ಈ 42 ಜಾತಿಯ ಮರವನ್ನು ಕತ್ತರಿಸಲು ಅನುಮತಿ ಬೇಕಿಲ್ಲ; ಅರಣ್ಯ ಇಲಾಖೆ ಆದೇಶಕ್ಕೆ ವ್ಯಾಪಕ ವಿರೋಧ

ಮಡಿಕೇರಿ: ರಾಜ್ಯದಲ್ಲಿ ತೀವ್ರ ಬರಗಾಲದ ನಡುವೆಯೂ 42 ಜಾತಿಯ ಮರಗಳನ್ನು ಕಡಿಯಲು ಮತ್ತು ಸಾಗಿಸಲು ಯಾವುದೇ ಅನುಮತಿ ಬೇಕಾಗಿಲ್ಲ ಎಂದು ಅರಣ್ಯ ಇಲಾಖೆ ಆದೇಶ ಹೊರಡಿಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

ಬರದಿಂದ ತತ್ತರಿಸಿರುವ ಕೊಡಗು ಜಿಲ್ಲೆಯಲ್ಲಿ ಅರಣ್ಯ ಇಲಾಖೆಯ ಆದೇಶಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಅರಣ್ಯ ಪರಿಸರ ಇಲಾಖೆ ಅಧೀನ ಕಾರ್ಯದರ್ಶಿ ಎಚ್.ಎಸ್. ಭಾಗ್ಯಲಕ್ಷ್ಮೀ ಅವರು ಡಿ. 7ರಿಂದ ಕರ್ನಾಟಕ ಅರಣ್ಯ ಕಾಯ್ದೆ 144 ರಲ್ಲಿ ಜಾರಿಗೆ ಬರುವಂತೆ 42 ಜಾತಿಯ ಮರಗಳನ್ನು ಕಡಿಯಲು ಮತ್ತು ಸಾಗಿಸಲು ಯಾವುದೇ ಅನುಮತಿ ಬೇಕಾಗಿಲ್ಲ ಎಂಬ ಆದೇಶ ಹೊರಡಿಸಿದ್ದಾರೆ.

ಈ ಮೊದಲು ಮರಗಳನ್ನು ಕಡಿಯಲು ಅರಣ್ಯ ಇಲಾಖೆಯ ಅನುಮತಿ ಬೇಕಾಗಿತ್ತು. ಆದರೆ ಇನ್ನು ಅನುಮತಿಯ ದುರುಪಯೋಗ ಮಾಡಿಕೊಂಡು ಮರಗಳನ್ನು ಎಗ್ಗಿಲ್ಲದೆ ಉರುಳಿಸುವ ಸಾಧ್ಯತೆ ಇದೆ. ಅಲ್ಲದೆ 42 ಜಾತಿಯ ಮರಗಳ ಲೆಕ್ಕ ತೋರಿಸಿ ಬೇರೆ ಜಾತಿಗಳ ಮರಗಳನ್ನು ಕಡಿಯಲು ಮರಗಳ್ಳರಿಗೇನೂ ಹೇಳಿಕೊಡಬೇಕಾಗಿಲ್ಲ. ಈ ಹಿನ್ನೆಲೆಯಲ್ಲಿ ಆದೇಶಕ್ಕೆ ಪರಿಸರವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಅಲ್ಲದೆ ಪ್ರಾಣಿ-ಪಕ್ಷಿಗಳಿಗೂ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಕಷ್ಟ ಎದುರಿಸಬೇಕಾಗುತ್ತದೆ ಎಂದು ಪರಿಸರವಾದಿಗಳು ಅಂತಕ ವ್ಯಕ್ತ ಪಡಿಸಿದ್ಧಾರೆ.

ಅಕೇಶಿಯಾ, ದೊಡ್ಡಬೇವು, ರೈನ್ ಮರ, ದೊಡ್ಡಬಿದಿರು, ಕಿರುಬಿದಿರು ಹೊರತುಪಡಿಸಿ ಎಲ್ಲಾ ಬಾಂಬೂ ಮರ, ಕಕ್ಕೆ ಹೊರತುಪಡಿಸಿ ಎಲ್ಲಾ ಕಾಸಿಯ ಜಾತಿ ಮರಗಳು, ಗೋಡಂಬಿ, ಕ್ರಿಸ್ಮಸ್ ಮರ, ಅಡಿಕೆ, ಗಾಳಿಮರ, ನಿಂಬೆ, ಕಿತ್ತಳೆ, ತೆಂಗು, ಕಾಫಿ, ಗುಲ್‍ಮೊಹರ್, ದಡಪ, ನೀಲಗಿರಿ, ಗೊಬ್ಬರದ ಗಿಡ, ಸಿಲ್ವರ್ ಮರ, ರಬ್ಬರ್, ಜಕರಂಡ, ಆನೆತೊರಡುಕಾಯಿ, ಸುಬಬುಲ್, ಚತ್ರಿ ಮರ, ಸಪೋಟ, ಹೆಬ್ಬೇವು, ಆಕಾಶ ಮಲ್ಲಿಗೆ, ನುಗ್ಗೆ, ಹಿಪ್ಪುನೇರಳೆ, ಕರಿಬೇವು, ಪೆಲ್ಮೋಫಾರ್ಮ್, ಬಸವನಪಾದ, ದೇವರ ಕಣಗೆಲೆ, ಉಬ್ಬಿನ ಮರ, ಸೀಬೆ ಹಣ್ಣು, ಅಗಸ್ತ್ಯ, ಸೀಮರೋಬ, ನೀರುಕಾಯಿ ಮರ, ತಬೇಬುಯಾ, ಕೊರಣೇಕೆಲಾರ್ ಮರಗಳನ್ನು ಕಡಿಯಲು ಅನುಮತಿ ಬೇಕಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕ್ಯಾನ್ಸರ್ ಚಿಕಿತ್ಸೆಗೆ ನೆರವಾಗುವ ಸಿಮರೂಬ, ಮಣ್ಣಿನಲ್ಲಿ ಸಾರಜನಕ ಹೆಚ್ಚಿಸುವ ಇಂಡಿಯನ್ ಕೋರಲ್ ಟ್ರೀ, ಹೆಬ್ಬೇವು ಮುಂತಾದ ಮರಗಳನ್ನೂ ಕಡಿಯಲು ಆದೇಶದಲ್ಲಿ ಅನುಮತಿ ಕೊಡಲಾಗಿದೆ. ಹಲವು ಮರಗಳು ಪಕ್ಷಿಗಳಿಗೆ ಆಶ್ರಯತಾಣವಾಗಿವೆ. ಈ ಮರಗಳ ನಾಶದಿಂದ ರೈತಸ್ನೇಹಿ ಪಕ್ಷಿಗಳು ಕೂಡ ದುಷ್ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದು ಪರಿಸರವಾದಿಗಳ ವಾದ. ಕೊಡಗು ಜಿಲ್ಲೆಯ ಮೂರೂ ತಾಲೂಕುಗಳು ಈ ಬಾರಿ ಬರ ತಾಲೂಕುಗಳೆಂದು ಘೋಷಿಸಲ್ಪಟ್ಟಿವೆ. ಇದರ ನಡುವೆಯೂ ಅರಣ್ಯ ಇಲಾಖೆ ಆದೇಶ ಹೊರಡಿಸಿರುವುದರಿಂದ ಮುಂದಿನ ವರ್ಷವೂ ಜಿಲ್ಲೆಯಲ್ಲಿ ಬರ ಎದುರಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಬೆಟ್ಟಗುಡ್ಡದ ಪ್ರದೇಶವಾಗಿರುವ ಕೊಡಗು ಜಿಲ್ಲೆಯಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದ್ದು, ಮುಂದಿನ ವರ್ಷ ನೀರಿನ ಸಮಸ್ಯೆ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಇದೆ ಎಂದು ಕೊಡಗು ಜಿಲ್ಲೆಯ ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕೆಂಬ ಆಗ್ರಹಗಳು ಕೇಳಿಬರುತ್ತಿವೆ. ಒಟ್ಟಿನಲ್ಲಿ ತನ್ನ ಆದೇಶದಿಂದ ಎಡವಟ್ಟು ಮಾಡಿಕೊಳ್ಳುತ್ತಿರೋ ಸರ್ಕಾರ ಪರಿಸರವಾದಿಗಳ ತೀವ್ರ ವಿರೋಧದಿಂದ ಆದೇಶವನ್ನು ಹಿಂಪಡೆದುಕೊಳ್ಳುತ್ತಾ ಎನ್ನುವ ಪ್ರಶ್ನೆ ಈಗ ಎದ್ದಿದೆ.

LEAVE A REPLY