವಾಗತ ಸಿಕ್ಕಿದೆ.

ಪ್ರಧಾನಿ ಮೋದಿಯ ಆಶ್ವಮೇಧ ಕುದುರೆಯನ್ನು ಕಟ್ಟಿಹಾಕಲು ವಿಪಕ್ಷಗಳು ಒಂದಾಗಬೇಕು ಎನ್ನುವ ಕೂಗಿಗೆ ಪುಷ್ಠಿ ಸಿಕ್ಕಿದೆ. ಇದಕ್ಕೆಲ್ಲಾ ಕಾರಣ ಗಟ್ಟಿ ಕೇತ್ರಗಳಲ್ಲೇ ಬಿಜೆಪಿ ಮಕಾಡೆ ಮಲಗಿದೆ. ಉತ್ತರಪ್ರದೇಶದ ಗೋರಖ್‍ಪುರ್, ಫೂಲ್‍ಪುರ್ ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ನೆಲಕೆಚ್ಚಿದೆ. ಎರಡು ದಶಕಗಳಿಗೂ ಹೆಚ್ಚು ಕಾಲ ನಡೆಸಿದ ಯೋಗಿ ಆರ್ಭಟ ನಿಂತಿದೆ. ಈ ಉಪಚುನಾವಣೆಗಳಲ್ಲಿನ ಸೋಲು ಮೋದಿ, ಯೋಗಿಯ ಜಬರ್ದಸ್ತ್ ಹವಾವನ್ನೇ ಪ್ರಶ್ನಿಸುವಂತಾಗಿದೆ.

ಅಂದಿದ್ದ ಹವಾ, ಈಗ ಎಲ್ಲೋಯ್ತು ಶಿವಾ ಅನ್ನೋ ಪ್ರಶ್ನೆಗಳ ಸುರಿಮಳೆ ಜೋರಾಗಿವೆ. ಹಾಗಾದ್ರೆ ಈ ಉಪಚುನಾವಣೆ ಮುಂದಿನ ಚುನಾವಣೆಗಳಿಗೆ ದಿಕ್ಸೂಚಿನಾ? ಮೋದಿಯ ನಾಗಲೋಟಕ್ಕೆ ಬ್ರೇಕ್ ಹಾಕಲು ಮಿತ್ರಪಕ್ಷಗಳನ್ನು ಕಾಂಗ್ರೆಸ್ ಗುಡ್ಡೆ ಹಾಕುತ್ತಾ ಎನ್ನುವ ಲೆಕ್ಕಚಾರಗಳು ಭರ್ಜರಿಯಾಗಿಯೇ ನಡೆದಿವೆ.

ಈ ನಡುವೆ ಉಪಚುನಾವಣೆಯ ಫಲಿತಾಂಶದಿಂದ ಕಾಂಗ್ರೆಸ್‍ನ ಶಕ್ತಿಯೇನೂ ವೃದ್ಧಿಯಾಗಿಲ್ಲ. ಆದರೂ ಮೈತ್ರಿ ರಾಜಕಾರಣ ಗಟ್ಟಿಗೊಳಿಸಲು ಕೈಗೆ ವೇದಿಕೆ ಸಿಕ್ಕಂತಾಗಿದೆ. ಎಸ್‍ಪಿ, ಬಿಎಸ್‍ಪಿ ಕಾಂಬಿನೇಶನ್ ಫೈಟ್‍ನಿಂದಾಗಿಯೇ ಬಿಜೆಪಿ ಸೋಲಿಗೆ ಕಾರಣವಾಗಿರೋದು ಸ್ಪಷ್ಟವಾಗಿದ್ದು, ಇದೇ ಮೈತ್ರಿ ಮುಂದಿನ ಲೋಕಸಭಾ ಚುನಾವಣೆಗೆ ಮುಂದುವರಿದರೆ ಬಿಜೆಪಿಗೆ ಕಷ್ಟ ಎನ್ನುವ ಚರ್ಚೆಗಳು  ನಡೆಯಲು ಆರಂಭಿಸಿದೆ. ಅಷ್ಟೇ ಅಲ್ಲ ರಾಷ್ಟ್ರ ರಾಜಕಾರಣದ ದಿಕ್ಸೂಚಿಗೆ ಮುನ್ನುಡಿ ಬರೆದಿದ್ದು, ನಿನ್ನೆಯಷ್ಟೇ ಸೋನಿಯಾಗಾಂಧಿ 20 ಮಿತ್ರ ಪಕ್ಷಗಳ ಜತೆ ಭೋಜನ ಕೂಟ ನಡೆಸಿ ಮೈತ್ರಿ ಕಸರತ್ತು ಆರಂಭಿಸಿದ್ದಾರೆ. ಹಾಗಾಗಿಯೇ ಮೋದಿ ದುಷ್ಮನ್‍ಗಳೆಲ್ಲಾ ಒಂದಾದರೆ 2019ರ ಲೋಕಸಭಾ ಚುನಾವಣೆಯಲ್ಲಿ ಹಾದಿ ಕಠಿಣ ಎನ್ನುವ ಲೆಕ್ಕಾಚಾರಗಳು ಜೋರಾಗಿದೆ.

ಕರ್ನಾಟಕ ಚುನಾವಣೆಯಲ್ಲೂ ಮೋದಿ, ಶಾ ಜೋಡಿ ಎಚ್ಚರಿಕೆಯ ಹೆಜ್ಜೆಯ ಇಡಬೇಕಾಗಿದ್ದು, ಕಾಂಗ್ರೆಸ್‍ನಿಂದ ಜೆಡಿಎಸ್ ಪಕ್ಷವನ್ನು ದೂರ ಇರುವಂತೆಯೇ ನೋಡಿಕೊಳ್ಳುವುದನ್ನು ಕಲಿಯಬೇಕಿದೆ. ಇಲ್ಲದಿದ್ದರೇ ಗಂಡಾಂತರ ಗ್ಯಾರಂಟಿ ಎನ್ನುವುದು ರಾಜಕೀಯ ಪಡಸಾಲೆಯಲ್ಲಿ ವಿಶ್ಲೇಷಣೆ ಆರಂಭವಾಗಿದೆ.

2014ರಿಂದ ಇಲ್ಲಿ ತನಕ ಕೆಲ ಸಣ್ಣ ಸಣ್ಣ ಸೋಲುಗಳನ್ನು ಹೊರತುಪಡಿಸಿದರೆ ಮೋದಿಗೆ ವಿಜಯದ ಮೇಲೆ ವಿಜಯ ದಕ್ಕಿದ್ದು ದೊಡ್ಡ ಸಾಧನೆಯೇ ಸರಿ. ಆದರೆ ಇದೇ ಹವಾದ ಉತ್ತರ ಪ್ರದೇಶದ ಉಪಚುನಾವಣೆಗಳ ಸೋಲಿನಿಂದ ಕಡಿಮೆಯಾಗಲು ಶುರುವಾಯ್ತಾ? ಕರ್ನಾಟಕ ಚುನಾವಣೆ ಮೋದಿ, ಶಾ ಪಾಲಿನ ಅತಿದೊಡ್ಡ ಅಗ್ನಿ ಪರೀಕ್ಷೆಯಲ್ಲವಾ? ಮೈತ್ರಿ ರಾಜಕಾರಣ ಮೋದಿಯ ಮಾಂತ್ರಿಕ ರಾಜಕಾರಣಕ್ಕೆ ಪೆಟ್ಟು ನೀಡುತ್ತಾ ಎಂಬೆಲ್ಲಾ ಪ್ರಶ್ನೆಗಳಿಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

Leave a Reply

Your email address will not be published. Required fields are marked *