Exclusive : ಐಟಿ ದಾಳಿಯಲ್ಲಿ ಜೈಲು ಸೇರಿದವರಿಗೆ ಸಿದ್ದು ಸರ್ಕಾರದ 73 ಕೋಟಿ ರೂ. ಟೆಂಡರ್ ಭಾಗ್ಯ!

ಬೆಂಗಳೂರು: ಜೈಲಲ್ಲಿ ಕುಳಿತು ಕೊಲೆ ಮಾಡಿಸಿರುವುದನ್ನು ನೀವು ಈ ಹಿಂದೆ ಓದಿರಬಹುದು. ಜೈಲಲ್ಲೇ ಕುಳಿತು ಹಣದ ವ್ಯವಹಾರ ಮಾಡುವುದು, ಹುಡುಗಿಯರನ್ನು ಕರೆಸಿಕೊಂಡು ಮಜಾ ಮಾಡಿರುವ ಸುದ್ದಿಯನ್ನು ನೀವು ಓದಿರಬಹುದು. ಆದರೆ ಈಗ ಬಂದಿರುವ ಹೊಸ ಸುದ್ದಿ ಏನು ಅಂದ್ರೆ ಕೋಟಿ ಕೋಟಿ ಮೌಲ್ಯದ ಸರ್ಕಾರಿ ಗುತ್ತಿಗೆಯನ್ನು ಜೈಲಲ್ಲೇ ಕುಳಿತು ಪಡೆದಿದ್ದಾರೆ.

ಹೌದು. ಜೈಲಿನಲ್ಲೇ ಕುಳಿತು ಬರೋಬ್ಬರಿ 73 ಕೋಟಿ ರೂ. ಮೌಲ್ಯ  ಟೆಂಡರ್ ಕಾಮಗಾರಿ ಡೀಲ್ ಕರ್ನಾಟಕದಲ್ಲಿ ನಡೆದಿದೆ. ಐಟಿ ದಾಳಿಯಲ್ಲಿ ಸಿಕ್ಕಿ ಸಿಬಿಐನಿಂದ ಜೈಲು ಸೇರಿರುವ ರಾಮಲಿಂಗಂ ಕನ್‌ಸ್ಟ್ರಕ್ಷನ್ ಮಾಲೀಕ ರಾಮಲಿಂಗಂ ಚಂದ್ರಕಾಂತ್ ಮತ್ತು ಸಿಸಿಕೆ ಕನ್‌ಸ್ಟ್ರಕ್ಷನ್ ಮಾಲೀಕ ಸಿ ಬಿ ಚಕ್ರವರ್ತಿ ಅವರಿಗೆ ಕೋಟಿ ರೂ. ಮೌಲ್ಯ ಟೆಂಡರ್ ಸಿಕ್ಕಿರುವ ಎಕ್ಸ್ ಕ್ಲೂಸಿವ್ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಹಾರಂಗಿ ಜಲಾಶಯದ 25 ನೇ ಕಿ.ಮೀ ನಿಂದ 60 ನೇ ಕಿ ಮೀ ವರೆಗೂ ಸಿವಿಲ್ ಕಾಮಾಗಾರಿಯನ್ನು ನಡೆಸಲು ರಾಜ್ಯ ಸರ್ಕಾರ ಹಾರಂಗಿ ಬಲದಂಡೆಯ ಯೋಜನೆಗಾಗಿ ಟೆಂಡರ್ ಕರೆದಿತ್ತು. ಈ ಟೆಂಡರ್ ಬಗ್ಗೆ ಮಾಹಿತಿ ತಿಳಿದಿದ್ದ ರಾಮಲಿಂಗಂ ಕನ್ಸ್ ಸ್ಟ್ರಕ್ಷನ್ ಮತ್ತು ಸಿಸಿಕೆ ಕನ್‌ಸ್ಟ್ರಕ್ಷನ್  ಜಾಯಿಂಟ್ ವೆಂಚರ್‍ನಲ್ಲಿ ಅರ್ಜಿ ಸಲ್ಲಿಸಿತ್ತು. ಈ ಟೆಂಡರ್ ಅರ್ಜಿಯನ್ನು ಮಾನ್ಯ ಮಾಡಿದ ಕರ್ನಾಟಕ ಸರ್ಕಾರದ ಇದೇ ಜನವರಿ 11ನೇ ತಾರೀಖು ಅಂದರೆ ಬುಧವಾರ ಚಂದ್ರಕಾಂತ್ ರಾಮಲಿಂಗಂ ಮಾಲೀಕತ್ವದ ಕಂಪೆನಿಗೆ ಗುತ್ತಿಗೆಗೆ ಅನುಮೋದನೆ ನೀಡಿದೆ.

ಜೈಲು ಸೇರಿದ್ರು ಗುತ್ತಿಗೆ ಸಿಕ್ತು:
ಚಂದ್ರಕಾಂತ್ ರಾಮಲಿಂಗಂ 16 ಕೋಟಿ ಬ್ಲಾಕ್ ಮನಿಯನ್ನು ವೈಟ್ ಮನಿಯನ್ನಾಗಿ ಮಾಡಿದ ಹಿನ್ನೆಯಲ್ಲಿ ಡಿಸೆಂಬರ್ 4ರಂದು ಸಂಜೆ ಸಿಬಿಐ ಅಧಿಕಾರಿಗಳು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಅಕ್ರಮದಲ್ಲಿ ಸಿಕ್ಕಿ ಬಿದ್ದು ಕಂಪನಿಯ ಮಾಲೀಕನೇ ಜೈಲು ಸೇರಿದರೆ ಆತನ ಕಂಪೆನಿಯನ್ನು ಬ್ಲಾಕ್ ಲಿಸ್ಟ್ ಸೇರಿಸುವುದು ಬಿಟ್ಟು, ರಾಜ್ಯ ಸರ್ಕಾರ 73 ಕೋಟಿ ರೂ. ಟೆಂಡರ್‍ಗೆ ಅನುಮೋದನೆ ನೀಡಿದ್ದು ಸಾಕಷ್ಟು ಪ್ರಶ್ನೆಗಳನ್ನು ಈಗ ಹುಟ್ಟುಹಾಕಿದೆ.

ಸಿಸಿಕೆ ಕಂಪೆನಿಗೆ ಇದೆ ಬ್ಲಾಕ್ ಮಾರ್ಕ್..!
ಅನುಮೋದನೆ ನೀಡೋದಕ್ಕೂ ಮೊದಲೇ ಸಿಸಿಕೆ ಕಂಪನಿಯ ವಿರುದ್ಧ ನಾನಾ ಆರೋಪಗಳು ಕೇಳಿ ಬಂದಿತ್ತು. ಮುಖ್ಯ ಎಂಜಿನಿಯರ್ ಒಬ್ಬರು ಸಿಸಿಕೆ ಕಂಪನಿ ಸಿವಿಲ್ ಕೆಲಸ ಮಾಡಲಿಕ್ಕೆ ಅನರ್ಹ ಎಂದು ಹೇಳಿದ್ದರು. ಆದರೆ ಸಿದ್ದು ಆಪ್ತ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕರಾಗಿದ್ದ ಚಿಕ್ಕರಾಯಪ್ಪ ಮೂಗು ತೂರಿಸಿ ಸಿಸಿಕೆ ಕಂಪನಿ ಕೆಲಸ ಮಾಡುವುದಕ್ಕೆ ಯೋಗ್ಯವಾಗಿದೆ ಎಂದು ಪ್ರಮಾಣಪತ್ರ ಕೊಟ್ಟಿದ್ದರು.

8 ತಿಂಗಳಲ್ಲಿ ಕಾಮಗಾರಿ ಮುಗಿಯಬೇಕು..!
ಟೆಂಡರ್ ಕೊಟ್ಟಿರುವ ಸರ್ಕಾರ 8 ತಿಂಗಳ ಒಳಗಾಗಿ ಕಾಮಗಾರಿಯನ್ನು ಮುಗಿಸ್ಬೇಕು ಅಂತ ಸೂಚನೆಯನ್ನು ಬೇರೆ ನೀಡಿದೆ. ಮೊದಲನೆಯದಾಗಿ ಚಂದ್ರಕಾಂತ್ ಯಾವಾಗ ರಿಲೀಸ್ ಆಗುತ್ತಾರೆ ಎನ್ನುವುದೇ ತಿಳಿದಿಲ್ಲ. ಈ ನಡುವೆ ಸರ್ಕಾರ ಗಡುವು ನೀಡಿದ್ದು ಯಾಕೆ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಈ ಗುತ್ತಿಗೆ ಪಡೆಯಲು ಇದೊಂದೆ ಕಂಪೆನಿ ಅರ್ಜಿ ಸಲ್ಲಿಸಿತ್ತು ಎನ್ನುವ ಮಾಹಿತಿ ಪಬ್ಲಿಕ್ ಟಿವಿಗೆ ಸಿಕ್ಕಿದೆ.

ಪ್ರತಿಕ್ರಿಯೆ ಇಲ್ಲ: ಪಬ್ಲಿಕ್ ಟಿವಿಯಲ್ಲಿ ಈ ಎಕ್ಸ್ ಕ್ಲೂಸಿವ್ ಸುದ್ದಿ ಬೆಳಗ್ಗೆ ಸ್ಫೋಟಗೊಂಡ ಬಳಿಕ ಇದೂವರೆಗೂ ಸರ್ಕಾರದಿಂದ ಪ್ರತಿಕ್ರಿಯೆ ಬಂದಿಲ್ಲ. ಸುದ್ದಿ ಪ್ರಸಾರದ ವೇಳೆ ಕಾವೇರಿ ನೀರಾವರಿ ನಿಗಮದ ಆಡಳಿತ ನಿರ್ದೇಶಕ ಬಿ.ಶಿವಶಂಕರ್ ಅವರಿಗೆ ಕರೆ ಸಾಕಷ್ಟು ಬಾರಿ ಕರೆ ಮಾಡಿದರೂ ಅವರು ಫೋನ್ ಸ್ವೀಕರಿಸಿಲ್ಲ.

LEAVE A REPLY