ಕೇಂದ್ರ ಸಚಿವ ಅನಿಲ್ ಮಾಧವ್ ದವೆ ನಿಧನ- ಪ್ರಧಾನಿ ಮೋದಿ ಸಂತಾಪ

ನವದೆಹಲಿ: ಕೇಂದ್ರ ಅರಣ್ಯ ಹಾಗೂ ಪರಿಸರ ಖಾತೆ ಸಚಿವ ಅನಿಲ್ ಮಾಧವ್ ದವೆ ಇಂದು ಬೆಳಗ್ಗೆ ನಿಧನ ಹೊಂದಿದ್ದಾರೆ.

61 ವರ್ಷ ವಯಸ್ಸಿನ ಸಚಿವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಕೂಡಲೇ ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಹೃದಯಾಘಾತವಾಗಿ, ಇಂದು ಮೃತಪಟ್ಟಿದ್ದಾರೆ.

2009ರಿಂದ ರಾಜ್ಯಸಭಾ ಸದಸ್ಯರಾಗಿರುವ ಇವರು 2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಕೇಂದ್ರ ಅರಣ್ಯ ಹಾಗೂ ಪರಿಸರ ಖಾತೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದರು. ಇದೀಗ ಸಚಿವರ ಅಕಾಲಿಕ ನಿಧನಕ್ಕೆ ಪ್ರಧಾನಿ ಮೋದಿ, ರಾಷ್ಟ್ರಪತಿ ಪ್ರಣವ್ ಮುಖರ್ಜಿ ಸೇರಿದಂತೆ ಗಣ್ಯಾತಿ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಸಚಿವರ ಅಕಾಲಿಕ ನಿಧನ ನಿಜಕ್ಕೂ ಆಘಾತ ತಂದಿದೆ. ದೇವರು ಅವರ ಕುಟುಂಬಸ್ಥರಿಗೆ ದುಃಖ ಭರಿಸೋ ಶಕ್ತಿ ನೀಡಲಿ ಅಂತಾ ರಾಷ್ಟ್ರಪತಿಯವರು ಸಂತಾಪ ಸೂಚಿಸಿದ್ದಾರೆ.

`ಗೌರವಾನ್ವಿತ ಸಹೋದ್ಯೋಗಿ, ಸ್ನೇಹಿತ, ಪರಿಸರ ಸಚಿವ ಅನಿಲ್ ಮಾಧವ್ ದವೆ ಅವರ ನಿಧನದಿಂದ ಆಘಾತವಾಗಿದೆ. ಸಂತಾಪಗಳು’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

`ದವೆ ಅವರೊಬ್ಬ ಉತ್ತಮ ಸಾರ್ವಜನಿಕ ಸೇವಕ. ಪರಿಸರ ರಕ್ಷಣೆಯ ಬಗ್ಗೆ ಅವರಿಗೆ ಅತೀವ ಕಾಳಜಿ ಇತ್ತು’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

`ನಿನ್ನೆ ಸಂಜೆಯಷ್ಟೇ ಅವರ ಬಳಿ ಪ್ರಮುಖ ವಿಷಯಗಳ ಬಗ್ಗೆ ಅವರ ಜತೆ ಮಾತುಕತೆ ನಡೆಸಿದ್ದೆ. ಅವರ ನಿಧನದಿಂದ ನನಗೆ ವೈಯಕ್ತಿಕವಾಗಿಯೂ ನಷ್ಟವಾಗಿದೆ’ ಎಂದು ಮೋದಿ ಹೇಳಿದ್ದಾರೆ.

ಕೇಂದ್ರ ಸಚಿವ ಅನಿಲ್ ದವೆ ನಿಧನಕ್ಕೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಸಂತಾಪ ಸೂಚಿಸಿದ್ದು, `ಅನಿಲ್ ದವೆ ನಿಧನ ಆಘಾತ ತಂದಿದೆ. ಪ್ರಬುದ್ಧ ಮಾತುಗಾರ, ಮಾನವೀಯ ವ್ಯಕ್ತಿಯಾಗಿದ್ರು ದವೆ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಅಂತಾ ಪತ್ರದ ಮೂಲಕ ತಿಳಿಸಿದ್ದಾರೆ.

ಅನಿಲ್ ಮಾಧವ್ ದವೆ ಅವರು ಜುಲೈ 6, 1956 ರಂದು ಮಧ್ಯಪ್ರದೇಶದ ಬದ್ ನಗರ್ ನಲ್ಲಿ ಜನಿಸಿದ್ದರು.

You might also like More from author

Leave A Reply

Your email address will not be published.

badge