Thursday, 21st June 2018

5 ವರ್ಷದ ಬಾಲಕನ ಆಟಕ್ಕೆ 60 ಮನೆಗಳು ಹೊತ್ತಿ ಉರಿಯಿತು!

(ಸಾಂದರ್ಭಿಕ ಚಿತ್ರ)

ಆಗ್ರಾ: 5 ವರ್ಷದ ಬಾಲಕನ ಆಟಕ್ಕೆ 60 ಮನೆಗಳು ಹೊತ್ತಿ ಉರಿದಿರುವ ಘಟನೆ ಉತ್ತರ ಪ್ರದೇಶದ ಆಗ್ರ ಸಮೀಪದ ಝಾಂಡಿ ಕಿ ಮಾಡಿಯಾ ಹಳ್ಳಿಯಲ್ಲಿ ನಡೆದಿದೆ.

ಬೆಂಕಿ ಕಡ್ಡಿಗಳ ಜೊತೆ ಆಟವಾಡುತ್ತಿದ್ದ ಬಾಲಕ ಕಡ್ಡಿಯನ್ನು ಹೊತ್ತಿಸಿ ತಮ್ಮ ಗುಡಿಸಿಲಿನ ಮೇಲೆ ಅಚಾನಕ್ ಆಗಿ ಹಾಕಿದ್ದಾನೆ. ಗುಡಿಸಿಲಿಗೆ ಬೆಂಕಿ ಹೊತ್ತಿಕೊಂಡು ಸುತ್ತ ಇರುವ ಗುಡಿಸಿಲುಗಳಿಗೂ ಪಸರಿಸಿದೆ. ಇದರಿಂದಾಗಿ ಎಲ್ಲಾ 60 ಗುಡಿಸಲುಗಳು ಬೆಂಕಿಗೆ ಆಹುತಿಯಾಗಿವೆ.

ಅಮ್ರಿತ್ ಪುರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಗಂಗಾ ನದಿಯ ಬಳಿ ಹಳ್ಳಿ ಇದೆ. ಹಳ್ಳಿಗೆ ಸಂಪರ್ಕ ಸಾಧಿಸಲು ಕಷ್ಟವಿರುವುದರಿಂದ ಸ್ಥಳಕ್ಕೆ ಒಂದು ಅಗ್ನಿಶಾಮಕ ವಾಹನ ತಲುಪಲು ಸಾಧ್ಯವಾಗಿದೆ. ಕೇವಲ ಒಂದು ಅಗ್ನಿಶಾಮಕ ವಾಹನ ಬೆಂಕಿಯನ್ನು ಆರಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದರಿಂದ ಸಂಪೂರ್ಣ 60 ಗುಡಿಸಲುಗಳು ಸುಟ್ಟು ಹೋಗಿವೆ ಎನ್ನಲಾಗಿದೆ. ಘಟನೆಯಿಂದ ಯಾವುದೇ ಜೀವ ಹಾನಿಯಾಗಿಲ್ಲ. ನಂದಿಸಲು ಅಗ್ನಿಶಾಮಕ ದಳದವರು ಸುಮಾರು 2 ಗಂಟೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಜಿಲ್ಲಾಧಿಕಾರಿ ಮೋನಿಕಾ ರಾಣಿ, ತಹಶೀಲ್ದಾರ್ ರಾಜೀವ್ ನಿಗಮ್, ಎಸ್ ಹೆಚ್ ಒ ರಾಮ್ ಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿ ಪರಿಹಾರದ ಬಗ್ಗೆ ಭರವಸೆ ನೀಡಿದ್ದಾರೆ.

ಬೆಂಕಿ ಸಂಪೂರ್ಣ ಹಳ್ಳಿಯನ್ನು ಆಹುತಿ ತೆಗೆದುಕೊಂಡಿದೆ. ಮನೆಗಳನ್ನು ಹುಲ್ಲು ಮತ್ತು ಪ್ಲಾಸ್ಟಿಕ್ ಗಳಿಂದ ಕಟ್ಟಲಾಗಿತ್ತು. ಹತ್ತಿರದಲ್ಲೇ ಇರುವ ಸರ್ಕಾರಿ ಶಾಲೆಗೆ ಎಲ್ಲರನ್ನೂ ಸ್ಥಳಾಂತರಿಸಲಾಗಿದ್ದು ನೀರು ಮತ್ತು ಆಹಾರವನ್ನು ಒದಗಿಸಲಾಗಿದೆ ಎಂದು ರಾಮ್ ಪ್ರಕಾಶ್ ಹೇಳಿದ್ದಾರೆ.

ಬಾಲಕನ ಅಚಾತುರ್ಯದಿಂದ ಬೆಂಕಿ ಹತ್ತಿಕೊಂಡಿದೆ. ಘಟನೆ ನಡೆದಾಗ ಮನೆಯಲ್ಲಿ ತಂದೆ ತಾಯಿ ಇಬ್ಬರೂ ಇರಲಿಲ್ಲ. ಹಾಗಾಗಿ ಬಾಲಕನ ಇಲ್ಲ ಪೋಷಕರ ವಿರುದ್ಧ ದೂರ ದಾಖಲಿಸಿಕೊಂಡಿಲ್ಲ ಎಂದು ತಿಳಿಸಿದರು.

Leave a Reply

Your email address will not be published. Required fields are marked *