Tuesday, 21st January 2020

Recent News

ನಕಲಿ ನಾಗಾ ಸಾಧುಗಳ ಕೈ ಚಳಕ – ವಶೀಕರಣ ಮಾಡಿ ಯಾಮಾರಿಸ್ತಾರೆ ಕಾವಿ ಕಳ್ಳರು

ಕೊಡಗು: ಭಕ್ತಿಯ ಪರಾಕಾಷ್ಠೆತೆಯೋ ಅಥವಾ ವಶೀಕರಣವೋ ಗೊತ್ತಿಲ್ಲ. ಆದರೆ ಕೊಡಗಿನ ಕುಶಾಲನಗರದಲ್ಲಿ ಫೈನಾನ್ಸ್ ಮಾಲೀಕರೊಬ್ಬರು ನಕಲಿ ನಾಗಾ ಸಾಧುಗಳಿಬ್ಬರ ವಂಚನೆ ವಿದ್ಯೆಗೆ ಬಲಿಯಾಗಿದ್ದಾರೆ.

ಕುಶಾಲನಗರದ ಐಬಿ ರಸ್ತೆಯ ಮಹಿಳಾ ಸಮಾಜದ ಬಿಲ್ಡಿಂಗ್‍ನಲ್ಲಿರುವ ಜನಶ್ರೀ ಮೈಕ್ರೋ ಫೈನಾನ್ಸ್ ಮಾಲೀಕನಿಗೆ ನಾಗಾ ಸಾಧುಗಳ ವೇಷದಲ್ಲಿ ಬಂದ ವ್ಯಕ್ತಿಗಳು ಮೋಸ ಮಾಡಿದ್ದಾರೆ. ನಾವು ಹಿಮಾಚಲ ಪರ್ವತದಿಂದ ಬಂದಿದ್ದೇವೆ. ನಾವು ಮಹಾನ್ ಸಿದ್ಧಿಗಳು, ಕರ್ನಾಟಕಕ್ಕೆ ಬಂದಿದ್ದೇವೆ. ಈಗ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿದ್ದೇವೆ ಅಲ್ಲಿ ಊಟಕ್ಕೆ ನಮಗೆ ಹಣದ ಅಗತ್ಯವಿದೆ ಎಂದು ತಲೆ ಸವರಿ ಸಿಕ್ಕಷ್ಟು ಹಣ ಲಪಟಾಯಿಸಿ ಕಾವೀಧಾರಿ ಸಾಧುಗಳು ಕಾಲ್ಕಿತ್ತಿದ್ದಾರೆ.

ಭಾನುವಾರ ಮಧ್ಯಾಹ್ನ 12 ಗಂಟೆ ವೇಳೆಗೆ ಮೈಕ್ರೋ ಫೈನಾನ್ಸ್ ಗೆ ನಾಗಾ ಸಾಧುಗಳ ವೇಷದಲ್ಲಿ ವಂಚಕರು ಆಗಮಿಸಿದ್ದರು. ಕಾವಿ ತೊಟ್ಟ ನಾಗಾ ಸಾಧುಗಳನ್ನು ಕಂಡೊಡನೆ ಫೈನಾನ್ಸ್ ಮಾಲೀಕ ನಾಗೇಗೌಡರು ಚೆನ್ನಾಗಿಯೇ ಭಕ್ತಿ ತೋರಿಸಿದ್ದರು. ಈ ವೇಳೆ ಸಾಧುಗಳು ಮೊದಲು ಕುಡಿಯಲು ನೀರು ಕೇಳಿ, ಸ್ವಲ್ಪ ಸಮಯದ ನಂತರ ಕೆಂಪು ಕುಂಕುಮ ಹಾಗೂ ರುದ್ರಾಕ್ಷಿಯನ್ನು ನಾಗೇಗೌಡರ ಕೈಗೆ ಕೊಟ್ಟರು. ಕುಂಕುಮವನ್ನು ಎರಡೂ ಕೈಗಳಿಂದ ತಿಕ್ಕಲು ಹೇಳಿ, ಸಾಧುಗಳು ಹೇಳಿದಂತೆ ನಾಗೇಗೌಡರು ಕೇಳುವಂತೆ ವಶೀಕರಣ ಮಾಡಿಕೊಂಡರು. ಬಳಿಕ ಕುತ್ತಿಗೆಯಲ್ಲಿದ್ದ ಚಿನ್ನದ ಸರಕ್ಕೆ ಕೈ ಹಾಕಿದಾಗ ಅದು ಚಿನ್ನವಲ್ಲ ಎಂದು ತಿಳಿದ ಬಳಿಕ ಅದನ್ನು ದೋಚದೆ ಬಿಟ್ಟಿದ್ದಾರೆ.

ನಂತರ ಲಾಕರ್ ನಲ್ಲಿದ್ದ ಸ್ವಲ್ಪ ಹಣ ಹಾಗೂ 23 ಸಾವಿರ ಮೌಲ್ಯದ ಮೊಬೈಲ್‍ವೊಂದನ್ನು ಮಾಲೀಕರಿಂದಲೇ ತೆಗೆದುಕೊಂಡು ಸುಮಾರು ಒಂದೂವರೆ ಅಡಿಯ ಕತ್ತಿಯನ್ನು ಅವರ ಕೈಗೆ ಕೊಟ್ಟು ಮಂತ್ರಿಸಲು ಹೇಳಿ ಪುನಃ ಕತ್ತಿಯನ್ನು ಬಾಯೊಳಗೆ ಹಾಕಿ ಚಮತ್ಕಾರ ಮಾಡಿ ಕಾಲ್ಕಿತ್ತಿದ್ದಾರೆ. ಫೈನಾನ್ಸ್ ಮಾಲೀಕನಿಗೆ ಪರಿವೇ ಇಲ್ಲದಂತೆ ಎಲ್ಲವೂ ನಡೆದು ಹೋಗಿದ್ದು, ಮಾರನೆ ದಿನ ಬೆಳಗ್ಗೆ ಅವರು ಆಫೀಸ್‍ಗೆ ಬಂದು ಸಿಸಿಟಿವಿ ಪರಿಶೀಲಿಸಿದ ಬಳಿಕವೇ ಏನಾಗಿದೆ ಎನ್ನುವುದು ಗೊತ್ತಾಗಿದೆ.

ಅಷ್ಟೇ ಅಲ್ಲ ಈಗ ಈ ನಾಗ ಸಾಧುಗಳು ಮಾಡಿರುವ ವಂಚನೆಗಳು ಒಂದೊಂದಾಗಿ ಬೆಳಕಿಗೆ ಬರುತ್ತಿದೆ. ಹದಿನೈದು ದಿನಗಳ ಹಿಂದೆ ಕುಶಾಲನಗರ ಪಟ್ಟಣದಲ್ಲೇ ಒಂದು ಸ್ಟುಡಿಯೋಗೂ ಇವರು ಬಂದಿದ್ದರು. ಚಿಕ್ಕದೊಂದು ಹಣಕಾಸು ವ್ಯವಹಾರ ಸರಿಮಾಡಿಕೊಡುತ್ತೇವೆ ಎಂದು ನಂಬಿಸಿ ವಶೀಕರಣ ಮಾಡಿ, ಒಂದೂವರೆ ಸಾವಿರ ಲಪಟಾಯಿಸಿ ಕಾಲ್ಕಿತ್ತವರು ಇದೀಗ ಪಟ್ಟಣದಲ್ಲೇ ಮತ್ತೊಬ್ಬರಿಗೂ ಹೀಗೆ ವಶೀಕರಣ ಮಾಡಿ ವಂಚನೆ ಮಾಡಿದ್ದಾರೆ.

ಈಗಾಗಲೇ ವಂಚನೆಗೆ ಒಳಗಾದವರು ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಇಬ್ಬರು ಕಪಟ ನಾಗಾ ಸಾಧುಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ. ಖದೀಮರು ಭಕ್ತಿಯನ್ನೇ ಬಂಡವಾಳ ಮಾಡಿಕೊಂಡು ವಿನೂತನ ಮಾರ್ಗದಲ್ಲಿ ಹಗಲು ದರೋಡೆಗೆ ಕೈ ಹಾಕಿದ್ದಾರೆ.

Leave a Reply

Your email address will not be published. Required fields are marked *