Monday, 24th February 2020

Recent News

ಪತ್ನಿಯ ಪ್ರಾಣ ಉಳಿಸಿ ಶೇ.90 ರಷ್ಟು ಭಾಗ ಸುಟ್ಟು ಹೋದ ಪತಿ

– ಸಾವು, ಬದುಕಿನ ಮಧ್ಯೆ ಆಸ್ಪತ್ರೆಯಲ್ಲಿ ಹೋರಾಟ

ದುಬೈ: 32 ವರ್ಷದ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮೂಲದ ಭಾರತೀಯ ವ್ಯಕ್ತಿಯೊಬ್ಬ ಬೆಂಕಿ ಅನಾಹುತದಿಂದ ಪತ್ನಿಯನ್ನು ರಕ್ಷಿಸಲು ಹೋಗಿ ಶೇ.90 ರಷ್ಟು ಭಾಗ ಸುಟ್ಟು ಹೋಗಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

ದುಬೈನ ಉಮ್ ಅಲ್ ಕ್ವೈನ್‍ನಲ್ಲಿರುವ ಅಪಾರ್ಟ್ ಮೆಂಟ್‍ನಲ್ಲಿ ಈ ಘಟನೆ ನಡೆದಿದೆ. ಪತಿ ಅನಿಲ್ ನಿನಾನ್ ಶೇ.90 ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದು, ಅಬುಧಾಬಿಯ ಮಾಫ್ರಾಕ್ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಮೂಲತಃ ಕೇರಳ ದಂಪತಿಯಾಗಿದ್ದು, ಇವರಿಗೆ ನಾಲ್ಕು ವರ್ಷದ ಮಗನಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಅನಿಲ್ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ ನಾವೆಲ್ಲರೂ ಅವರಿಗಾಗಿ ಪ್ರಾರ್ಥಿಸುತ್ತಿದ್ದೇವೆ. ಅನಿಲ್ ಪತ್ನಿ ನೀನೂ ಕೂಡ ಅದೇ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಅವರ ಆರೋಗ್ಯ ಸುಧಾರಣೆಯಾಗಿದೆ. ಆಕೆಗೆ ಕೇವಲ ಶೇ.10ರಷ್ಟು ಭಾಗ ಮಾತ್ರ ಸುಟ್ಟು ಗಾಯಗಳಾಗಿತ್ತು. ಈಗ ಆಕೆ ಮಾತನಾಡುತ್ತಿದ್ದಾಳೆ ಎಂದು ಆಸ್ಪತ್ರೆಯಲ್ಲಿರುವ ಅನಿಲ್ ನಿನಾನ್ ಅವರ ಸಂಬಂಧಿಯೊಬ್ಬರು ತಿಳಿಸಿದ್ದಾರೆ.

ಸೋಮವಾರ ರಾತ್ರಿ ಈ ಅವಘಡ ಸಂಭವಿಸಿದೆ. ಉಮ್ ಅಲ್ ಕ್ವೈನ್‍ನಲ್ಲಿರುವ ದಂಪತಿಯ ಅಪಾರ್ಟ್ ಮೆಂಟ್‍ನ ಕಾರಿಡಾರ್‌ನಲ್ಲಿ ಇರಿಸಲಾಗಿದ್ದ ವಿದ್ಯುತ್ ಬಾಕ್ಸ್‌ನಿಂದ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ಶಂಕಿಸಲಾಗಿದೆ. ಸೋಮವಾರ ರಾತ್ರಿ ದಂಪತಿಯನ್ನು ಉಮ್ ಅಲ್ ಕ್ವೈನ್‍ನ ಶೇಖ್ ಖಲೀಫಾ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳವಾರ ಅಬುಧಾಬಿಯ ಮಾಫ್ರಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯಕ್ಕೆ ನಮಗೆ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ. ಕಾರಿಡಾರ್‌ನಲ್ಲಿ ಮೊದಲು ನೀನುಗೆ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಬೆಡ್‍ರೂಮಿನಲ್ಲಿದ್ದ ಅನಿಲ್ ಓಡಿ ಬಂದು ತನ್ನ ಪತ್ನಿಯನ್ನು ಬೆಂಕಿಯಿಂದ ರಕ್ಷಿಸಿದ್ದಾರೆ. ಆದರೆ ಇದೇ ವೇಳೆ ಅನಿಲ್‌ಗೆ ಬೆಂಕಿ  ಹೊತ್ತಿಕೊಂಡಿದೆ ಎಂದು ಇನ್ಸ್‌ಪೆಕ್ಟರ್ ಹೇಳಿದ್ದಾರೆ.

Leave a Reply

Your email address will not be published. Required fields are marked *