ಪಾಸ್ ಇದ್ರೂ ಇಳಿಸಿದ, ಇಂಗ್ಲಿಷ್ ಮಾತನಾಡಿದ್ದಕ್ಕೆ ಕಿರಿಕ್: ಬಿಎಂಟಿಸಿ ಕಂಡಕ್ಟರ್ ವಿರುದ್ಧ ಯುವತಿ ದೂರು

ಬೆಂಗಳೂರು: ಇಂಗ್ಲಿಷ್‍ನಲ್ಲಿ ಮಾತನಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಮತ್ತು ಬಸ್ ಪಾಸ್ ಇದ್ದರೂ ಪ್ರಯಾಣಿಕರನ್ನು ಬಲವಂತವಾಗಿ ಇಳಿಸಿದ್ದಕ್ಕೆ ಬಿಎಂಟಿಸಿ ಕಂಡಕ್ಟರ್ ವಿರುದ್ಧ ಯುವತಿಯೊಬ್ಬರು ನಗರ ಪೊಲೀಸರಿಗೆ ದೂರು ನೀಡಿದ್ದಾರೆ.

ಕಳೆದ ಶುಕ್ರವಾರ ಬನ್ನೇರುಘಟ್ಟದಿಂದ ಕೋರಮಂಗಲ ಕಡೆಗೆ ಸಂಚರಿಸುತ್ತಿದ್ದ ಬಸ್ ಕಂಡಕ್ಟರ್ ಮೇಲೆ ಈ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಯುವತಿ ಬೆಂಗಳೂರು ಪೊಲೀಸರಿಗೆ ಫೇಸ್‍ಬುಕ್‍ನಲ್ಲಿ ದೂರು ನೀಡಿದ್ದಾರೆ.

ದೂರಿನಲ್ಲಿ ಏನಿದೆ?
ಏಪ್ರಿಲ್ 14 ರಂದು ಸಂಜೆ 4.30ರ ವೇಳೆ ನಾನು ನನ್ನ ಸಹೋದರಿ ಮತ್ತು ಸ್ನೇಹಿತೆಯ ಜೊತೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಿಂದ ಕೋರಮಂಗಲಕ್ಕೆ ಹೋಗುವ ಕೆಎ 01 – ಎಫ್‍ಎ- 2274 ನಂಬರ್‍ನ ಬಸ್ಸಿನಲ್ಲಿ ಹತ್ತಿ ಪ್ರಯಾಣಿಸುತ್ತಿದ್ವಿ. ಮೂವರ ಬಳಿ ಒಂದು ದಿನ ಬಿಎಂಟಿಸಿ ಬಸ್ ಪಾಸ್ ಇತ್ತು. ಬಸ್‍ನಲ್ಲಿ ನಾವು ಅಧ್ಯಯನ ವಿಚಾರವಾಗಿ ಇಂಗ್ಲಿಷ್‍ನಲ್ಲಿ ಮಾತನಾಡುತ್ತಿದ್ದಾಗ, ಕಂಡಕ್ಟರ್ ನಮಗೆ ಜೋರು ಮಾಡಿದ. ಯಾಕೆ ಏನಾಯ್ತು ಎಂದು ಪ್ರಶ್ನಿಸಿದ್ದಕ್ಕೆ, ಇಂಗ್ಲಿಷ್‍ನಲ್ಲಿ ಮಾತನಾಡುವುದನ್ನು ನಿಲ್ಲಿಸಿ ಎಂದು ಹೇಳಿದ. ಕಂಡಕ್ಟರ್ ಮಾತು ಕೇಳಿ ನಮಗೆ ಶಾಕ್ ಆಯ್ತು.

ಈ ವೇಳೆ ನಾನು ನಮ್ಮ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ನಮಗೆ ಇಷ್ಟವಾದ ಭಾಷೆಯಲ್ಲಿ ವ್ಯವಹಾರ ಮಾಡುವುದನ್ನು ನಿಲ್ಲಿಸಲು ಯಾರಿಗೂ ಸಾಧ್ಯವಿಲ್ಲ. ಅಷ್ಟೇ ಅಲ್ಲದೇ ನಾವು ಇಲ್ಲಿ ಜಗಳ ಮಾಡುತ್ತಿಲ್ಲ. ಯಾರಿಗೂ ತೊಂದರೆ ಕೊಡುತ್ತಿಲ್ಲ ಎಂದು ಹೇಳಿ ನಾವು ಮತ್ತೆ ಮಾತನಾಡಲು ತೊಡಗಿದ್ವಿ. ಈ ವೇಳೆ ಬಸ್ ಪಾಸ್ ಯಾರ ಜೊತೆ ಇದೆಯೋ ಅವರೆಲ್ಲ ಇಳಿಯಿರಿ. ಪಾಸ್ ಇರುವ ಮಂದಿಗೆ ಬಸ್ ನಲ್ಲಿ ಪ್ರಯಾಣಿಸಲು ಅನುಮತಿ ನೀಡಲ್ಲ ಎಂದು ಹೇಳಿದ. ಈ ವೇಳೆ ಕೆಲ ಪ್ರಯಾಣಿಕರನ್ನು ಯಾವುದೇ ಕಾರಣ ಇಲ್ಲದೇ ಬಲವಂತವಾಗಿ ಇಳಿಸಿದ. ನಮ್ಮಲ್ಲಿ ಬಸ್ ಪಾಸ್ ಇದ್ದರೂ ನಾವು ಇಳಿಯಲೇ ಇಲ್ಲ. ಈ ಪಾಸ್ ಮೂಲಕ ಎಸಿ ಅಲ್ಲದ ಬಸ್‍ನಲ್ಲಿ ದಿನವಿಡಿ ಸಂಚರಿಸಲು ನಿಯಮ ಇರುವ ಕಾರಣ ನಾವು ಇಳಿಯಲಿಲ್ಲ. ನಾವು ಡೈರಿ ಸರ್ಕಲ್ ವರೆಗೆ ಪ್ರಯಾಣಿಸಿದ ಬಳಿಕ ಬೇರೆ ಬಸ್ ಬದಲಾಯಿಸಿದ್ವಿ.

ಕಂಡಕ್ಟರ್ ಕರ್ತವ್ಯದ ವೇಳೆ ನಿಯಮವನ್ನು ಉಲ್ಲಂಘಿಸಿದ್ದಾನೆ. ಆದರೆ ಬಸ್ ಕಂಡಕ್ಟರ್ ಈ ನಿಯಮವನ್ನು ಉಲ್ಲಂಘಿಸಿದ್ದು ಯಾಕೆ? ಆತನ ಪಾಕೆಟ್‍ನಲ್ಲಿ ಚಿಲ್ಲರೇ ಇದ್ದರೂ ಹಲವು ಮಂದಿಗೆ ಚಿಲ್ಲರೆ ನೀಡಿಲ್ಲ. ಅಷ್ಟೇ ಅಲ್ಲದೇ ಇಂಗ್ಲಿಷ್ ನಲ್ಲಿ ಮಾತನಾಡಿದ್ದಕ್ಕೆ ನಮ್ಮ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ಹೀಗಾಗಿ ಆತನ ಫೋಟೋವನ್ನು ಇಲ್ಲಿ ನೀಡಿದ್ದು ಆತನ ಮೇಲೆ ಕ್ರಮವನ್ನು ಕೈಗೊಳ್ಳಬೇಕೆಂದು ನಾನು ವಿನಂತಿ ಮಾಡಿಕೊಳ್ಳುತ್ತೇನೆ.

You might also like More from author

Leave A Reply

Your email address will not be published.

badge