Wednesday, 20th June 2018

Recent News

ಕಾಮಿಡಿ ಕಿಲಾಡಿಯ ನಗೆ ಚಿಲುಮೆ ನಯನಾಗೆ ದರ್ಶನ್ ಕೊಟ್ರು ಆಫರ್

ಬೆಂಗಳೂರು: ಖಾಸಗಿ ವಾಹಿನಿ ‘ಕಾಮಿಡಿ ಕಿಲಾಡಿ’ ರಿಯಾಲಿಟಿ ಶೋ ಸ್ಪರ್ಧಿ ನಯನಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ‘ಯಜಮಾನ’ ಸಿನಿಮಾದಲ್ಲೊಂದು ಅವಕಾಶ ನೀಡಿದ್ದಾರೆ.

ಅದ್ಭುತ ನಟನೆಯ ಮೂಲಕ ಎಲ್ಲರ ಮನ ಗೆದ್ದಿದ್ದ ನಯನಾ ಇಂದು ಚಂದನವನದಲ್ಲಿ ಸಿಕ್ಕಾಪಟ್ಟೆ ಬ್ಯೂಸಿಯಾಗಿದ್ದಾರೆ. ಇತ್ತೀಚೆಗೆ ನಯನಾ ಅವರು ನಟಿಸಿದ ‘ಜಂತರ್ ಮಂತರ್’ ಸಿನಿಮಾ ಬಿಡುಗಡೆಗೊಂಡಿತ್ತು. ಚಿತ್ರದಲ್ಲಿ ನಯನಾ ನಟನೆ ವಿಮರ್ಶಕರ ಮೆಚ್ಚುಗೆಗೂ ಪಾತ್ರವಾಗಿತ್ತು. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಿರ್ಮಾಣದ ಸಿನಿಮಾದಲ್ಲಿಯೂ ನಯನಾ ನಟಿಸುತ್ತಿದ್ದಾರೆ. ನಯನ ನಿಖಿಲ್‍ಕುಮಾರ್ ಅಭಿನಯದ ‘ಸೀತಾರಾಮ ಕಲ್ಯಾಣ’ ಮತ್ತು ವಿನಯ್ ರಾಜ್‍ಕುಮಾರ್ ನಟನೆಯ ‘ಅನಂತು ವರ್ಸಸ್ ನುಸ್ರತ್’ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ.

ಶುಕ್ರವಾರ ದರ್ಶನ್ ಹುಟ್ಟುಹಬ್ಬದಂದು ‘ಯಜಮಾನ’ ಸಿನಿಮಾ ಟೈಟಲ್ ಘೋಷಣೆ ಮಾಡಲಾಗಿದೆ. ಚಿತ್ರದಲ್ಲಿ ದರ್ಶನ್ ಜೊತೆಯಾಗಿ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಬಣ್ಣ ಹಚ್ಚಲಿದ್ದಾರೆ. ಸಂಕ್ರಾಂತಿ ಹಬ್ಬದಂದು ನಗರದ ಚಂದ್ರಾಲೇಔಟ್ ನಲ್ಲಿಯ ಗಣಪತಿ ದೇವಸ್ಥಾನದಲ್ಲಿ ಯಜಮಾನ ಚಿತ್ರದ ಮುಹೂರ್ತ ಸರಳವಾಗಿ ನಡೆದಿತ್ತು.

ಸದ್ಯ ದರ್ಶನ್ ಕುರುಕ್ಷೇತ್ರ ಚಿತ್ರದಲ್ಲಿ ಬ್ಯೂಸಿಯಾಗಿದ್ದು, ಇದೇ ತಿಂಗಳ ಕೊನೆಯ ವಾರದಲ್ಲಿ ‘ಯಜಮಾನ’ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಪಿ.ಕುಮಾರ್ ನಿರ್ದೇಶನದಲ್ಲಿ ಚಿತ್ರ ಮೂಡಿಬರುತ್ತಿದ್ದು, ಹರಿಕೃಷ್ಣರ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಮೋಡಿ ಮಾಡಲಿವೆ. ನಟ ಧನಂಜಯ್, ರವಿಶಂಕರ್ ಮತ್ತು ಟಾಲಿವುಡ್‍ನ ಖ್ಯಾತ ಖಳನಟ ಠಾಕೂರ್ ಅನೂಪ್ ಸಿಂಗ್ ಸೇರಿದಂತೆ ಹಲವು ಕಲಾವಿದರು ಯಜಮಾನ ಚಿತ್ರದಲ್ಲಿ ನಟಿಸಲಿದ್ದಾರೆ.

Leave a Reply

Your email address will not be published. Required fields are marked *