ಲಕ್ನೋ: 12 ನೇ ತರಗತಿಯ ಹುಡುಗಿಯನ್ನ ಅಪಹರಿಸಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿ, ಕೊಲೆ ಮಾಡಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ ನಡೆದಿದೆ.
ಜನವರಿ 2 ರಂದು ಸಂಜೆ ಟ್ಯೂಷನ್ಗೆ ಹೋಗಿ ಮನೆಗೆ ಹಿಂದಿರುಗಿ ಬರುವ ಸಂದರ್ಭದಲ್ಲಿ ನಾಪತ್ತೆಯಾಗಿದ್ದಳು. ಆದರೆ ಎರಡು ದಿನಗಳ ಬಳಿಕ ಅಂದರೆ ಮಂಗಳವಾರ ರಾತ್ರಿ ಹುಡುಗಿಯ ಮೃತ ದೇಹ ಬುಲಂದ್ಶಹರ್ನ ಕೆರೆಯಲ್ಲಿ ಪತ್ತೆಯಾಗಿದೆ.
ದುಷ್ಕರ್ಮಿಗಳು ಹುಡುಗಿಯನ್ನ ಕಿಡ್ನಾಪ್ ಮಾಡುವ ದೃಶ್ಯ ಸಿಸಿವಿಟಿಯಲ್ಲಿ ಸೆರೆಯಾಗಿದ್ದು, ಹುಡುಗಿ ಸೈಕಲ್ ಹಿಡಿದು ಮನೆಗೆ ಹೋಗುತ್ತಿದ್ದಳು. ಈ ಸಂದರ್ಭದಲ್ಲಿ ಅಲ್ಟೋ ಕಾರಲ್ಲಿ ಬಂದ ದುಷ್ಕರ್ಮಿಗಳು ಆಕೆಯನ್ನು ಎಳೆದು ಕಾರಿನಲ್ಲಿ ಕೂರಿಸಿಕೊಂಡು ವೇಗವಾಗಿ ಕಾರು ಚಲಾಯಿಸಿಕೊಂಡು ಹೋಗಿದ್ದಾರೆ. ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಕಂಡುಬಂದಿದೆ.
ಹುಡುಗಿ ಅಪಹರಣವಾದ ಎರಡು ದಿನಗಳ ಬಳಿಕ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಆಕೆಯನ್ನು ಕೊಲೆ ಮಾಡುವ ಮೊದಲು ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿ ನಂತರ ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ ಇನ್ನು ಖಚಿತವಾಗಿಲ್ಲ. ಹುಡುಗಿಯ ಶವವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಪ್ರಕರಣವನ್ನು ದಾಖಲಿಸಿಕೊಂಡು ಪೊಲೀಸ್ ತಂಡ ತನಿಖೆ ನಡೆಸುತ್ತಿದೆ. ಈ ಪ್ರಕರಣದ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಮೇಲ್ವೀಚಾರಣೆ ನಡೆಸುತ್ತಿದ್ದಾರೆ ಎಂದು ಎಸ್ಪಿ ಪ್ರವೀಣ್ ರಂಜನ್ ಸಿಂಗ್ ತಿಳಿಸಿದರು. ಉತ್ತರ ಪ್ರದೇಶ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಶಂಕಿತರ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.