Tuesday, 24th April 2018

ಬೆಳಗಾವಿ, ಬಾಗಲಕೋಟೆಯಲ್ಲಿ ಅಮಿತ್ ಶಾ ಪ್ರಚಾರ – ಮೊಳಕಾಲ್ಮೂರಲ್ಲಿ ರಾಮುಲು ಮೊದಲ ಸಂಚಾರ

ಬೆಳಗಾವಿ, ಬಳ್ಳಾರಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಇಂದು ಬೆಳಗಾವಿ, ಬಾಗಲಕೋಟೆಯಲ್ಲಿ ಪ್ರಚಾರ ಮಾಡಲಿದ್ದಾರೆ.

ಬೆಳಗ್ಗೆ 9 ಗಂಟೆ ಸುಮಾರಿಗೆ ಹುಬ್ಬಳ್ಳಿ ಖಾಸಗಿ ಹೊಟೇಲ್‍ನಿಂದ ಹೊರಡುವ ಅಮಿತ್ ಶಾ ಅವರು ಬೆಳಗಾವಿಯ ಕಿತ್ತೂರು ನಗರದಲ್ಲಿರುವ ರಾಣಿ ಚೆನ್ನಮ್ಮಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ನಂತರ ಸಂಗೋಳ್ಳಿ ರಾಯಣ್ಣ ಅವರ ಸಮಾಧಿ ಸ್ಥಳ ನಂದಗಡಕ್ಕೆ ಭೇಟಿ ನೀಡಿ ಅಲ್ಲಿ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ. ತದನಂತರ ಬಾಗಲಕೋಟೆಯ ಮುಧೋಳ ನಗರಕ್ಕೆ ಪ್ರಯಾಣ ಬೆಳೆಸಿ, ನಗರದ ದಾನಮ್ಮ ದೇವಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.

ವೀರಶೈವ ಕಲ್ಯಾಣ ಮಂಟಪದ ಆವರಣದಲ್ಲಿ ಶಕ್ತಿ ಸಮಾವೇಶ ನಡೆಯಲಿದ್ದು, 3 ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ. ಮಧ್ಯಾಹ್ನ 3.25ಕ್ಕೆ ಗೋಕಾಕ್ ನಗರದಲ್ಲಿ ರೋಡ್ ಶೋ ನಡೆಸಲಿದ್ದಾರೆ. ಅಲ್ಲಿಂದ ಬೆಳಗಾವಿಯ ಕೆಎಲ್‍ಇ ಯ ಜೀರಗೆ ಭವನದಲ್ಲಿ ವಿಧ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರಾತ್ರಿ 9 ಘಂಟೆಗೆ ಬೆಳಗಾವಿ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮುಖಾಂತರ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

ರಾಮುಲು ಪ್ರಚಾರ: ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಸದ ಶ್ರೀರಾಮುಲು ಇಂದಿನಿಂದ ಅಧಿಕೃತವಾಗಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಅಭ್ಯರ್ಥಿಯಾದ ನಂತರ ಮೊದಲ ಬಾರಿಗೆ ಮೊಳಕಾಲ್ಮೂರು ಕ್ಷೇತ್ರಕ್ಕೆ ಭೇಟಿ ಕೊಡ್ತಿದ್ದು, ಬೆಳಗ್ಗೆ ಇಲ್ಲಿನ ನಾಯಕನಹಟ್ಟಿ ತಿಪ್ಪೇಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.

ನಾಯಕನಹಟ್ಟಿ, ನೆಲಗತ್ತನಹಟ್ಟಿ, ಗೌರಿಪುರ, ತಳಕು ಸೇರಿದಂತೆ ಇಂದು 15 ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ದೇವಾಲಯಗಳಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ಸ್ಥಳಿಯ ಮುಖಂಡರ ಜೊತೆ ಮಾತುಕತೆ ನಡೆಸಲಿದ್ದಾರೆ. ಇನ್ನು ಈ ಕ್ಷೇತ್ರದ ಟಿಕೆಟ್ ವಂಚಿತ ಹಾಲಿ ಶಾಸಕ ತಿಪ್ಪೇಸ್ವಾಮಿ ಬೆಂಬಲಿಗರು ರಾಮುಲು ಆಗಮನದ ವೇಳೆ ಪ್ರತಿಭಟನೆ ನಡೆಸುವ ಸಾಧ್ಯತೆಯಿದೆ ಎಂಬುದಾಗಿ ತಿಳಿದುಬಂದಿದೆ.

Leave a Reply

Your email address will not be published. Required fields are marked *