Thursday, 19th April 2018

ಸ್ಮಶಾನದಿಂದ ಬದುಕಿ ಬಂದಿದ್ದ ಬಾಲಕ ಮತ್ತೆ ಮಸಣಕ್ಕೆ

ಹುಬ್ಬಳ್ಳಿ: 20 ದಿನಗಳ ಹಿಂದೆ ಸ್ಮಶಾನದಿಂದ ಸಾವನ್ನು ಗೆದ್ದು ಬಂದಿದ್ದ ಬಾಲಕ ಇವತ್ತು ಮತ್ತೆ ಮಸಣ ಸೇರಿದ್ದಾನೆ.

ಕುಮಾರ್ ಮರಡಿ (16) ಇಂದು ಮಸಣ ಸೇರಿದ ಬಾಲಕ. ಕುಮಾರ್‍ಗೆ ಫೆಬ್ರವರಿ 19 ರಂದು ಬೀದಿ ನಾಯಿ ಕಚ್ಚಿತ್ತು. ಸೂಕ್ತ ಚಿಕಿತ್ಸೆ ಪಡೆಯದ ಕಾರಣ ನಂಜಾಗಿ ಮೂರ್ಛೆ ಹೋಗಿದ್ದನು. ಬಳಿಕ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲು ಮಾಡಲಾಗಿತ್ತು. ಆದ್ರೆ ಚಿಕಿತ್ಸೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ವೈದ್ಯರು ಕುಮಾರನನ್ನು ಮನೆಗೆ ತೆಗೆದುಕೊಂಡು ಹೋಗುವಂತೆ ಸೂಚಿಸಿದ್ದರು.

ಕುಮಾರ್ ಉಸಿರಾಟ ಹಾಗು ನಾಡಿಮಿಡಿತ ನಿಂತಿರುವುದನ್ನು ಗಮನಿಸಿದ ಪೋಷಕರು ಆತ ಮೃತಪಟ್ಟಿದ್ದಾನೆ ಎಂದು ಅಂತ್ಯಸಂಸ್ಕಾರಕ್ಕೆ ಮನಗುಂಡಿ ಗ್ರಾಮದಲ್ಲಿ ಸಿದ್ಧತೆ ಮಾಡಿಕೊಂಡಿದ್ರು. ಆದ್ರೆ ಅಚ್ಚರಿ ಎಂಬಂತೆ ಸ್ಮಶಾನಕ್ಕೆ ಸಾಗಿಸುವ ಮಾರ್ಗ ಮಧ್ಯೆ ಕುಮಾರ್ ಉಸಿರಾಟ ಆರಂಭಿಸಿದ್ದನು.

ಕುಮಾರ್ ಉಸಿರಾಟ ಕ್ರಿಯೆ ಆರಂಭಿಸುತ್ತಿದ್ದಂತೆ ಪೋಷಕರು ಹುಬ್ಬಳ್ಳಿಯ ಸುಚಿರಾಯ್ ಆಸ್ಪತ್ರೆಗೆ ದಾಖಲಿಸಿದ್ದರು. ಕುಮಾರನನ್ನು ತೀವ್ರ ನಿಗಾ ಘಟಕ (ಐಸಿಯು)ದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಕುಮಾರ್ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.

 

Leave a Reply

Your email address will not be published. Required fields are marked *