Wednesday, 23rd May 2018

Recent News

ಜೈಲಿನಲ್ಲೇ ಕುಳಿತು ಉದ್ಯಮಿಗೆ ಬೆದರಿಕೆ ಕರೆ- 20 ಲಕ್ಷಕ್ಕೆ ಬೇಡಿಕೆ ಇಟ್ಟ ಸಜಾ ಕೈದಿ

ಮೈಸೂರು: ಜೈಲಿನಿಂದಲೇ ಸಜಾ ಕೈದಿಯೋಬ್ಬ ಉದ್ಯಮಿಗೆ ಬೆದರಿಕೆ ಕರೆ ಮಾಡಿ 20 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿರುವ ಆತಂಕಕಾರಿ ಘಟನೆಯೊಂದು ಮೈಸೂರು ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.

ಜೈಲಿನ ಸಜಾ ಕೈದಿ ಬಸವರಾಜ್ ಅಲಿಯಾಸ್ ಬಸವ ಎಂಬಾತ ಬೆದರಿಕೆ ಕರೆ ಮಾಡಿದ್ದಾನೆ. ಈತ ಮಂಡ್ಯ ಮೂಲದ ಉದ್ಯಮಿ ಚಂದ್ರಶೇಖರ್ ಎಂಬವರಿಗೆ ಕರೆ ಮಾಡಿ 20 ಲಕ್ಷ ರೂ. ನೀಡು, ಇಲ್ಲ ಅಂದರೆ ಪರಿಣಾಮ ನೆಟ್ಟಗಿರಲ್ಲ ಎಂದು ಬೆದರಿಸಿದ್ದಾನೆ. ಇದರಿಂದ ಹೆದರಿದ ಉದ್ಯಮಿ ಮಂಡ್ಯ ಡಿವೈಎಸ್‍ಪಿಗೆ ದೂರು ನೀಡಿದ್ದಾರೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ದೂರವಾಣಿ ಕರೆಯ ಜಾಡು ಹಿಡಿದು ಹೊರಟ ಪೊಲೀಸರಿಗೆ ಆತಂಕಕಾರಿ ವಿಷಯ ಗೊತ್ತಾಗಿದೆ. ಜೈಲಿನಿಂದಲೇ ಕರೆ ಬಂದಿರುವುದು ನೆಟ್‍ವರ್ಕ್‍ನಿಂದ ಪತ್ತೆಯಾಗಿದೆ. ನಂತರ ಸಿಸಿಬಿ ಪೊಲೀಸರು ಹಾಗೂ ಮೈಸೂರಿನ ಮಂಡಿ ಪೊಲೀಸರ ನೇತೃತ್ವದಲ್ಲಿ ಜೈಲಿನೊಳಗೆ ಹೋಗಿ ಯಾರು ಕರೆ ಮಾಡಿದ್ದರು ಎಂಬ ಬಗ್ಗೆ ತನಿಖೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಜೈಲಿನ ಸಜಾ ಕೈದಿ ಬಸವರಾಜ್ ಬ್ಯಾಗ್‍ನಲ್ಲಿ ಒಂದು ನೋಕಿಯಾ ಕಂಪನಿಯ ಮೊಬೈಲ್ ಪತ್ತೆಯಾಗಿದೆ. ಇದಲ್ಲದೇ 135 ಗ್ರಾಂ ಗಾಂಜಾ ಹಾಗೂ ವಿವಿಧ ಕಂಪನಿಯ ಸಿಮ್ ಕಾರ್ಡ್‍ಗಳು ಪತ್ತೆಯಾಗಿವೆ. ಈ ಸಿಮ್ ಕಾರ್ಡ್ ಹಾಗೂ ಗಾಂಜಾ ಕೈದಿಗಳಿಗೆ ಹೇಗೆ ಸಿಗುತ್ತದೆ ಎಂಬುದನ್ನು ತಿಳಿಯಲು ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಮತ್ತೊಂದು ಆಘಾತಕಾರಿ ಸಂಗತಿ ಎದುರಾಗಿದೆ. ಜೈಲಿನ ಕೈದಿಗಳಿಗೆ ಮುದ್ದೆ ಹಾಗೂ ಅನ್ನದಲ್ಲಿ ಸಿಮ್ ಕಾರ್ಡ್ ಹಾಗೂ ಗಾಂಜಾ ಬರುವುದಾಗಿ ಗೊತ್ತಾಗಿ ಪೊಲೀಸರೇ ಶಾಕ್ ಆಗಿದ್ದಾರೆ. ಈ ಮೂಲಕ ಮೈಸೂರು ಜೈಲಿನಲ್ಲೂ ಕೈದಿಗಳು ಆಕ್ರಮ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂಬುದು ಬಹಿರಂಗವಾಗಿದೆ.

 

Leave a Reply

Your email address will not be published. Required fields are marked *