Saturday, 16th December 2017

Recent News

ಕಂಪನಿಗಳಿಂದ ನಕಲಿ ಬೀಜ ವಿತರಣೆ- ಹತಾಶೆಯ ತಂದೆಗೆ ಧೈರ್ಯ ತುಂಬಿದ ಪುತ್ರಿ – ಮನ ಮುಟ್ಟಿದ ಬಾಲಕಿ ಸಂದೇಶ

ಮಂಡ್ಯ: ಅಪ್ಪ ನೀನು ಆತ್ಮಹತ್ಯೆ ಮಾಡಿಕೊಂಡು ಸತ್ತರೆ ನಾನೂ ಸಾಯುತ್ತೇನೆ. ನಿಮಗೆ ಬೀಜ ಕಂಪನಿಯಿಂದ ಆಗಿರುವ ಅನ್ಯಾಯವನ್ನು ನಾನು ಚೆನ್ನಾಗಿ ಓದಿ ಐಎಎಸ್ ಆಫೀಸರ್ ಆಗಿ ಸರಿಪಡಿಸುತ್ತೇನೆ ಎಂದು ರೈತನ ಮಗಳು ತಂದೆಯನ್ನು ಸಮಾಧಾನಿಸಿದ ಮನಕಲಕುವ ಘಟನೆ ಮಂಡ್ಯದಲ್ಲಿ ನಡೆದಿದೆ.

ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ, ಚಿನ್ನೇನಹಳ್ಳಿ ಗ್ರಾಮದ ರೈತರಾದ ಶ್ರೀನಿವಾಸ್, ಚನ್ನೇಗೌಡ, ಶಿವರಾಮು, ಲೋಕೇಶ್ ಎಂಬವರು ನೇರಳೆ ಬಣ್ಣದ ಉದ್ದನೆ ಬದನೆಕಾಯಿ ಬಿಡುವ ಬೀಜವನ್ನು ಬಿತ್ತನೆ ಮಾಡಿದ್ದರು. ಹೆಬ್ಬಾಳದಲ್ಲಿರುವ ಶ್ರೀವೆಂಕಟೇಶ್ವರ ಹೈಬ್ರಿಡ್ ಸೀಡ್ಸ್ ಅಂಗಡಿಯವರು, ಚಿನ್ನೇನಹಳ್ಳಿ ಗ್ರಾಮಕ್ಕೆ ಬಂದು ಕಿಯೋನಿಕ್ಸ್ ಬ್ರಿಂಜಾಲ್ ಪಿಪಿಎಲ್ ಕಂಪೆನಿಗೆ ಸೇರಿದ ಉದ್ದನೆಯ ನೇರಳೆ ಬಣ್ಣದ ಬದನೆ ಬೀಜ ನೀಡಿದ್ದರು. ಆದರೆ ಬೀಜ ನೀಡಿದವರು ಮೋಸ ಮಾಡಿದ್ದು ಗಿಡದಲ್ಲಿ ಕಾಯಿಯೇ ಬಿಡುತ್ತಿಲ್ಲ.

ಒಂದೆರೆಡು ಕಾಯಿಯೂ ಕೂಡ ದುಂಡನೇ ಬದನೆಯಾಗಿದ್ದು, ಕಾಯಿಗಳು ಸಂಪೂರ್ಣ ಮುಳ್ಳಿನಿಂದ ಕೂಡಿದೆ ಎಂದು ರೈತರು ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ಬೀಜ ಕೊಟ್ಟವರಿಗೆ ಫೋನ್ ಮಾಡಿ ಕೇಳಿದ್ರೆ ಬೇಜವಬ್ದಾರಿ ಉತ್ತರ ನೀಡುತ್ತಾರೆ. ಈಗಾಗಲೇ ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೆಳೆ ಬೆಳೆದಿದ್ದೇವೆ. ನೇರಳೆ ಬಣ್ಣದ ಬದನೆಗೆ ಮಾರುಕಟ್ಟೆಯಲ್ಲಿ ಕೆಜಿಗೆ 80 ರೂಪಾಯಿ ಬೆಲೆಯಿದೆ. ಈಗ ಕಾಯಿ ಬಿಡಲು ಆರಂಭಿಸಿದ್ದರೆ ಲಕ್ಷಾಂತರ ರೂಪಾಯಿ ಲಾಭ ನೋಡಬಹುದಿತ್ತು. ಆದರೆ ಬೀಜ ಕಂಪನಿಯವರ ಮೋಸಕ್ಕೆ ಬಲಿಯಾಗಿದ್ದೇವೆ ಎಂದು ರೈತರು ಹೇಳುತ್ತಾರೆ.

ನಮಗೆ ನ್ಯಾಯ ಕೊಡಿಸಿ ಎಂದು ಮುಖ್ಯಮಂತ್ರಿಗಳು, ಕೃಷಿ ಇಲಾಖೆ ಅಧಿಕಾರಿಗಳು, ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳಿಗೆ ಪತ್ರ ಮೂಲಕ ಮನವಿ ಮಾಡಿದ್ದೇವೆ. ದಯಾಮರಣವನ್ನೂ ಕೋರಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗುತ್ತಿಲ್ಲ. ನಮಗೆ ಆತ್ಮಹತ್ಯೆಯೊಂದೆ ದಾರಿ ಎಂದು ರೈತರು ಜಮೀನಿನ ಬಳಿ ಕಣ್ಣೀರು ಹಾಕುತ್ತಿದ್ದಾರೆ.

ರೈತ ಶ್ರೀನಿವಾಸ್ ಅವರ ಮಗಳು 11 ವರ್ಷದ ಕೀರ್ತನ, ಅಪ್ಪ ನೀನು ಸತ್ತರೆ ನಾನೂ ಸಾಯುತ್ತೇನೆ. ನಾನು ಮುಂದೆ ಚೆನ್ನಾಗಿ ಓದಿ ಐಎಎಸ್ ಆಫೀಸರ್ ಆಗುತ್ತೇನೆ. ಆಗ ನಿಮಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಕೊಡಿಸುತ್ತೇವೆ ಎಂದು ಅಮಾಯಕವಾಗಿ ಮಾತನಾಡಿದ್ದು ಎಲ್ಲರ ಕಣ್ಣಲ್ಲೂ ನೀರು ತರಿಸಿತ್ತು.

 

 

Leave a Reply

Your email address will not be published. Required fields are marked *