ದೈಹಿಕ ಶಿಕ್ಷಣ ಶಿಕ್ಷಕರು, ಚಿತ್ರಕಲಾ ಶಿಕ್ಷಕರಿಗೆ ವೇತನ ಹಚ್ಚಳ ಮಾಡದೇ ತಾರತಮ್ಯ: ಎಸ್ ವಿ ಸಂಕನೂರ

ಧಾರವಾಡ: ಸರಕಾರಿ ಹಾಗೂ ಅನುದಾನಿತ ಪ್ರೌಢಶಾಲಾ ಶಾಲಾ ಶಿಕ್ಷಕರಿಗೆ ರಾಜ್ಯ ಸರ್ಕಾರ ನೀಡಿದ ವಿಶೇಷ ಹೆಚ್ಚುವರಿ ಬಡ್ತಿ ವಿಚಾರ ತಾರತಮ್ಯ ಧೋರಣೆಯಿಂದ ಕೂಡಿದ್ದು, ಈ ಬಗ್ಗೆ ಹಲವಾರು ಬಾರಿ ಇಲಾಖೆಯ, ಸರಕಾರದ ಗಮನ ಸೆಳೆದಾಗ್ಯೂ ತಾರತಮ್ಯ ನಿವಾರಣೆಗೆ ಸರ್ಕಾರ ಮುಂಂದಾಗದಿರುವುದು ವಿಷಾದಕರ ಸಂಗತಿ ಎಂದು ವಿಧಾನ ಪರಿಷತ್ ಸದಸ್ಯ ಎಸ್ ವಿ ಸಂಕನೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2016ರ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮೌಲ್ಯಮಾಪನದಲ್ಲಿ ಮುಷ್ಕರ ನಿರತ ಸಹ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರಿಗೆ ಮಾತ್ರ ವಿಶೇಷ ಹೆಚ್ಚುವರಿ ವೇತನ ಮಂಜೂರು ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಪ್ರೌಢಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ದೈಹಿಕ ಶಿಕ್ಷಣ ಶಿಕ್ಷಕರು, ಚಿತ್ರಕಲಾ ಶಿಕ್ಷಕರು, ವೃತ್ತಿ ಶಿಕ್ಷಕರು ಹಾಗೂ ಶಿಕ್ಷಕ ಹುದ್ದೆಗೆ ಸಮಾನವಾಗಿ ಕೆಲಸ ನಿರ್ವಹಿಸುತ್ತಿರುವ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳೆಲ್ಲ ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ ಬೇಸರ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಇಂತಹ ನೌಕರರು ಸುಮಾರು 20 ಸಾವಿರದಷ್ಟಿದ್ದು, ಅವರೆಲ್ಲಾ ಅನೇಕ ಬಾರಿ ಸರ್ಕಾರಕ್ಕೆ ಸಂಘಟನೆಗಳ ಮುಖಾಂತರವಾಗಿ ಮನವಿ ಸಲ್ಲ್ಲಿಸಿದ್ದಾರೆ. ಶಿಕ್ಷಕ ಹಾಗೂ ಪದವೀಧರ ಕ್ಷೇತ್ರದ ಪ್ರತಿನಿಧಿಗಳಾದ ನಾವೆಲ್ಲ ಕೂಡಾ ಈ ಬಗ್ಗೆ ಹಲವಾರು ಬಾರಿ ಸರ್ಕಾರದ ಗಮನ ಸೆಳೆದಿದ್ದು, ಇದುವರೆಗೂ ಆದೇಶ ಆಗದಿರುವುದು ನೋವಿನ ಸಂಗತಿ ಎಂದು ತಿಳಿಸಿದ್ದಾರೆ.

ಶಿಕ್ಷಕರು ಪುನ: ಬೀದಿಗಿಳಿದು ಹೋರಾಟ ಮಾಡುವ ಮುನ್ನವೇ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡು ಹೆಚ್ಚುವರಿ ವೇತನ ಬಡ್ತಿಯಲ್ಲಿನ ತಾರತಮ್ಯ ನಿವಾರಣೆ ಮಾಡಲು ಮುಂದಾಗಬೇಕೆಂದು ಎಸ್.ವಿ. ಸಂಕನೂರ ಹೇಳಿದರು.

LEAVE A REPLY