Sunday, 24th June 2018

Recent News

ಮರಕ್ಕೆ ಡಿಕ್ಕಿಯಾಗಿ ಹೊತ್ತಿ ಉರಿದ ಬಿಎಂಡಬ್ಲ್ಯೂ- ಕಾರ್ ರೇಸರ್ ಅಶ್ವಿನ್, ಪತ್ನಿ ಸಾವು

ಚೆನ್ನೈ: ಅಂತರಾಷ್ಟ್ರೀಯ ಕಾರ್ ರೇಸಿಂಗ್ ಚಾಂಪಿಯನ್ ಅಶ್ವಿನ್ ಸುಂದರ್ ಹಾಗೂ ಅವರ ಪತ್ನಿ ಕಾರು ಅಪಘಾತದಲ್ಲಿ ನಿಧನರಾಗಿದ್ದಾರೆ.

ಚೆನ್ನೈನ ಪಟ್ಟಿನಪಕ್ಕಂ ಪ್ರದೇಶದಲ್ಲಿ ಶನಿವಾರದಂದು ಈ ದುರ್ಘಟನೆ ಸಂಭವಿಸಿದೆ. ಅಶ್ವಿನ್ ಹಾಗೂ ಅವರ ಪತ್ನಿ ಪ್ರಯಾಣಿಸುತ್ತಿದ್ದ ಬಿಎಂಡಬ್ಲ್ಯೂ ಕಾರ್ ಮರಕ್ಕೆ ಡಿಕ್ಕಿ ಹೊಡೆದಿದ್ದು, ಬೆಂಕಿಯಿಂದ ಹೊತ್ತಿ ಉರಿದಿದೆ.

27 ವರ್ಷದ ಅಶ್ವಿನ್ 2012 ಮತ್ತು 2013ರಲ್ಲಿ ಎಲ್‍ಜಿಬಿ ಎಫ್4 ಕ್ಯಾಟಗರಿಯ ರಾಷ್ಟ್ರೀಯ ಚಾಂಪಿಯನ್ ಆಗಿದ್ದರು. ಇವರ ಹೆಂಡತಿ 26 ವರ್ಷದ ನಿವೇದಿತಾ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ರು.

ಘಟನೆಯ ವೀಡಿಯೋವನ್ನ ಪ್ರತ್ಯಕ್ಷದರ್ಶಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಕಾರಿಗೆ ಬೆಂಕಿ ಹೊತ್ತಿಕೊಂಡು ಜೋರಾಗಿ ಉರಿಯುತ್ತಿದ್ದರಿಂದ ದಂಪತಿಯನ್ನು ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ ಎಂಧು ಹೇಳಿದ್ದಾರೆ. ಮಧ್ಯರಾತ್ರಿ ಸುಮಾರು 1.51ರ ವೇಳೆಗೆ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಲಾಗಿದ್ದು, ಅವರು ಬರುವಷ್ಟರಲ್ಲಿ ದಂಪತಿ ಸಾವನ್ನಪ್ಪಿದ್ದರು ಎಂದು ವರದಿಯಾಗಿದೆ.

ನಾವು ಬಂದಾಗ ಬೆಂಕಿ ಇನ್ನೂ ಉರಿಯುತ್ತಿತ್ತು. ದಂಪತಿ ಒಳಗೆ ಇದ್ದಾರೆ ಎಂದು ಗೊತ್ತಿರಲಿಲ್ಲ. ಸುಮಾರು 16 ನಿಮಿಷಗಳಲ್ಲಿ ಬೆಂಕಿ ನಂದಿಸಿದೆವು. ನಂತರ ಅವರಿಬ್ಬರೂ ಒಳಗೆ ಸಿಲುಕಿಕೊಂಡಿರುವುದು ಗೊತ್ತಾಯಿತು. ಮಹಿಳೆಯ ಕಾಲು ಸಿಲುಕಿಕೊಂಡಿತ್ತು. ಕಾರಿನ ಡ್ರೈವರ್ ಸೀಟ್ ಕೂಡ ಜಖಂಗೊಂಡಿದ್ದರಿಂದ ಅಶ್ವಿನ್ ಅವರಿಗೆ ಚಲಿಸಲು ಸಾಧ್ಯವಾಗಿಲ್ಲ ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಬಗ್ಗೆ ತನಿಖೆ ಆರಂಭವಾಗಿದ್ದು, ಅತಿ ವೇಗದ ಚಾಲನೆಯೇ ಈ ಅಪಘಾತಕ್ಕೆ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Leave a Reply

Your email address will not be published. Required fields are marked *