9 ಲಕ್ಷ ರೂ. ಮೌಲ್ಯದ ಮೀನುಗಳನ್ನು ಸಾಗಿಸ್ತಿದ್ದ ಲಾರಿ ಧಾರವಾಡದಲ್ಲಿ ಪಲ್ಟಿ

ಧಾರವಾಡ: ಟಯರ್ ಸ್ಫೋಟಗೊಂಡು ಮೀನಿನ ಲಾರಿಯೊಂದು ಧಾರವಾಡ ತಾಲೂಕಿನ ಹೊಯ್ಸಳನಗರ ಬೈಪಾಸ್ ರಸ್ತೆಯಲ್ಲಿ ಪಲ್ಟಿಯಾಗಿದೆ.

ಇಂದು ಬೆಳಗ್ಗೆ ಮುಂಬೈಯಿಂದ ಕೇರಳ ರಾಜ್ಯಕ್ಕೆ ಹೊರಟಿದ್ದ ಮೀನಿನ ಲಾರಿಯ ಟಯರ್ ಸ್ಫೋಟಗೊಂಡು ರಸ್ತೆ ಮೇಲೆಯೇ ಉರುಳಿ ಬಿದ್ದಿದೆ. ಲಾರಿ ಚಾಲಕ ಮತ್ತು ಕ್ಲೀನರ್‍ಗೆ ಸಣ್ಣಪುಟ್ಟು ಗಾಯಗಳಾಗಿವೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಲಾರಿಯಲ್ಲಿ ಸುಮಾರು 9 ಲಕ್ಷ ರೂ. ಮೌಲ್ಯದ ಮಾಕೊಡ ಜಾತಿಯ ಮೀನುಗಳನ್ನು ಸಾಗಿಸಲಾಗುತ್ತಿತ್ತು. ಲಾರಿಯಲ್ಲಿದ್ದ ಮೀನುಗಳನ್ನು ವಿದೇಶಕ್ಕೆ ರಫ್ತು ಮಾಡಲು ಸಾಗಿಸಲಾಗುತಿತ್ತು ಎಂದು ತಿಳಿದು ಬಂದಿದೆ.

ಕಳೆದ ತಿಂಗಳು ಇದೇ ಜಾಗದಲ್ಲಿ ಮೀನಿನ ಲಾರಿ ಬಿದ್ದಾಗ ಅಕ್ಕ ಪಕ್ಕದ ಬಡಾವಣೆಯ ಜನರು ಸುಮಾರು 6 ಲಕ್ಷ ರೂ. ಮೌಲ್ಯದ ಮೀನುಗಳನ್ನು ಹೊತ್ತು ಕೊಂಡು ಹೋಗಿದ್ದರು. ಆದರೆ ಈ ಬಾರಿ ಲಾರಿಯಿಂದ ಮೀನುಗಳು ಹೊರಗೆ ಬಿದ್ದಿಲ್ಲ.

ಸ್ಥಳಕ್ಕೆ ನಗರದ ಸಂಚಾರಿ ಪೊಲೀಸರು ಆಗಮಿಸಿದ್ದು ಕ್ರೇನ್ ಸಹಾಯದಿಂದ ಲಾರಿಯನ್ನು ರಸ್ತೆಯಿಂದ ಮೇಲಕ್ಕೆ ಎತ್ತಲಾಗಿದೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY