Tuesday, 10th December 2019

ಕಿರುತೆರೆಗೆ ಎಂಟ್ರಿ – ಶೋ ನಿರೂಪಕರಾಗಿ ದಚ್ಚು

ಬೆಂಗಳೂರು: ಸ್ಯಾಂಡಲ್‍ವುಡ್‍ನ ಅನೇಕ ಸ್ಟಾರ್ ನಟರು ಕಿರುತೆರೆಗೆ ಎಂಟ್ರಿ ಕೊಟ್ಟಿದ್ದು, ಶೋಗಳಲ್ಲಿ ನಿರೂಪಕರಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ನಟ ದರ್ಶನ್ ಕಿರುತೆರೆಗೆ ಪಾದಾರ್ಪಣೆ ಮಾಡುತ್ತಿದ್ದು, ಖಾಸಗಿ ವಾಹಿನಿಯಲ್ಲಿ ಹೊಸದಾಗಿ ಶೋವೊಂದು ಶುರುವಾಗುತ್ತಿದೆ. ಈ ಕಾರ್ಯಕ್ರಮದ ನಿರೂಪಣೆಯನ್ನು ನಟ ದರ್ಶನ್ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಯಾವ ವಾಹಿನಿ? ಯಾವ ಶೋ ಎಂಬುದು ಇನ್ನೂ ನಿಖರವಾಗಿ ತಿಳಿದು ಬಂದಿಲ್ಲ.

ಈ ಹಿಂದೆ ದರ್ಶನ್ ಕಿರುತೆರೆಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೇ ‘ವೀಕೆಂಡ್ ವಿತ್ ರಮೇಶ್’, ‘ಮಜಾ ಟಾಕೀಸ್’ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಆದರೆ ಇದೇ ಮೊದಲ ಬಾರಿಗೆ ಶೋವೊಂದರ ನಿರೂಪಣೆಯನ್ನು ಮಾಡಲಿದ್ದಾರೆ.

ನಟ ದರ್ಶನ್‍ಗೆ ಕಿರುತೆರೆ ಏನು ಹೊಸದಲ್ಲ. ಯಾಕೆಂದರೆ ಎಸ್.ನಾರಾಯಣ್ ನಿರ್ದೇಶನದ ಧಾರಾವಾಹಿಯಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು. ಹೀಗಾಗಿ ದರ್ಶನ್ ಕಿರುತೆರೆಯಿಂದಲೇ ಬೆಳ್ಳಿತೆರೆಗೆ ಬಂದು ಇಂದು ಡಿ-ಬಾಸ್ ಆಗಿ ಮಿಂಚುತ್ತಿದ್ದಾರೆ. ಸದ್ಯಕ್ಕೆ ದರ್ಶನ್, ಒಡೆಯ, ರಾಬರ್ಟ್ ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ.

ಈಗಾಗಲೇ ವೀಕೆಂಡ್ ವಿತ್ ರಮೇಶ್ ಮೂಲಕ ರಮೇಶ್ ಅರವಿಂದ್, ಬಿಗ್‍ಬಾಸ್ ಮೂಲಕ ಸುದೀಪ್, ಕನ್ನಡದ ಕೋಟ್ಯಧಿಪತಿಯಲ್ಲಿ ಪುನೀತ್, ಸೂಪರ್ ಮಿನಿಟ್‍ನಲ್ಲಿ ಗಣೇಶ್ ಸೇರಿದಂತೆ ಶಿವಣ್ಣ, ರವಿಚಂದ್ರನ್, ಜಗ್ಗೇಶ್, ರಚಿತಾ ರಾಮ್, ರಕ್ಷಿತಾ ಪ್ರೇಮ್, ವಿಜಯ್ ರಾಘವೇಂದ್ರ ಹೀಗೆ ಅನೇಕರು ಕಿರುತೆರೆ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *