Monday, 18th June 2018

Recent News

ಒಂದೂವರೆ ವರ್ಷದ ಕಂದಮ್ಮನ ಮೇಲೆ ರೇಪ್ – ಮನೆಯೊಳಗಿಂದ್ಲೇ ಕೇರ್ ಟೇಕರ್ ಬಂಧನ

ನವದೆಹಲಿ: ತಂದೆ-ತಾಯಿ ಇಬ್ಬರೂ ಕೆಲಸದಲ್ಲಿದ್ದರೆ ಮಕ್ಕಳನ್ನು ನೋಡಿಕೊಳ್ಳಲೆಂದು ಆಳುಗಳನ್ನು ನೇಮಿಸುತ್ತಾರೆ. ಹೀಗೆ ನೇಮಕಗೊಂಡ ವ್ಯಕ್ತಿಯೇ 18 ತಿಂಗಳ ಪುಟ್ಟ ಕಂದಮ್ಮನ ಮೇಲೆ ಅತ್ಯಾಚಾರವೆಸಗಿರೋ ಶಾಕಿಂಗ್ ಘಟನೆ ರಾಜಧಾನಿಯಲ್ಲಿ ನಡೆದಿದೆ.

ದಕ್ಷಿಣ ದೆಹಲಿಯ ಶಾಹಪುರ್ ಜಾಟ್ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಕ್ಕಳ ದಿನಾಚರಣೆಯ ಹಿಂದಿನ ದಿನವಾದ ಸೋಮವಾರ ಈ ಘಟನೆ ನಡೆದಿದ್ದು, ಇಂದು ವರದಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆಳಕಿಗೆ ಬಂದಿದ್ದು ಹೇಗೆ?: ತನ್ನ ಪುಟ್ಟ ಕಂದಮ್ಮನನ್ನು ನೋಡಿಕೊಳ್ಳಲೆಂದು ಮಗುವಿನ ತಂದೆ ಪ್ರಖ್ಯಾತ ಉದ್ಯೋಗ ಸಂಸ್ಥೆಯಿಂದ ವ್ಯಕ್ತಿಯೊಬ್ಬನನ್ನು ಕೆಲಸಕ್ಕೆ ನೇಮಕ ಮಾಡಿಕೊಂಡಿದ್ದರು. ಆದ್ರೆ ಅದೇ ವ್ಯಕ್ತಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಆರೋಪಿಯ ನೀಚ ಕೃತ್ಯದಿಂದ ಪುಟ್ಟ ಕಂದಮ್ಮನ ಸ್ಥಿತಿ ಚಿಂತಾನಜನಕವಾಗಿದ್ದು, ಸದ್ಯ ನಗರದ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಸೋಮವಾರ ಮಧ್ಯಾಹ್ನದ ಬಳಿಕ ತಾಯಿ ಮನೆಗೆ ಬಂದು ನೋಡಿದಾಗ ಮಗುವಿನ ಖಾಸಗಿ ಭಾಗದಲ್ಲಿ ರಕ್ತಸ್ರಾವವಾಗುತ್ತಿತ್ತು. ಪುಟ್ಟ ಮಗುವಿಗೆ ರಕ್ತಸ್ರಾವವಾಗುತ್ತಿರುವುದನ್ನು ಕಂಡು ಹೌಹಾರಿದ ತಾಯಿ ಆತಂಕ ಹಾಗೂ ಗಾಬರಿಗೊಂಡು ಕೂಡಲೇ ಆರೋಪಿಯನ್ನು ಪ್ರಶ್ನಿಸಿದ್ದಾರೆ. ತನ್ನ ಪತಿಗೂ ಈ ವಿಚಾರ ತಿಳಿಸಿದ್ದಾರೆ. ಬಳಿಕ ಆರೋಪಿಯಿದ್ದ ಕೋಣೆಯ ಬಾಗಿಲಿಗೆ ಬೀಗ ಜಡಿದು ಪೊಲೀಸರಿಗೆ ಮಾಹಿತಿ ನೀಡಿದ್ರು.

ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮನೆಯೊಳಗಿನಿಂದಲೇ ಆರೋಪಿಯನ್ನು ಬಂಧಿಸಿ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಇತ್ತ ಮಗುವನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಘಟನೆ ಸಂಬಂಧ ಆರೋಪಿ ವಿರುದ್ಧ ಹಾಜ್ ಖಾಸ್ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *