Wednesday, 20th June 2018

ಗಂಡಾನೆ ದಾಳಿಯಿಂದ 1 ಕಣ್ಣು ಕಳೆದುಕೊಂಡು ಗುಂಪಿನಿಂದ ಬೇರ್ಪಟ್ಟ ಹೆಣ್ಣಾನೆ- ಅರಣ್ಯ ಇಲಾಖೆಯಿಂದ ರಕ್ಷಣಾ ಕಾರ್ಯ

ಕಾರವಾರ: ಗಾಯಗೊಂಡು ಗುಂಪಿನಿಂದ ಬೇರ್ಪಟ್ಟ ಹೆಣ್ಣಾನೆಯೊಂದು ಕಾಡಿನಿಂದ ನಾಡಿಗೆ ಬಂದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿ ನಡೆದಿದೆ.

ಇಲ್ಲಿನ ಬಿಸಲಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಉಳ್ಳಾಲದಲ್ಲಿ ಕಾಣಿಸಿಕೊಂಡ ಹೆಣ್ಣಾನೆ ಜನರನ್ನು ಭಯಭೀತಗೊಳಿಸಿತ್ತು. ಹತ್ತು ವರ್ಷದ ಹೆಣ್ಣಾನೆಯೊಂದು ಗಂಡಾನೆಯ ದಾಳಿಯಿಂದಾಗಿ ತನ್ನ ಒಂದು ಕಣ್ಣನ್ನು ಕಳೆದುಕೊಂಡಿದ್ದಲ್ಲದೇ ದೇಹದ ತುಂಬಾ ತಿವಿದ ಗಾಯಗಳಾಗಿದ್ದು, ಕಾಡಿನಲ್ಲಿ ಗುಂಪಿನೊಂದಿಗೆ ಹೋಗಲಾರದೇ ನಾಡಿಗೆ ಬಂದಿದೆ.

ಕಳೆದ ಎರಡು ದಿನಗಳಿಂದ ಉಳ್ಳಾಲದ ಹಳ್ಳಿಗಳಲ್ಲಿ ಆನೆ ಸಂಚರಿಸುತ್ತಿರುವುದನ್ನು ಗಮನಿಸಿದ ಗ್ರಾಮದ ಜನ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಇದೀಗ ಅರಣ್ಯ ಸಿಬ್ಬಂದಿ ಗಾಯಗೊಂಡಿರುವ ಹೆಣ್ಣಾನೆಯನ್ನು ಹಿಡಿಯಲು ಮುಂದಾಗಿದೆ. ಶಿವಮೊಗ್ಗ ಜಿಲ್ಲೆಯ ಸಕ್ರೇಬೈಲಿನಿಂದ ಡಾ.ವಿನಯ್ ರವರ ನೇತೃತ್ವದಲ್ಲಿ ವಿಶೇಷ ಪರಿಣಿತಿ ತಂಡವನ್ನ ಕರೆಸಲಾಗಿದೆ.

ಸದ್ಯ ಪ್ರಾಥಮಿಕವಾಗಿ ಆನೆಗೆ ಮದ್ದು ನೀಡಲಾಗಿದ್ದು ಮಧ್ಯಾಹ್ನದ ಬಳಿಕ ಆನೆಯನ್ನು ಹಿಡಿದು ಸಕ್ರೆಬೈಲಿನ ಆನೆ ಬಿಡಾರಕ್ಕೆ ಕೊಂಡೊಯ್ದು ಚಿಕಿತ್ಸೆ ನೀಡಲಿದ್ದಾರೆ.

Leave a Reply

Your email address will not be published. Required fields are marked *