ಬಳ್ಳಾರಿಯ ಈ ಕಾಲೇಜಿನ ವಿದ್ಯಾರ್ಥಿಗಳು ಪಕ್ಷಿಗಳ ನೀರಡಿಕೆಗೆ ಮಾಡಿದ್ರು ಸೂಪರ್ ಐಡಿಯಾ!

ಬಳ್ಳಾರಿ: ಜಿಲ್ಲೆ ಇದೀಗ ಅಕ್ಷರಶಃ ಕಾಯ್ದ ಕೆಂಡವಾಗಿದೆ. ಬಿರುಬಿಸಿಲಿನಿಂದ ಜನರು ಹೈರಾಣಾಗಿ ಹೋಗಿದ್ದಾರೆ. ಜನರು ಸೇರಿದಂತೆ ಜಾನುವಾರುಗಳು ಕೂಡ ನೀರಿಗೆ ಪರಿತಪಿಸುವಂತಾಗಿದೆ. ಪಕ್ಷಿಗಳ ಪರಿಸ್ಥಿತಿಯಂತೂ ಹೇಳತೀರದೂ, ಹೀಗಾಗಿ ಬಳ್ಳಾರಿಯ ಕಾಲೇಜು ವಿದ್ಯಾರ್ಥಿಗಳು ಈ ಬಾರಿ ಕಾಲೇಜಿನ ಆವರಣದಲ್ಲಿನ ಗಿಡಮರಗಳಲ್ಲಿ ಮಡಿಕೆಯಿಟ್ಟು ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡುವ ಮೂಲಕ ಪಕ್ಷಿ ಪ್ರೇಮ ಮೆರೆದಿದ್ದಾರೆ.

ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಇದೀಗ ಫೇಸ್ ಬುಕ್, ವಾಟ್ಸಪ್‍ನಲ್ಲೆ ಹೆಚ್ಚು ಕಾಲ ಕಳೆಯೋದು ರೂಢಿಯಾಗಿದೆ. ಆದ್ರೆ ಬಳ್ಳಾರಿಯ ಸರಳಾದೇವಿ ಕಾಲೇಜಿನ ವಿದ್ಯಾರ್ಥಿಗಳು ಮಾತ್ರ ಸ್ವಲ್ಪ ವಿಭಿನ್ನ ಎನ್ನುವುದನ್ನ ಇದೀಗ ತೋರಿಸಿಕೊಟ್ಟಿದ್ದಾರೆ. ಯಾಕಂದ್ರೆ ಈ ಬಾರಿಯ ಬಿರುಬಿಸಿಲಿನಲ್ಲಿ ಪಕ್ಷಿಗಳು ನೀರಿಗಾಗಿ ಪರಿತಪಿಸುವುದನ್ನು ನೋಡಿದ ವಿದ್ಯಾರ್ಥಿಗಳು ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಿದ್ದಾರೆ. ಸರಳಾದೇವಿ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಕ್ಯಾಂಪಸ್‍ನಲ್ಲಿನ ಗಿಡಮರಗಳಲ್ಲಿ ಮಡಿಕೆಯಿಟ್ಟು ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಿರುವುದು ವಿಶೇಷವಾಗಿದೆ.

ಬಳ್ಳಾರಿಯಲ್ಲಿರೋ ಈ ಕಾಲೇಜಿನ ಆವರಣದಲ್ಲಿ ಬರೋಬ್ಬರಿ 70ಕ್ಕೂ ಹೆಚ್ಚು ವಿವಿಧ ಗಿಡಮರಗಳಿವೆ. ತಂಪಾಗಿ ಸೊಂಪಾಗಿರುವ ಈ ಎತ್ತರದ ಗಿಡಗಳಲ್ಲಿ ನೂರಾರು ತರಹದ ಪಕ್ಷಿಗಳಿವೆ. ಈ ಪಕ್ಷಿಗಳಿಗೆ ವಿದ್ಯಾರ್ಥಿಗಳು ಎತ್ತರದ ಗಿಡಮರಗಳಲ್ಲೆ ಮಡಿಕೆ ಕಟ್ಟಿ ನೀರಿನ ವ್ಯವಸ್ಥೆ ಮಾಡಿದ್ದಾರೆ. ಕಾಲೇಜಿನ ವಿಶ್ರಾಂತಿ ಸಮಯದಲ್ಲಿ ವಿದ್ಯಾರ್ಥಿಗಳು ಗಿಡಗಳು ಮತ್ತು ಕಾಲೇಜಿನ ಟೇರಸ್ ಮೇಲಿನ ಮಡಿಕೆಗಳಿಗೆ ನೀರು ಹಾಕಿ ಪಕ್ಷಿಗಳಿಗೆ ನೀರುಣಿಸುವ ಕಾರ್ಯ ವ್ಯವಸ್ಥೆ ಮಾಡಿದ್ದಾರೆ, ಇದೂ ಕಾಲೇಜಿನ ಆಡಳಿತ ಮಂಡಳಿಯ ಪ್ರಶಂಸೆಗೆ ಕಾರಣವಾಗಿದೆ.

ಕಾಲೇಜಿನ ಎನ್‍ಎಸ್‍ಎಸ್, ಎನ್‍ಸಿಸಿ ವಿದ್ಯಾರ್ಥಿಗಳು ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮರೆದಿರುವುದು ನಿಜಕ್ಕೂ ವಿಶೇಷವಾಗಿದೆ. ಈ ವಿದ್ಯಾರ್ಥಿಗಳ ಪಕ್ಷಿ ಪ್ರೇಮ ಇನ್ನಿತರ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾದರಿಯಾಗಲಿ ಅನ್ನೋದು ನಮ್ಮ ಆಶಯವಾಗಿದೆ.

You might also like More from author

Leave A Reply

Your email address will not be published.

badge