Thursday, 24th May 2018

ಈ ಕಾರಣಕ್ಕಾಗಿ ಕಣ್ಣೀರು ಸುರಿಸಿದ್ರು ಮಾಜಿ ಡಿವೈಎಸ್‍ಪಿ ಅನುಪಮಾ ಶೆಣೈ!

ಉಡುಪಿ: ಮಾಜಿ ಡಿವೈಎಸ್‍ಪಿ ಅನುಪಮಾ ಶೆಣೈ ಇಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಾಜಿ ಡಿವೈಎಸ್‍ಪಿ ಅನುಪಮಾ ಶೆಣೈ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಮೂರು ಪ್ರಕರಣಗಳನ್ನು ಸಿಬಿಐಗೆ ವಹಿಸಬೇಕೆಂದು ಕೋರಿದ್ದಾರೆ.

ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರ 70 ಲಕ್ಷ ರೂಪಾಯಿಯ ಹ್ಯೂಬ್ಲೋಟ್ ವಾಚ್ ಪ್ರಕರಣ, ಜೋಗ ಜಲಪಾತವನ್ನು ಖಾಸಗಿಯವರಿಗೆ ವಹಿಸಿದ್ದು ಮತ್ತು ಉಡುಪಿ ಸರ್ಕಾರಿ ಆಸ್ಪತ್ರೆಯನ್ನು ಉದ್ಯಮಿ ಬಿ ಆರ್ ಶೆಟ್ಟಿಗೆ ಮಾರಿದ ಪ್ರಕರಣವನ್ನು ಸಿಬಿಐ ತನಿಖೆ ಮಾಡಿ ಎಂದು ಅನುಪಮಾ ಪ್ರಧಾನಿಗೆ ಪತ್ರ ಬರೆದಿದ್ದರು. ಒಂದೂವರೆ ತಿಂಗಳ ನಂತರ ಪತ್ರಕ್ಕೆ ಪ್ರಧಾನಿ ಕಚೇರಿಯಿಂದ ಉತ್ತರ ಬಂದಿದೆ. ಮುಂದಿನ ಇಲಾಖೆಗೆ ಕಳುಹಿಸಿರುವುದಾಗಿ ಪ್ರತಿಕ್ರಿಯೆ ನೀಡಿದ್ದಾರೆ ಅಂತ ಹೇಳಿದ್ರು.

ಪ್ರಕರಣ ಸಂಬಂಧ ಸಿಎಂ, ಸಚಿವ ಅರ್. ವಿ ದೇಶಪಾಂಡೆ, ಪ್ರಮೋದ್ ಮಧ್ವರಾಜ್, ಕಾಗೋಡು ತಿಮ್ಮಪ್ಪ, ರಮೇಶ್ ಕುಮಾರ್, ಮಹಾದೇವಪ್ಪ, ಟಿ.ಬಿ ಜಯಚಂದ್ರ, ಅಧಿಕಾರಿಗಳಾದ ರಜನೀಶ್ ಗೋಯೆಲ್, ಶಾಲಿನಿ ರಜನೀಶ್, ಉಡುಪಿಯ ಅಂದಿನ ಜಿಲ್ಲಾಧಿಕಾರಿ ವೆಂಕಟೇಶ್, ಉದ್ಯಮಿ ಡಾ. ಬಿ.ಆರ್ ಶೆಟ್ಟಿ- ವಾಚ್ ನೀಡಿದ ಡಾ. ಗಿರೀಶ್ ಚಂದ್ರ ವರ್ಮಾ ಹೆಸರನ್ನು ನಮೂದಿಸಿ ಇವರ ಮೇಲೆಲ್ಲಾ ತನಿಖೆಯಾಗಬೇಕು ಎಂದು ಅನುಪಮಾ ಒತ್ತಾಯಿಸಿದ್ದಾರೆ. ಎರಡು ತಿಂಗಳೊಳಗೆ ಪ್ರಧಾನಿ ಮೋದಿ ಪ್ರಕರಣಗಳನ್ನು ಸಿಬಿಐ ತನಿಖೆಗೆ ಆದೇಶ ನೀಡದಿದ್ದರೆ ಕಾನೂನು ಹೋರಾಟದ ಮೊರೆ ಹೋಗುವುದಾಗಿ ಗಡುವು ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ರಾಜ್ಯ ಪೊಲೀಸರನ್ನು ರಾಜಕಾರಣಿಗಳು ಪೀಡಿಸಿ- ಕಾಡಿಸುತ್ತಿರುವುದನ್ನು ನೆನೆದು ಮಾಜಿ ಡಿವೈಎಸ್‍ಪಿ ಅನುಪಮಾ ಶೆಣೈ ಕಣ್ಣೀರಿಟ್ಟಿದ್ದಾರೆ. ಕಲ್ಲಪ್ಪ ಹಂಡಿಭಾಗ್ ಮತ್ತು ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆಯ ಬಗ್ಗೆ ಆಕ್ರೋಶದಿಂದ ಮಾತನಾಡಿದರು. ಸಿಐಡಿ ಇಲಾಖೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶೆಣೈ, ನಿಮಗೆ ನಾಚಿಕೆ ಆಗೊಲ್ವಾ..? ನಿಮ್ಮ ಕುಟುಂಬದವರು ಸತ್ತಾಗ ಹೀಗೆ ಮಾಡ್ತೀರಾಂತ ಪ್ರಶ್ನೆ ಮಾಡಿದರು. ಅಲ್ಲದೇ ಈ ಬಗ್ಗೆ ಕೋರ್ಟಿಗೆ ಇನ್ನೂ ಚಾರ್ಜ್‍ಶೀಟ್ ಹಾಕದಿರುವುದನ್ನು ಖಂಡಿಸಿರು.

ಬೈಕ್ ರ್ಯಾಲಿಗೆ ರಸ್ತೆ ಕಾಯುವ ಗತಿ ರಾಜ್ಯದ- ಪೊಲೀಸರಿಗೆ ಬಂದಿದೆ. ಸಿಎಂ ಸಿದ್ದರಾಮಯ್ಯ ಅವರ ಹ್ಯೂಬ್ಲೋಟ್ ವಾಚ್ ಪ್ರಕರಣದಲ್ಲಿ ವಾಚ್ ಮಾತ್ರ ಉಳಿದುಕೊಂಡಿದೆ. ಅದನ್ನು ಪೊಲೀಸರ್ಯಾರು ಕಾಯದಿದ್ದರೆ, ಸ್ವತಃ ಡಿಜಿಪಿಯವರೇ ಕಾದುಕೊಂಡು ಕುಳಿತುಕೊಳ್ಳಲಿ. ಪ್ರಕರಣದಲ್ಲಿ ಇರುವ ಸಾಕ್ಷಿ ಅಂದ್ರೆ ಅದು ವಾಚ್ ಮಾತ್ರ, ಅದೇನಾದ್ರು ಕಳವಾದರೆ ಸ್ಪೀಕರ್ ಕೋಳಿವಾಡ್ ಅವರನ್ನೂ ಆರೋಪಿ ಮಾಡುತ್ತೇನೆ ಎಂದು ಅನುಪಮಾ ಶೆಣೈ ಗುಡುಗಿದರು.

ಒಟ್ಟಿನಲ್ಲಿ ಎರಡು ತಿಂಗಳ ಕಾಲ ಈ ಪ್ರಕರಣಗಳಲ್ಲಿ ಕಾದು ನೋಡುತ್ತೇನೆ. ಮುಂದೆ ಇನ್ನಷ್ಟು ಹಗರಣಗಳನ್ನು ಬಯಲಿಗೆಳೆಯುವುದಾಗಿ ಹೇಳಿದ್ದಾರೆ.

Leave a Reply

Your email address will not be published. Required fields are marked *